ಭಯೋತ್ಪಾದಕರನ್ನು ಮಟ್ಟ ಹಾಕಲು ಕೇಂದ್ರ ಸರಕಾರದ ಜೊತೆ ನಿಲ್ಲುತ್ತೇವೆ: ಮಾಜಿ ಪ್ರಧಾನಿ ದೇವೇಗೌಡ

Update: 2019-02-15 13:49 GMT

ಬೆಂಗಳೂರು, ಫೆ.15: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೇಯ ಕೃತ್ಯ. ಈ ಘಟನೆಗೆ ಗುಪ್ತಚರ ವೈಫಲ್ಯವೆಂದು ಹೇಳಲು ಸಾಧ್ಯವಿಲ್ಲ. ಈ ಸಂದಿಗ್ಧ ಪರಿಸ್ಥಿತಿಯನ್ನು ಪಕ್ಷಾತೀತವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು ಎಂದರು.

ಕೇಂದ್ರ ಸರಕಾರವು ಈ ಘಟನೆ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಾಳೆ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಅಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ದೇವೇಗೌಡ ಹೇಳಿದರು.

ದೇಶದ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಈ ಘಟನೆ ಯಾಕೆ ಆಗಿದೆ ಎಂದು ಆಲೋಚನೆ ಮಾಡಿಕೊಂಡು ಸಮಯ ವ್ಯರ್ಥ ಮಾಡುವ ಬದಲು, ಮುಂದೆ ನಾವು ಏನು ಮಾಡಬೇಕು ಎಂಬುದರ ಕುರಿತು ಯೋಚಿಸಬೇಕು ಎಂದು ಅವರು ಹೇಳಿದರು.

ಇಂತಹ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶ ಮಾಡಬೇಕಿದೆ. ಕಳೆದ ಬಾರಿ ಇಂತಹ ಘಟನೆಯಾದಾಗ, ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆಗ ಕೇಂದ್ರ ಸರಕಾರದ ಜೊತೆ ಎಲ್ಲರೂ ಬೆಂಬಲವಾಗಿ ನಿಂತಿದ್ದರು ಎಂದು ದೇವೇಗೌಡ ತಿಳಿಸಿದರು.

ಈ ಬಾರಿಯೂ ಭಯೋತ್ಪಾದಕರನ್ನು ಮಟ್ಟ ಹಾಕಲು ನಾವು ಕೇಂದ್ರ ಸರಕಾರದ ಜೊತೆ ನಿಲ್ಲುತ್ತೇವೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುತಾತ್ಮ ವೀರಯೋಧ ಗುರು ಸಾವಿಗೆ ಇದೇ ವೇಳೆ ದೇವೇಗೌಡ ಸಂತಾಪ ಸೂಚಿಸಿದರು.

ಹುತಾತ್ಮ ಯೋಧನ ಮನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೋಗಿ ಸಾಂತ್ವನ ಹೇಳುತ್ತಾರೆ. ಅಲ್ಲದೆ, ಅಂತ್ಯ ಸಂಸ್ಕಾರದಲ್ಲಿಯೂ ಪಾಲ್ಗೊಳ್ಳುತ್ತಾರೆ. ಪಾರ್ಥಿವ ಶರೀರವನ್ನು ವಿಮಾನ ನಿಲ್ದಾಣಕ್ಕೆ ತಂದಾಗ ಅಂತಿಮ ದರ್ಶನ ಪಡೆಯಲು ನಾನು ಹೋಗುತ್ತೇನೆ ಎಂದು ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News