ಮನುಷ್ಯನಿಗೆ ಎರಡು ಕೈಗಳಿರುವುದೇ ಯುದ್ಧಕ್ಕೆ ಮೂಲ: ಸಾಹಿತಿ ಜರಗನಹಳ್ಳಿ ಶಿವಶಂಕರ್

Update: 2019-02-17 17:55 GMT

ಬೆಂಗಳೂರು, ಫೆ.17: ಎಲ್ಲ ಪ್ರಾಣಿಗಳಿಗೂ ನಾಲ್ಕು ಕಾಲುಗಳಿದರೆ ಮನುಷ್ಯನಿಗೆ ಮಾತ್ರ ಎರಡು ಕಾಲು, ಎರಡು ಕೈಗಳಿರುವುದೇ ಯುದ್ಧದಂತಹ ದುರಂತ ಕೃತ್ಯಗಳಿಗೆ ಪ್ರಮುಖ ಕಾರಣ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿ.ಕಾಕೋಳು ಸೈಲೇಶ್‌ರವರ ‘ಅಗ್ರಸಾಲಿಗೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯ ಎರಡು ಕಾಲುಗಳಲ್ಲಿ ನಡೆದಾಡುತ್ತಿರುವುದೇ ಮನುಕುಲದ ದೊಡ್ಡ ದುರಂತ. ಎಲ್ಲ ಪ್ರಾಣಿಗಳಿಗೂ ನಾಲ್ಕು ಕಾಲುಗಳಿವೆ. ಆದರೆ, ಮನುಷ್ಯನ ಎರಡು ಕಾಲುಗಳು ವಿಕಾರಗೊಂಡು ಕೈಗಳಾಗಿ ರುವುದು ಜಗತ್ತಿನ ಎಲ್ಲ ಅವಘಡಗಳಿಗೆ ಮೂಲವಾಗಿದೆ ಎಂದು ತಿಳಿಸಿದರು.

ಮನುಷ್ಯನ ಮೆದುಳು ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ವಿಕಾಸನಗೊಂಡಿದ್ದು, ಪ್ರಕೃತಿಗೆ ವಿರುದ್ಧವಾಗಿ ಅನೇಕ ಸಂಶೋಧನೆಗಳನ್ನು ಮಾಡುವ ಮೂಲಕ ತನ್ನ ಮೂಲಕ್ಕೆ ತಾನೇ ಕೊಡಲಿಯಿಟ್ಟುಕೊಳ್ಳುತ್ತಿದ್ದಾನೆ. ಪುಲ್ವಾಮ ಘಟನೆಯಿಂದ ಮನಸಿಗೆ ತುಂಬಾ ನೋವಾಗಿದೆ. ಕಾರಣವಿಲ್ಲದೆ ಸೈನಿಕರನ್ನು ಕೊಂದನಲ್ಲ, ಮನುಷ್ಯ ಏಕೆ ಹೀಗಾದ ಎಂದು ಬೇಸರ ವ್ಯಕ್ತಪಡಿಸಿದರು.

ವಚನ ಭ್ರಷ್ಟತೆ, ಹಣದ ಮೋಹ ಇದರ ಹಿಂದೆ ಸಾಗುತ್ತಿರುವ ಸಮಾಜವನ್ನು ಸಾಹಿತ್ಯದ ಮೂಲಕ ಶಾಂತಿ ಪ್ರೀತಿ ಪ್ರೇಮದೆಡೆಗೆ ಹಿಂತಿರುಗುವಂತೆ ಮಾಡಬೇಕು. ಆಧುನಿಕ ಯುಗದ ಮನುಷ್ಯ ತಲೆಯಲ್ಲಿ ಶಾಂತಿ ಸಹನೆಗಳ ಬದಲಿಗೆ ದ್ವೇಷ ಅಸೂಯೆ ಮತ್ಸರ ತುಂಬಿಕೊಂಡಿದೆ. ಹೀಗಾಗಿ, ಆತ ವಿಜ್ಞಾನ ತಂತ್ರಜ್ಞಾನದ ಮೂಲಕ ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ಪ್ರಕೃತಿಯ ವಿರುದ್ಧವಾಗಿ ಚಿಂತಿಸುತ್ತಿದ್ದಾನೆ. ಆದರೆ ಕವಿ ಮನಸ್ಸು ಮಾತ್ರ ಪ್ರಕೃತಿಯ ವಿರುದ್ಧವಾಗಿ ಯೋಚಿಸುವುದಿಲ್ಲ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಿಸರ್ಗದ ನಿಯಮದಂತೆ ಕವಿಯ ಚಿಂತನೆಗಳಿರುತ್ತವೆ ಎಂದು ನುಡಿದರು.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದೇ ಕವಿತೆ. ಕವಿ ಹೃದಯ ಇರುವವರೆಲ್ಲರೂ ಕವಿತೆಗಳನ್ನು ಬರೆಯಬಹುದು. ಕವಿತೆ ಯಾರೊಬ್ಬರ ಸೊತ್ತಲ್ಲ. ಕವಿತೆಗಳಲ್ಲಿ ಅಂತಃಕರಣವಿದ್ದರೆ ಅದು ಎಲ್ಲರನ್ನು ಸೆರೆ ಹಿಡಿದಿಡಲಿದೆ. ಪೊಲೀಸ್ ಇಲಾಖೆಯಲ್ಲಿನ ಹಲವು ಕವಿ ಹೃದಯಗಳು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಪಿ.ಎಸ್.ರಾಮಾಂಜನೇಯ, ಬೀಚಿ ಸೇರಿದಂತೆ ಹಲವು ಕವಿಗಳು, ಸಾಹಿತಿಗಳು ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿಯ ಮೂಲಕ ಅಕ್ಷರ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ದ.ರಾ.ಬೇಂದ್ರೆ ಹಾಗೂ ಕುವೆಂಪು ಅಭಿರುಚಿಯ ಕನ್ನಡ ಸಾಹಿತ್ಯ ಇಲ್ಲದಂತಾಗಿದೆ. ಕವಿ ಏಕೆ ಆಗಬೇಕೆಂದರೆ ತನ್ನ ಓರೆಗಣ್ಣಿನಿಂದ ಸಮಾಜವನ್ನು ನೋಡಿ, ಅದರ ಸಮಸ್ಯೆಗಳಿಗೆ ಉತ್ತರ ಕೊಟ್ಟು ಸ್ಪಂದಿಸುವುದಕ್ಕೆ. ಹೀಗಾಗಿ, ಎಲ್ಲರೂ ಬರೆಯುವುದಕ್ಕೆ ಆಗಲ್ಲ. ನೂರಾರು ವರುಷ ಇದ್ದ ಮರ ಕೊನೆಗೆ ಮನೆಯ ತೊಲೆಯಾಯಿತು. ಆದರೆ, ನೂರಾರು ವರುಷ ಆಳ್ವಿಕೆ ಮಾಡಿದ ರಾಜ ಮಣ್ಣಾದ ಈ ವಾಕ್ಯವನ್ನು ಕವಿ ಹೃದಯ ಮಾತ್ರ ಹೇಳಲು ಸಾಧ್ಯವೆಂದು ಹೇಳಿದರು.

ನಗರ ಉಪ ಪೊಲೀಸ್ ಆಯುಕ್ತ ಸಿದ್ದರಾಜು ಮಾತನಾಡಿ, ಇಂದಿನ ಪೀಳಿಗೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ತಳ ಸಮುದಾಯಗಳು ಶಿಕ್ಷಣ ಪಡೆಯುತ್ತಿರುವುದರಿಂದ ಬುಡಕಟ್ಟು ಸಮುದಾಯಗಳ ಕಾವ್ಯಗಳು ಮಹಾಕಾವ್ಯ ಆಗುತ್ತಿವೆ. ಅಲ್ಲದೆ, ಶೋಷಿತ ಸಮುದಾಯ ಸಾವಿರಾರು ವರ್ಷಗಳಿಂದ ಸಾಧಿಸದನ್ನೂ, ಸ್ವಾತಂತ್ರ ಬಂದ ಮೇಲೆ ಸಾಧಿಸುತ್ತಿದ್ದಾರೆ ಎಂದರೆ ಶಿಕ್ಷಣವೇ ಇದಕ್ಕೆಲ್ಲ ಕಾರಣ ಎಂದು ತಿಳಿಸಿದರು.

ಇದೇ ವೇಳೆ ವಿಶೇಷ ಪೊಲೀಸ್ ಕವಿಗೋಷ್ಠಿ ನಡೆಯಿತು. ಕನ್ನಡ ಆದರ್ಶ ದಂಪತಿ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, ಉಪ ಪೊಲೀಸ್ ಆಯುಕ್ತ ಸಿದ್ದರಾಜು ಮತ್ತು ಲೇಖಕ ಕೆ.ಎಂ.ಶೈಲೇಜ್ ಉಪಸ್ಥಿತರಿದ್ದರು.

ದೇಶವು ಸುಂದರವಾದ ಸಂವಿಧಾನವನ್ನು ಕೈಲಿಟ್ಟುಕೊಂಡಿದೆಯೇ ಹೊರತು, ಉತ್ತಮ ಆಡಳಿತದ ಬಗ್ಗೆ ಚಿಂತಿಸುತ್ತಿಲ್ಲ.

-ಸಿದ್ದರಾಜು ಉಪ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News