ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಯಾರು ಗೊತ್ತೇ?

Update: 2019-02-16 04:10 GMT

ಹೊಸದಿಲ್ಲಿ, ಫೆ.16: ಪುಲ್ವಾಮಾದಲ್ಲಿ ಗುರುವಾರ ನಡೆದ ಸಿಆರ್‌ಪಿಎಫ್ ಮೇಲಿನ ಭಯಾನಕ ದಾಳಿಯ ಹಿಂದಿನ ಸೂತ್ರಧಾರ ಜೆಇಎಂ ಸಂಘಟನೆಯ ಸಂಸ್ಥಾಪಕ ಮಸೂದ್ ಅಝರ್‌ನ ಸಂಬಂಧಿ ಎಂಬ ಶಂಕೆಯನ್ನು ಭಾರತದ ಉನ್ನತ ಭದ್ರತೆ ಮತ್ತು ಪ್ರತಿ ವಿಚಕ್ಷಣಾ ವಿಭಾಗದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಸೂದ್ ಅಝರ್‌ನ ಅಣ್ಣ ಅಖ್ತರ್ ಇಬ್ರಾಹೀಂ ಎಂಬಾತನ ಮಗ ಮುಹಮ್ಮದ್ ಉಮರ್ ಈ ದಾಳಿಯ ಮಾಸ್ಟರ್‌ಮೈಂಡ್ ಎನ್ನುವುದು ಅಧಿಕಾರಿಗಳ ಅನುಮಾನ. ಆತ್ಮಹತ್ಯಾ ದಾಳಿ ನಡೆಸಿದ ಆದಿಲ್ ಅಹ್ಮದ್ ದರ್ (22) ಘಟನೆಯಲ್ಲಿ ಮೃತಪಟ್ಟಿದ್ದರೂ, ಬಾಂಬ್ ತಯಾರಿಸಿದ ವ್ಯಕ್ತಿ ಪಾಕ್ ಆಕ್ರಮಿತ ಪ್ರದೇಶದ ಮುಝಾಫರಾಬಾದ್‌ನಲ್ಲಿದ್ದಾನೆ ಎಂದು ದೃಢಪಟ್ಟಿರುವುದಾಗಿ ಹೆಸರು ಬಹಿರಂಗಪಡಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಆತನ ಹೆಸರು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಈತ ಈಗಾಗಲೇ ಉನ್ನತ ಮಟ್ಟದ ರಕ್ಷಣೆ ಪಡೆದಿದ್ದಾನೆ ಎಂದು ನಂಬಲಾಗಿದೆ. ಸ್ಫೋಟ ಸಂಭವಿಸಿದ ಸ್ಥಳದ ಸ್ಥಿತಿ, ತನಿಖೆಗೆ ಪ್ರತಿಕೂಲವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಘಟನಾ ಸ್ಥಳದಲ್ಲಿ ಹಿಮ ಹಾಗೂ ಕೊಚ್ಚೆ ಇದೆ. ಈ ಪ್ರಬಲ ಸ್ಫೋಟದಿಂದ ಮೃತದೇಹಗಳ ಹಾಗೂ ವಾಹನಗಳ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪುರಾವೆ ಸಂಗ್ರಹಿಸುವ ಕಾರ್ಯ ನಡೆದಿದೆ. ಈ ಆತ್ಮಹತ್ಯಾ ದಾಳಿಯಲ್ಲಿ ಬಳಸಿದ ವಾಹನದ ಅಚ್ಚು ಲಭ್ಯವಾಗಿದೆ. ಇವುಗಳ ಬಿಡಿಭಾಗಗಳನ್ನು ಜೋಡಿಸಿದಲ್ಲಿ ವಾಹನ ಎಲ್ಲಿಗೆ ಮತ್ತು ಯಾರಿಗೆ ಸೇರಿದ್ದು ಎಂಬ ವಿವರಗಳು ಸಿಗಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಆದರೆ ದಾಳಿಕೋರನ ಯಾವ ಅವಯವಗಳು ಕೂಡಾ ಇದುವರೆಗೆ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News