ಆಡಳಿತ-ವಿಪಕ್ಷ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಸ್ಪೀಕರ್ ರಮೇಶ್‌ಕುಮಾರ್

Update: 2019-02-14 13:37 GMT

ಬೆಂಗಳೂರು, ಫೆ.14: ಅಧಿವೇಶನದಲ್ಲಿ ನಾನು ಇಂತಹ ನಡವಳಿಕೆಯನ್ನು ಬಯಸಿರಲಿಲ್ಲ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವಾಗಲಿ, ವಿರೋಧಪಕ್ಷಗಳೇ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಡೆದುಕೊಳ್ಳಬೇಕು ಎಂದು ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ನೀತಿ ಪಾಠ ಮಾಡಿದರು.

ಗುರುವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಧರಣಿಯನ್ನು ಮುಂದುವರೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕುಮಾರ್, ಸದನದಲ್ಲಿ ಇಂತಹ ವಾತಾವರಣ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಕಾರಣ? ಆಡಳಿತ ಪಕ್ಷದವರೋ, ವಿರೋಧ ಪಕ್ಷದವರೋ ಗೊತ್ತಿಲ್ಲ. ಇಲ್ಲಿ ಬಜೆಟ್ ಮಂಡನೆಯಾಗಿ ಅನುಮೋದನೆ ಸಿಕ್ಕಿದೆ ಎಂದು ನಾನು ಹೆಮ್ಮೆ ಪಡುವುದಿಲ್ಲ ಎಂದರು.

ನಮ್ಮ ಸ್ವಂತ ಹಣವನ್ನು ಖರ್ಚು ಮಾಡಲು ಎಷ್ಟು ಯೋಚನೆ ಮಾಡುತ್ತೇವೆ. ಅದೇ ರೀತಿ ಜನ ಸಾಮಾನ್ಯರ ಕೋಟ್ಯಂತರ ರೂ.ತೆರಿಗೆ ಹಣವನ್ನು ಖರ್ಚು ಮಾಡುವಾಗಲೂ ನಾವು ಯೋಚಿಸಬೇಕಲ್ಲ. ಮನೆಗಾಗಿ ಒಂದು ವಸ್ತು ಖರೀದಿ ಮಾಡಬೇಕಾದರೆ ಹತ್ತಾರು ಅಂಗಡಿಗಳಿಗೆ ಹೋಗಿ ವಿಚಾರಿಸುತ್ತೇವೆ. ಅದೇ ರೀತಿ ಕೂಲಿ ಕಾರ್ಮಿಕರ ತೆರಿಗೆ ಹಣವನ್ನು ಖರ್ಚು ಮಾಡುವಾಗಲೂ ಯೋಚಿಸಬೇಕಲ್ಲವೇ ಎಂದು ಅವರು ಹೇಳಿದರು.

  ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯರು, ಅಧಿವೇಶನ ಸುಗಮವಾಗಿ ನಡೆಯದಿರಲು ನಾವು ಕಾರಣರಲ್ಲ, ಸರಕಾರ ಕಾರಣ ಎಂದರು. ಆಗ ಮಾತು ಮುಂದುವರೆಸಿದ ಸ್ಪೀಕರ್, ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ನಡೆಯದಿರಲು ನಾನು ಯಾವುದೇ ಒಂದು ಪಕ್ಷವನ್ನು ದೂಷಿಸುತ್ತಿಲ್ಲ. ಪಕ್ಷಾತೀತವಾಗಿ ಇಡೀ ಸದನಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

 ಅಧಿವೇಶನ ಸರಿಯಾಗಿ ನಡೆಯುವ ಹೊಣೆಯನ್ನು ಈ ಸದನದ ಪ್ರತಿಯೊಬ್ಬ ಸದಸ್ಯರು ಹೊರಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರಾದ ಎಂ.ಪಿ.ರೇಣುಕಾಚಾರ್ಯ, ವಿ.ಸುನೀಲ್ ಕುಮಾರ್ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ ಮಾತನಾಡಲು ಆರಂಭಿಸಿದರಿಂದ ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.

ಯಾವ ಸೀಮೆ ಶಾಸಕರು ಇದ್ದೀರಿ ನೀವು. ಸ್ವಲ್ಪನಾದರೂ ಪರಿಜ್ಞಾನ ಇರಬೇಕಾಗುತ್ತದೆ. ಯಾರ್ರೀ ಇವರು. ಇವರನ್ನೆಲ್ಲಾ ಯಾರು ಇಲ್ಲಿಗೆ ಕಳುಹಿಸುತ್ತಾರೆ, ನಾನು ಹೇಳುವುದನ್ನು ಕೇಳುವಷ್ಟು ಸೌಜನ್ಯವೂ ಇಲ್ಲವೇ ನಿಮ್ಮಲ್ಲಿ. ಜನ ನಿಮ್ಮನ್ನೆಲ್ಲಾ ಚುನಾಯಿಸಿ ಕಳುಹಿಸಿದ್ದಾರಲ್ಲ ಎಂದು ಬೇಸರ ವ್ಯಕ್ತಪಡಿಸಿದ ರಮೇಶ್ ಕುಮಾರ್, ರಾಷ್ಟ್ರಗೀತೆಯೊಂದಿಗೆ ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ವಿಧೇಯಕಗಳ ಅಂಗೀಕಾರ: ಇದಕ್ಕೂ ಮುನ್ನ ಸದನ ಸೇರುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್‌ನಲ್ಲಿ ನಿಯಮ 118ರ ಅನುಸಾರ 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ, 2019ನೇ ಸಾಲಿನ ಬಸವಕಲ್ಯಾಣ ಅಭಿವದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2019ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ.

 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕ, 2019ನೇ ಸಾಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2019ನೇ ಸಾಲಿನ ಆರ್.ವಿ.ವಿಶ್ವವಿದ್ಯಾಲಯ ವಿಧೇಯಕ, 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2018ನೆ ಸಾಲಿನ ಕರ್ನಾಟಕ ಋಣ ಪರಿಹಾರ ವಿಧೇಯಕ, 2019ನೇ ಸಾಲಿನ ಧನ ವಿನಿಯೋಗ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಸ್ವರೂಪದಲ್ಲೇ ವಿಧಾನ ಪರಿಷತ್‌ನಲ್ಲೂ ಅಂಗೀಕಾರಗೊಂಡಿವೆ ಎಂದು ಪ್ರಕಟಿಸಿದರು.

ಬಳಿಕ ಶಾಸನ ರಚನಾ ಪ್ರಕ್ರಿಯೆಯನ್ನು ಸ್ಪೀಕರ್ ಕೈಗೆತ್ತಿಕೊಂಡರು. ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ನೀಡುವಂತೆ ಮನವಿ ಮಾಡಿದರು. ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರಗೊಂಡಿತು.

15ನೇ ವಿಧಾನಸಭೆಯ ಮೂರನೆ ಅಧಿವೇಶನ ಫೆ.6ರಂದು ಸಮಾವೇಶಗೊಂಡಿತ್ತು. ಈವರೆಗೂ 7 ದಿನ ಕಲಾಪ ನಡೆದು 15 ಗಂಟೆ 10 ನಿುಷ ಚರ್ಚೆ ನಡೆದಿದೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪ್ರಕಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಹೆಚ್ಚು ಗದ್ದಲ ಮಾಡಿದ್ದರಿಂದ ಕಲಾಪದ ಸಂಪೂರ್ಣ ವರದಿ ಓದಲಾಗದೆ, ಅಧಿವೇಶನ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಸದನ ಮುಂದೂಡಿದರು.

‘ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ಸರಕಾರದ ಉತ್ತರದ ಬಳಿಕ ಮತಕ್ಕೆ ಹಾಕುವುದು ಸಂಪ್ರದಾಯ. ಅದೇ ರೀತಿಯಲ್ಲಿ ಬಜೆಟ್ ಮೇಲೆಯೂ ಚರ್ಚೆ ನಡೆಯಬೇಕಿತ್ತು. ಆದರೆ, ಈ ಅಧಿವೇಶನದಲ್ಲಿ ಆಡಿಯೋ ತನಿಖೆಗೆ ಸಿಟ್ ರಚನೆ, ಶಾಸಕರ ನಿವಾಸದ ಮೇಲಿನ ದಾಳಿ, ಗದ್ಧಲ ಹಿನ್ನೆಲೆಯಲ್ಲಿ ರಾಜ್ಯದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಹಾಗೂ ಆಯವ್ಯಯದ ಮೇಲೆ ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News