ನಮ್ಮೊಳಗಿನ ಆತ್ಮವಿಶ್ವಾಸಕ್ಕೆ, ಭವಿಷ್ಯದ ಗುರಿಗೆ ವೈಕಲ್ಯ ಬರಲು ಬಿಡಬಾರದು: ಮಾಲತಿ ಹೊಳ್ಳ

Update: 2019-02-16 16:25 GMT

ಬೆಂಗಳೂರು, ಫೆ.16: ನನಗೆ ದೇಹದ ಒಂದು ಭಾಗಕ್ಕೆ ವೈಕಲ್ಯ ಬಂದಿರಬಹುದು. ಆದರೆ, ನನ್ನೊಳಗಿರುವ ಆತ್ಮವಿಶ್ವಾಸಕ್ಕೆ, ನನ್ನ ಮುಂದಿರುವ ಗುರಿಗೆ ಯಾವತ್ತಿಗೂ ವೈಕಲ್ಯತೆ ಬಂದಿಲ್ಲ. ಬರಲು ಬಿಡುವುದಿಲ್ಲ ಎಂದು ಅಂತರ್‌ರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಹೇಳಿದರು. 

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಒಂದೂವರೆ ವರ್ಷಕ್ಕೆ ಪೋಲಿಯೋ ರೋಗಕ್ಕೆ ತುತ್ತಾಗಿ ಬಾಲ್ಯದ 15ವರ್ಷಗಳು ಆಸ್ಪತ್ರೆಯಲ್ಲಿ ಕಳೆದ ಜೀವನ ವೃತ್ತಾಂತವನ್ನು ಪ್ರೇಕ್ಷಕರ ಎದುರಿಗೆ ಎಳೆ, ಎಳೆಯಾಗಿ ಬಿಚ್ಚಿಟ್ಟರು. ಆ ವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಅಂತರ್‌ರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆದ ಪರಿಯನ್ನು ಹೇಳುವ ಮೂಲಕ ನೆರೆದಿದ್ದವರಲ್ಲಿ ಆತ್ಮವಿಶ್ವಾಸವನ್ನು ಇಮ್ಮುಡಿಗೊಳಿಸಿದರು.

ಪ್ರಥಮ ರ್ಯಾಂಕ್ ಪಡೆದಿದ್ದು: ಹುಟ್ಟಿದ 15 ತಿಂಗಳಿಗೆ ಪೋಲಿಯೋ ರೋಗಕ್ಕೆ ತುತ್ತಾದೆ. ನಂತರ ಸುಮಾರು ಎರಡು ವರ್ಷಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡೆ. ಬಳಿಕ ವೈದ್ಯರ ಸಲಹೆಯಂತೆ ಚೆನ್ನೈನ ಆಸ್ಪತ್ರೆಯಲ್ಲಿ ಸುಮಾರು 15ವರ್ಷಗಳ ಕಾಲ ಚಿಕಿತ್ಸೆ, ಓದು ನಿರಂತರವಾಗಿ ನಡೆಯಿತು. ಇದೇ ವೇಳೆ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಬರೆದು ಪ್ರಥಮ ರ್ಯಾಂಕ್ ಪಡೆದಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣವೆಂದು ಅವರು ಕಣ್ತುಂಬಿಕೊಂಡರು.

ಚೆನ್ನೈನಲ್ಲಿ ಎಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿಗೆ ದಾಖಲಾದೆ. ಪ್ರಾರಂಭದಲ್ಲಿ ಸಹಪಾಠಿಗಳು ಹಾಗೂ ಶಿಕ್ಷಕರು ತೋರಿಸುತ್ತಿದ್ದ ಕನಿಕರ ನನಗೆ ತುಂಬಾ ಬೇಸರ ತರಿಸುತ್ತಿತ್ತು. ಒಂದು ಹಂತದಲ್ಲಿ ಕಾಲೇಜು ಬಿಡಬೇಕೆಂದು ನಿರ್ಧರಿಸಿದೆ. ನಂತರ ಅಪ್ಪನ ಹಿತವಚನಗಳಿಂದ ಪ್ರೇರಣೆಗೊಂಡು ವಿದ್ಯಾಭ್ಯಾಸ ಮುಂದುವರೆಸಿದೆ. ಹೀಗೆ ಒಂದು ಸಂದರ್ಭದಲ್ಲಿ ಖುಷಿಗಾಗಿ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆ ಕ್ರೀಡೆಯಲ್ಲಿ ಎರಡು ಚಿನ್ನದ ಪದಕ ಗೆದ್ದೆ. ಈ ಗೆಲುವಿನ ಸ್ಫೂರ್ತಿಯಿಂದಾಗಿ ಕ್ರೀಡೆಯನ್ನೆ ನನ್ನ ಆಸಕ್ತಿಯ ಕ್ಷೇತ್ರವನ್ನಾಗಿಸಿ ಸತತ ಪರಿಶ್ರಮದಿಂದ ಅಂತರ್‌ರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆದೆ. ಇಲ್ಲಿಯವರೆಗೂ ನಾನು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ 397ಚಿನ್ನ, 27ಬೆಳ್ಳಿ, 5ಕಂಚು ಪದಕವನ್ನು ಗಳಿಸಿದ್ದೇನೆಂದು ಅವರು ಹೇಳಿದರು. ಇಲ್ಲಿಯವರೆಗೂ ಸುಮಾರು 30ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಪ್ರತಿ ಶಸ್ತ್ರಚಿಕಿತ್ಸೆಯ ನಂತರ ಒಂದು ತಿಂಗಳು ವಿರಾಮ ತೆಗೆದುಕೊಳ್ಳಬೇಕೆಂದು ವೈದ್ಯರು ಸೂಚಿಸುತ್ತಾರೆ. ಆದರೆ, ನಾನು ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯನ್ನು ನಂಬುವವಳು. ಹೀಗಾಗಿ ಬೆಳಗ್ಗೆ 4.30ಕ್ಕೆ ಕೆಲಸ ಪ್ರಾರಂಭಿಸಿದರೆ ರಾತ್ರಿ 11.30ರವರೆಗೆ ನಿರಂತರವಾದ ಚಟುವಟಿಕೆಗಳಲ್ಲಿ ತೊಡುಗುತ್ತೇನೆ. ನನ್ನೊಳಗಿನ ಆತ್ಮವಿಶ್ವಾಸ ನನ್ನೆಲ್ಲಾ ಸಾಧನೆಗೆ, ಸೋಲು, ಗೆಲುವಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಅವರು ಹೇಳಿದರು.

ಮಾತೃ ಫೌಂಡೇಶನ್ ನನ್ನ ಕುಟುಂಬ

ನನ್ನ ಬಾಲ್ಯವೆಲ್ಲ ಆಸ್ಪತ್ರೆಯ ಹಾಸಿಗೆಯ ಮೇಲೆ ನೋವಿನಿಂದ ಕಳೆದೆ. ಹೀಗಾಗಿ ಅಪ್ಪ, ಅಮ್ಮ, ಅಣ್ಣ, ತಂಗಿಯರ ಪ್ರೀತಿಯ ಅಪ್ಪುಗೆ ಸಿಗಲೇ ಇಲ್ಲ. ಹೀಗಾಗಿ ನನ್ನಂತೆಯೆ ಎಷ್ಟೋ ಜನ ವಿಕಲಚೇತನ ಮಕ್ಕಳು ಎಲ್ಲರ ಪ್ರೀತಿಯಿಂದ ವಂಚಿರಾಗುತ್ತಾರೆ. ಹಾಗೂ ಗ್ರಾಮೀಣ ಭಾಗದಲ್ಲಿ ಪೋಷಕರಿಗೆ ಇಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿರುವುದಿಲ್ಲ. ಹೀಗಾಗಿ ವಿಕಲಚೇತನ ಮಕ್ಕಳು ಯಾರಿಗೂ ಬೇಡವಾಗಿ ಬದುಕುತ್ತಾರೆ. ಇಂತಹ ಮಕ್ಕಳನ್ನು ಹುಡುಕಿ ತನ್ನ ಮಕ್ಕಳೆಂದೇ ಭಾವಿಸಿಕೊಂಡು ಅವರ ಆರೋಗ್ಯ ಹಾಗೂ ಉತ್ತಮ ವಿದ್ಯಾಭ್ಯಾಸ ನೀಡುವುದಕ್ಕಾಗಿ ಮಾತೃ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ.

-ಮಾಲತಿ ಹೊಳ್ಳ, ಸ್ಥಾಪಕಿ ಮಾತೃ ಫೌಂಡೇಶನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News