ವರ್ಷದಲ್ಲಿ ನಾಲ್ಕೇ ದಿನ ಕಾಣಿಸಿಕೊಳ್ಳುವ ನಿಗೂಢ ತಳಿಯ ಕಪ್ಪೆ ಪತ್ತೆ!

Update: 2019-02-14 15:59 GMT

ಹೊಸದಿಲ್ಲಿ, ಫೆ.14: ಸಣ್ಣ ಬಾಯಿಯ ಕಪ್ಪೆಯ ಹೊಸ ತಳಿಯೊಂದನ್ನು ದಿಲ್ಲಿ ವಿವಿಯ ಸಂಶೋಧಕರು ಕೇರಳದ ರಸ್ತೆ ಬದಿಯ ಕೊಚ್ಚೆಗುಂಡಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ.

ಪಿಎಚ್‌ಡಿ ವಿದ್ಯಾರ್ಥಿನಿ ಸೊನಾಲಿ ಗಾರ್ಗ್ ಮತ್ತು ಸಂಶೋಧನಾ ಮೇಲ್ವಿಚಾರಕ ಪ್ರೊಫೆಸರ್ ಎಸ್‌ಡಿ ಬಿಜು ಈ ಹೊಸ ವರ್ಗದ ಕಪ್ಪೆಯನ್ನು ಕಂಡುಹಿಡಿದಿದ್ದು ಇದಕ್ಕೆ ‘ಮಿಸ್ಟಿಸೆಲ್ಲಸ್’ (ನಿಗೂಢ ಮತ್ತು ಅತ್ಯಂತ ಸಣ್ಣದು) ಎಂದು ನಾಮಕರಣ ಮಾಡಿದ್ದಾರೆ.

‘ನೇಚರ್ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್’ನ ಫೆಬ್ರವರಿ ಆವೃತ್ತಿಯಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. ಮೂರು ವರ್ಷಗಳ ಕ್ಷೇತ್ರ ಕಾರ್ಯ ಮತ್ತು ಪ್ರಯೋಗಾಲಯದ ಅಧ್ಯಯನದ ಬಳಿಕ ಸಂಶೋಧಕರು ಈ ಹೊಸ ತಳಿಯ ಕಪ್ಪೆಗಳನ್ನು ಪತ್ತೆಹಚ್ಚಿದ್ದಾರೆ. ಜಾಗತಿಕ ಮನ್ನಣೆ ಪಡೆದಿರುವ ಜೀವವೈವಿಧ್ಯತೆಯ ಪ್ರದೇಶವಾಗಿರುವ, ಅತ್ಯಧಿಕ ಸಂಶೋಧನಾ ಕಾರ್ಯ ನಡೆಯುತ್ತಿರುವ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಉಭಯಚರ (ಭೂಮಿ ಮತ್ತು ನೀರಿನಲ್ಲಿ ಬದುಕಬಲ್ಲ) ಜೀವಿಗಳ ದಾಖಲೀಕರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಈ ಕಪ್ಪೆಯ ವಿಶೇಷವೆಂದರೆ ಸಂತಾನೋತ್ಪತ್ತಿಯ ಸಂದರ್ಭ ನಾಲ್ಕು ದಿನ ಕಾಣಿಸಿಕೊಳ್ಳುವುದನ್ನು ಹೊರತುಪಡಿಸಿ ವರ್ಷವಿಡೀ ಇದು ನಿಗೂಢವಾಗಿಯೇ ಬದುಕುತ್ತದೆ. ಈ ಕಪ್ಪೆಯ ಬೆನ್ನಿನ ಕೆಳಭಾಗದಲ್ಲಿ ಎರಡು ಕಣ್ಣಿನಂತಹ ರಚನೆಯಿದೆ. ಮಿಲನದ ಸಂದರ್ಭದಲ್ಲಿ ಪುರುಷ ಕಪ್ಪೆಗಳು ದೇಹದ ಹಿಂಭಾಗವನ್ನು ಮೇಲೆತ್ತಿ ಈ ಕಣ್ಣಿನಂತಹ ರಚನೆಯನ್ನು ಪ್ರದರ್ಶಿಸುತ್ತವೆ. ಅಲ್ಲದೆ ಅಪಾಯ ಎದುರಾದಾಗಲೂ ಇದೇ ರೀತಿಯ ವರ್ತನೆಯನ್ನು ತೋರುತ್ತವೆ . ಈ ತಳಿಯ ಕಪ್ಪೆಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಾಣಿಗಳ ಸಹಜ ವಾಸಸ್ಥಾನಗಳ ನಾಶ ಮತ್ತು ಇತರ ಕಾರಣಗಳಿಂದ ಭಾರತೀಯ ಉಭಯಚರಗಳ ಸಂತತಿ ಹಲವು ಅಪಾಯಗಳನ್ನು ಎದುರಿಸುತ್ತಿದೆ. ಹೊಸ ತಳಿಯ ಕಪ್ಪೆಯು ಕೂಡಾ ರಸ್ತೆ ಬದಿಯ ಕೊಚ್ಚೆಯಲ್ಲಿ, ವಾಹನಗಳ ಸಂಚಾರದ ಸದ್ದು, ನೆಡುತೋಪುಗಳು, ಮಾನವನ ಚಟುವಟಿಕೆಯ ಮಧ್ಯೆ ಕಂಡುಬಂದಿದ್ದು ಈ ಕಪ್ಪೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಗಾರ್ಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News