​ನಡೆಯಲಿದೆಯೇ ಮತ್ತೊಂದು ಸರ್ಜಿಕಲ್ ದಾಳಿ?

Update: 2019-02-16 03:36 GMT

ಹೊಸದಿಲ್ಲಿ, ಫೆ.16: ಪುಲ್ವಾಮಾ ಉಗ್ರರ ದಾಳಿಯ ಬಳಿಕ ಭಾರತೀಯ ಸೇನೆ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ವಹಿಸಿದ್ದು, ಪಾಕಿಸ್ತಾನ ಸೇನೆ ಕೂಡಾ ಮಿಲಿಟರಿಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಆದರೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳುವಂತೆ ಮಾಡಲು ಗಡಿಯಾಚೆಗೆ ಸೀಮಿತ ದಾಳಿ ನಡೆಸುವ ಆಯ್ಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೇರ ಸಮರ ಸಾರುವ ಬದಲು, ಭೂಸೇನೆ ಮೂಲಕ ಲಘು ದಾಳಿ ನಡೆಸುವುದು ಹಾಗೂ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಕೆಲ ಎತ್ತರ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು, ಪಾಕ್ ಆಕ್ರಮಿತ ಪ್ರದೇಶದ ಕೆಲ ಪ್ರದೇಶಗಳ ಮೇಲೆ ನಿರ್ಬಂಧಿತ ಆದರೆ ನಿಖರ ದಾಳಿ ನಡೆಸುವುದೂ ಸೇರಿದಂತೆ ಮಿಲಿಟರಿ ಆಯ್ಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

2016ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಸರ್ಜಿಕಲ್ ದಾಳಿ ಮಾದರಿಯಲ್ಲಿ ಜಾಗರೂಕವಾಗಿ ರೂಪಿಸುವ ವಾಯುದಾಳಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಅತ್ಯಂತ ಕಾರ್ಯಸಾಧು ಹಾಗೂ ಪರಿಣಾಮಕಾರಿ ಮಾರ್ಗ ಎಂಬ ಅಭಿಪ್ರಾಯದ ಬಗ್ಗೆ ತಜ್ಞರಲ್ಲಿ ಒಮ್ಮತ ಮೂಡುತ್ತಿದೆ ಎಂದು ಹೇಳಲಾಗಿದೆ.

ಗಡಿಯಾಚೆಗೆ ಉಗ್ರರ ಶಿಬಿರಗಳು ಮತ್ತು ಲಾಂಚ್ ಪ್ಯಾಡ್‌ಗಳ ಮೇಲೆ ಪಾಕಿಸ್ತಾನದ ವಾಯುಪ್ರದೇಶವನ್ನು ಅತಿಕ್ರಮಿಸದೇ, "ಸ್ಟ್ಯಾಂಡ್ ಆಫ್ ರೇಂಜ್"ನಿಂದ ಸುಕೋಯ್-30ಎಂಕೆಐ, ಮಿರಾಜ್-2000 ಹಾಗೂ ಜಾಗ್ವಾರ್ ಯುದ್ಧ ವಿಮಾನಗಳ ಮೂಲಕ ಸ್ಮಾರ್ಟ್ ಗ್ಲೈಡ್‌ ಬಾಂಬ್ ಹಾಗೂ ಕ್ಷಿಪಣಿಗಳನ್ನು ಪ್ರಯೋಗಿಸುವುದು ಸೂಕ್ತ. ಇಂಥ ದಾಳಿಗೆ ಸಿದ್ಧತಾ ಅವಧಿ ಕೂಡಾ ಕನಿಷ್ಠ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಳಿಕ 90 ಕಿಲೋಮೀಟರ್ ದೂರ ಸಾಮರ್ಥ್ಯದ ಸ್ಮೆರ್ಚ್ ಬಹು ಉಡಾವಣೆ ರಾಕೆಟ್ ವ್ಯವಸ್ಥೆ ಹಾಗೂ 290 ಕಿಲೋ ಮೀಟರ್ ದೂರ ಸಾಮರ್ಥ್ಯದ ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ಷಿಪಣಿಯನ್ನು ಪಾಕಿಸ್ತಾನದ ಸೇನಾ ನೆಲೆ, ಉಗ್ರರ ಶಿಬಿರಗಳು, ಲಾಂಚ್ ಪ್ಯಾಡ್ ಹಾಗೂ ಸ್ಟೇಜಿಂಗ್ ಪ್ರದೇಶಗಳ ಮೇಲೆ ಹಾರಿಸಬಹುದು ಎಂಬ ಸಲಹೆಯೂ ಕೇಳಿಬಂದಿದೆ. ಆದರೆ ಇಂಥ ಕ್ರಮಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯ ಹಾಗೂ ಪ್ರತಿದಾಳಿ ಹಾಗೂ ಪರಿಸ್ಥಿತಿ ಉಲ್ಬಣಗೊಳ್ಳುವ ಅಪಾಯ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News