ದೇಶಕ್ಕೆ ಅಕ್ರಮ ಪ್ರವೇಶ: ರೋಹಿಂಗ್ಯಾ ಮೂಲದ 7 ಜನರ ಬಂಧನ

Update: 2019-02-15 13:52 GMT

ಬೆಂಗಳೂರು, ಫೆ.15: ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಲ್ಲದೆ, ಇಲ್ಲಿಂದ ಮಲೇಶಿಯಾಕ್ಕೆ ಪ್ರಯಾಣ ಬೆಳೆಸಿದ್ದ ಆರೋಪದಡಿ ಇಬ್ಬರು ಮಹಿಳೆಯರು ಸೇರಿ 7 ಜನರ ರೋಹಿಂಗ್ಯಾ ನಿವಾಸಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಸ್ಮಾ ಬೇಂಗಂ, ಮುಹಮ್ಮದ್ ತಾಹೀರ್, ಓಂಕಾರ್ ಫಾರೂಕ್, ಮುಹಮ್ಮದ್ ಹಾಲೆಕ್, ರೇಹಾನ ಬೇಗಂ, ಮುಹಮ್ಮದ್ ಮುಸ್ತಾಫ ಹಾಗೂ ರಜತ್ ಮಂಡಲ್ ಎಂಬುವರು ಬಂಧಿತ ಆರೋಪಿಗಳೆಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮ್ಯಾನ್ಮಾರ್(ಬರ್ಮಾ) ದೇಶದಿಂದ ಗಡಿಪಾರು ಆಗಿರುವ ಬಂಧಿತ ಆರೋಪಿಗಳು, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಅಲ್ಲಿ, ಸ್ಥಳೀಯರ ಸಹಾಯದಿಂದ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಅವುಗಳ ಮುಖಾಂತರ ವೀಸಾ, ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡು, ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲೇಶಿಯಾಕ್ಕೆ ತೆರಳಲು ಸಂಚು ರೂಪಿಸಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು.

ಇದರ ಅನ್ವಯ ಗುರುವಾರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಗಳನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿ ಆಸ್ಮಾ ಬೇಗಂ ಅವರ ಪುತ್ರ ಮುಹಮ್ಮದ್ ಹಾಲೆಕ್ ಎಂಬಾತ ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಪಡೆಯಲಾಗಿದ್ದ ಪಾಸ್ ಪೋರ್ಟ್, ವೀಸಾ ಸೇರಿದಂತೆ ಇನ್ನಿತರೆ ದಾಖಲಾತಿಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳು ನಕಲಿ ದಾಖಲಾತಿಗಳ ಮೂಲಕ ಮಲೇಶಿಯಾದ ಕೌಲಲಾಂಪುರಕ್ಕೆ ತೆರಳಲು ಯತ್ನಿಸಿದ್ದರು. ಈ ಗುಂಪಿನಲ್ಲಿದ್ದ ಅಬ್ದುಲ್ ಅಲೀಂ ಎಂಬಾತನ ಶೋಧಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದು, ಈ ಸಂಬಂಧ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News