18 ಸ್ಥಾನಗಳನ್ನು ಗೆದ್ದ ಎಲ್ ಡಿಎಫ್: ಬಿಜೆಪಿ ಶೂನ್ಯ ಸಾಧನೆ

Update: 2019-02-16 10:32 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ, ಫೆ.16: ಕೇರಳದ ವಿವಿಧ ಸ್ಥಳೀಯ ಸಂಸ್ಥೆಗಳ 30 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ಯುಡಿಎಫ್ 12 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ ಶೂನ್ಯ ಸಾಧನೆ ಮಾಡಿದೆ.

ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ, ಈ ಬಾರಿ ಚುನಾವಣೆಯಿಂದ ಲಾಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ ಸಂವಿಧಾನಾತ್ಮಕವಾಗಿ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಲು ಎಲ್‍ ಡಿಎಫ್ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದರು. ಮಹಿಳೆಯ ಪ್ರವೇಶ ವಿರೋಧಿಸಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದರೆ, ಕ್ರಾಂತಿಕಾರಿ ಮಾರ್ಕ್ಕಿಸ್ಟ್ ಪಾರ್ಟಿ ಒಂಚಿಯಂ ಕ್ಷೇತ್ರವನ್ನು ಉಳಿಸಿಕೊಂಡಿದೆ ಎಂದು ‘ದ ಹಿಂದೂ’ ವರದಿ ಮಾಡಿದೆ.

ಯುಡಿಎಫ್ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಈ ಪೈಕಿ ನಾಲ್ಕರಲ್ಲಿ ಎಲ್‍ಡಿಎಫ್ ಗೆದ್ದಿದ್ದರೆ, ಮತ್ತೊಂದು ಕ್ಷೇತ್ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ಪಾಲಾಗಿದೆ. ಈ ಮಧ್ಯೆ ಹಾಲಿ ಎಲ್‍ಡಿಎಫ್ ವಶದಲ್ಲಿದ್ದ ಐದು ಸ್ಥಾನಗಳಲ್ಲಿ ಯುಡಿಎಫ್ ಜಯಭೇರಿ ಸಾಧಿಸಿದೆ. 12 ಜಿಲ್ಲೆಗಳ 30 ಕ್ಷೇತ್ರಗಳ ಚುನಾವಣೆಯಲ್ಲಿ ಶೇಕಡ 80.12ರಷ್ಟು ಮಂದಿ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News