ಜನಪ್ರತಿನಿಧಿಗಳು ಸಂವಿಧಾನ ರಚನಾ ಸಭೆಯ ನಡಾವಳಿಗಳನ್ನು ಅಭ್ಯಸಿಸಲಿ: ನ್ಯಾ.ನಾಗಮೋಹನ ದಾಸ್

Update: 2019-02-15 14:58 GMT

ಬೆಂಗಳೂರು, ಫೆ.15: ಜನಪ್ರತಿನಿಧಿಗಳು ಶಾಸನ ಸಭೆಗಳಿಗೆ ಪ್ರವೇಶಿಸುವ ಮುನ್ನ ಸಂವಿಧಾನದ ರಚನಾ ಸಭೆಯ ನಡಾವಳಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕೆಂದು ಹಿರಿಯ ನ್ಯಾ.ನಾಗಮೋಹನದಾಸ್ ಅಭಿಪ್ರಾಯಿಸಿದರು.

ಶುಕ್ರವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 2018ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ, 2017ನೆ ಸಾಲಿನ ಪುಸ್ತಕ ಬಹುಮಾನ ವಿತರಣೆ ಹಾಗೂ ಪುಸ್ತಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ರಚನಾ ಸಭೆಯ ಚರ್ಚೆಯ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಿರಿಯ ಸಂವಿಧಾನ ತಜ್ಞರು ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ ಏನೆಂಬುದರ ಅರ್ಥದ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಚರ್ಚೆಗಳನ್ನು ಜನಪ್ರತಿನಿಧಿಗಳು ಓದಿ ಶೇ.10ರಷ್ಟಾದರು ಬದಲಾದರೆ ದೇಶದ ಅಭಿವೃದ್ಧಿಯತ್ತ ಸಾಗಲಿದೆ ಎಂದು ಅವರು ಹೇಳಿದರು.

ಹಿಂದಿನ ದಿನಗಳಲ್ಲಿ ವರ್ಷಕ್ಕೆ 120ಕ್ಕೂ ಹೆಚ್ಚು ದಿನ ಅಧಿವೇಶನ ನಡೆಯುತ್ತಿತ್ತು. ಇಂದು 60-70 ದಿನಗಳಿಗೆ ಇಳಿದೆದೆ. ಅದರಲ್ಲಿ ಶೇ.41 ರಷ್ಟು ಪ್ರತಿಭಟನೆಗೆ ಮೀಸಲಾಗುತ್ತಿದೆ. ಶೇ.40 ರಷ್ಟು ವಿಧೇಯಕಗಳಿಗೆ ಚರ್ಚೆ ಇಲ್ಲದೆ ಅನುಮೋದನೆ ಸಿಗುತ್ತಿದೆ. ಕೊನೆಯ ಮೂರು ತಾಸುಗಳಲ್ಲಿ ಹಲವು ವಿಧೇಯಕಗಳಿಗೆ ಅನುಮೋದನೆ ಸಿಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂದು ಸಂಸತ್‌ನಲ್ಲಿ ಶೇ.34 ಕ್ರಿಮಿನಲ್ ಹಿನ್ನೆಲೆಯುಳ್ಳವರು, ಶೇ.80 ರಷ್ಟು ಕೋಟ್ಯಾಧಿಪತಿಗಳಿದ್ದಾರೆ. ಬಡವರು, ಕಾರ್ಮಿಕರು ಹಾಗೂ ಮಹಿಳೆಯರನ್ನು ಪ್ರತಿನಿಧಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯ ಸಂಸತ್ತಿಗೆ ಪರ್ಯಾಯ ಯಾವುದೂ ಇಲ್ಲ. ಅದರಲ್ಲಿರುವ ಕೊಳಕನ್ನು ತೆಗೆದು ಪ್ರಾಮಾಣಿಕರನ್ನು, ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಅವರು ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಕೆ.ಮರುಳಸಿದ್ಧಪ್ಪ ಮಾತನಾಡಿ, ಪ್ರಾಧಿಕಾರ ಸ್ಥಾಪನೆಗೊಂಡ ಕಳೆದ 10ವರ್ಷಗಳಲ್ಲಿ ಸುಮಾರು 400 ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಅದರಲ್ಲಿ ಇವತ್ತು 30 ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ. ಮುಖ್ಯವಾಗಿ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಸುಮಾರು 10 ಸಂಪುಟಗಳಲ್ಲಿ ಪ್ರಕಟಿಸುತ್ತಿದ್ದೇವೆ. ಇನ್ನು ಉಳಿದಂತೆ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್ ಸೇರಿದಂತೆ ವೈಚಾರಿಕತೆಯ ಚಿಂತನೆಗಳನ್ನೊಳಗೊಂಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ ಎಂದು ತಿಳಿಸಿದರು.

ಅನುವಾದ ಕಡಿತ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಕೊಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಉಳಿದ ಪ್ರಾಧಿಕಾರಗಳಿಗೆ ಒಂದು ಕೋಟಿ ರೂ. ಅನುದಾನ ಮುಂದುವರೆಸಿದ್ದಾರೆ. ಭಾಷಾ ಭಾರತಿಗೆ ಮಾತ್ರ ಕೇವಲ 50 ಲಕ್ಷ ರೂ.ಮಾತ್ರ ನೀಡಲಾಗುತ್ತಿದೆ. ಈ ತಾರತಮ್ಯವನ್ನು ಕೂಡಲೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಕಲಾಗ್ರಾಮದಲ್ಲಿ ನೀಡಲಾಗಿದ್ದ ಜಾಗವನ್ನು ಶಿಲ್ಪಕಲಾ ಅಕಾಡೆಮಿ ಹಾಗೂ ರಾಷ್ಟ್ರೀಯ ನಾಟಕ ಶಾಲೆಗೆ ಕೊಟ್ಟಿರುವುದು ಸರಿಯಲ್ಲ. ನಮಗೆ ಕೊಟ್ಟ ಜಾಗವನ್ನು ಬಗ್ಗೆ ಪರಿಶೀಲಿಸದೆ ಬೇರೆ ಸಂಸ್ಥೆಗಳಿಗೆ ವರ್ಗಾಯಿಸುವುದು ಎಷ್ಟರಮಟ್ಟಿಗೆ ಸರಿ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ ಉಪಸ್ಥಿತರಿದ್ದರು.

ಈ ವೇಳೆ ಹಿರಿಯ ಸಾಹಿತಿಗಳಾದ ಶಾ.ಮಂ.ಕೃಷ್ಣರಾಯ, ಪ್ರೊ.ಕಾಶೀನಾಥ ಅಂಬಲಗೆ ಅವರಿಗೆ 2018ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ಲೇಖಕರಾದ ಲಕ್ಷ್ಮೀಚಂದ್ರಶೇಖರ್, ಸ.ರಘುನಾಥ, ಜಿ.ವಿ.ರೇಣುಕಾ ಹಾಗೂ ಮಮತಾ ಜಿ.ಸಾಗರ್‌ಗೆ 2017ನೆ ಸಾಲಿನ ಪುಸ್ತಕ ಪ್ರಶಸ್ತಿ ನೀಡಲಾಯಿತು.

-ಡಾ.ಬಿ.ಆರ್.ಅಂಬೇಡ್ಕರ್‌ರವರ 24 ಸಮಗ್ರ ಸಂಪುಟಗಳು ಮರುಮುದ್ರಣ ಮಾಡಲಾಗುತ್ತಿದ್ದು, ಎ.14(ಅಂಬೇಡ್ಕರ್ ಜಯಂತಿ)ರಂದು ಬಿಡುಗಡೆ ಮಾಡಲಾಗುವುದು.

-ಹಿರಿಯ ವಿದ್ವಾಂಸರ ಮಾರ್ಗದರ್ಶನದಲ್ಲಿ ಅನುವಾದಕ್ಕೆ ಸಂಬಂಧಿಸಿದಂತೆ ಎಂಎ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಆಯೋಜಿಸಿದೆ.

-ತಮಿಳು, ಬಂಗಾಳಿ ಸೇರಿದಂತೆ ಇತರೆ ಭಾಷೆಗಳಿಗೆ ಅನುವಾದಗೊಂಡಿರುವ ಕನ್ನಡದ ಶ್ರೇಷ್ಠ ಕೃತಿಗಳ ಮಾರಾಟಕ್ಕೆ ಅಂತರ್‌ಜಾಲದಲ್ಲಿ ಪ್ರಕಟಿಸಲಾಗುವುದು.

-ಇಂದು ಬಿಡುಗಡೆಗೊಂಡಿರುವ ಸಂವಿಧಾನ ರಚನಾ ಸಭೆ ಚರ್ಚೆಗಳನ್ನೊಳಗೊಂಡ 10 ಸಂಪುಟಗಳನ್ನು ಶಾಸಕ, ಸಂಸದರಿಗೆ ಉಚಿತವಾಗಿ ಕೊಡಲಾಗುತ್ತಿದೆ. ಹಾಗೂ ವಿಶ್ವವಿದ್ಯಾಲಯಗಳು, ಹಾಸ್ಪೆಲ್‌ಗಳಿಗೆ ಉಚಿತವಾಗಿ ವಿತರಿಸಲು ತೀರ್ಮಾನಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News