ಜಿ.ಪಂ ಸರಕಾರಿ ವಾಹನಗಳಲ್ಲಿ ಬಯೋಡೀಸೆಲ್ ಬಳಕೆಗೆ ಸೂಚನೆ: ಸಚಿವ ಕೃಷ್ಣಭೈರೇಗೌಡ

Update: 2019-02-15 13:46 GMT

ಬೆಂಗಳೂರು, ಫೆ.15: ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸರಕಾರಿ ವಾಹನಗಳಲ್ಲಿ ಬಯೋಡೀಸೆಲ್ ಅನ್ನು ಬಳಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭಿಸಿ ನಿರ್ವಹಿಸುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿಗಳ ವಾಹನ ವಿಭಾಗದ ಮುಖ್ಯಸ್ಥರು ಈ ಕೇಂದ್ರಗಳನ್ನು ಸಂಪರ್ಕಿಸಿ, ಇನ್ನು ಮುಂದೆ ಜಿಲ್ಲಾ ಪಂಚಾಯತ್ ವಾಹನಗಳಲ್ಲಿ ಕಡ್ಡಾಯವಾಗಿ ಬಯೋಡೀಸೆಲ್ ಬಳಸುವಂತೆ ಈ ಸುತ್ತೋಲೆಯಲ್ಲಿ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಬಯೋಡೀಸೆಲ್ ಬಳಸುವ ಬಗ್ಗೆ ಒಂದು ಮಾರ್ಗಸೂಚಿಯನ್ನು ನೀಡಲಾಗಿದೆ. ಇದರ ಅನುಸಾರ ಪ್ರತಿ ಜಿಲ್ಲೆಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 50-400 ಲೀಟರ್ ಬಯೋಡೀಸೆಲ್ ಅನ್ನು ಪೂರೈಸಲಿದೆ. ಪ್ರಾರಂಭದಲ್ಲಿ ಡೀಸೆಲ್ ಜೊತೆ ಶೇ.5ರಷ್ಟು(100 ಲೀಟರ್ ಡೀಸೆಲಿಗೆ 5 ಲೀಟರ್ ಬಯೋಡೀಸೆಲ್ ಮಿಶ್ರಣ) ಹಂತ ಹಂತವಾಗಿ ಇದನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಬಯೋಡೀಸೆಲ್ ಬಳಕೆಯ ಕುರಿತಂತೆ ಜಿಲ್ಲಾ ಪಂಚಾಯತ್ ವಾಹನ ಚಾಲಕರಿಗೆ ಸೂಕ್ತ ತರಬೇತಿ ಮತ್ತು ಕಾರ್ಯಾಗಾರ ಆಯೋಜಿಸಲಾಗುವುದು. ಜೈವಿಕ ಇಂಧನ ಬಳಕೆಯ ಕುರಿತು ಜಾಗೃತಿ ಅರಿವು ಮೂಡಿಸಲು ಮಂಡಳಿ ಉದ್ದೇಶಿಸಿದ್ದು, ಈ ಉದ್ದೇಶಿತ ಕಾರ್ಯ ಯೋಜನೆಯಲ್ಲಿ ಬಳಕೆಯಾಗುವ ಬಯೋಡೀಸೆಲ್ ವೆಚ್ಚವನ್ನು ಮಂಡಳಿಯೇ ಭರಿಸಲಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News