ಮಾನವ ಕಳ್ಳ ಸಾಗಣೆ ತಡೆಗೆ ಪ್ರತಿಯೊಬ್ಬರು ಶ್ರಮಿಸಬೇಕು: ನ್ಯಾ.ಎಲ್.ನಾರಾಯಣಸ್ವಾಮಿ

Update: 2019-02-17 17:57 GMT

ಬೆಂಗಳೂರು, ಫೆ.17: ಮಾನವ ಕಳ್ಳ ಸಾಗಣೆ ಒಂದು ಸಾಮಾಜಿಕ ಪಿಡುಗಾಗಿದ್ದು, ಈ ಪಿಡುಗನ್ನು ಹೋಗಲಾಡಿಸಲು ಹಾಗೂ ಸಂತ್ರಸ್ಥರನ್ನು ರಕ್ಷಿಸಲು ಪ್ರತಿಯೊಬ್ಬರೂ ಶ್ರಮಿಸುವ ಅವಶ್ಯಕತೆ ಇದೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದ್ದಾರೆ.

ರವಿವಾರ ಹೈಕೋರ್ಟ್ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ‘ಮಾನವ ಕಳ್ಳಸಾಗಣಿಕೆ ತಡೆಗಟ್ಟುವ’ ಕುರಿತ ನ್ಯಾಯಾಂಗ ಅಧಿಕಾರಿಗಳ ಜೊತೆಗಿನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಸಾಮಾಜಿಕ, ಆರ್ಥಿಕ ಮತ್ತು ದೇವರ ಹೆಸರಿನಲ್ಲಿ ನಡೆಯುವ ಸಾಂಪ್ರದಾಯಿಕ ಹಾಗೂ ಆಚರಣಾ ಪದ್ಧತಿಗಳಿಂದಾಗಿ ಈ ಮಾನವ ಕಳ್ಳ ಸಾಗಣೆ ಸಮಸ್ಯೆ ಇನ್ನೂ ಜೀವಂತವಾಗಿ ಉಳಿದುಕೊಂಡಿದ್ದು, ಈ ಪಿಡುಗನ್ನು ಹೋಗಲಾಡಿಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಹೇಳಿದರು. ಆರ್ಥಿಕ ಸಮಸ್ಯೆಯಿಂದ ಬಡ ವರ್ಗದವರು ಮಾರುಕಟ್ಟೆಯಲ್ಲಿ ಸರಕಾಗುತ್ತಿದ್ದಾರೆ. ಬಡತನ ನಿರ್ಮೂಲನೆ ಜವಾಬ್ದಾರಿ ನ್ಯಾಯಾಂಗದ ಮೇಲಿರುವುದಿಲ್ಲ. ಸರಕಾರವು ಬಡತನ ನಿರ್ಮೂಲನೆ ಮಾಡಬೇಕಿದ್ದು, ನ್ಯಾಯಾಂಗ ಸೂಕ್ತ ಮಾರ್ಗದರ್ಶನ ನೀಡಬಹುದಾಗಿದೆ. ಆದರೆ, ಸಾಂಪ್ರದಾಯಿಕ ಆಚರಣಾ ಪದ್ಧತಿಗಳಿಂದ ಮಾನವ ಕಳ್ಳಸಾಗಣೆ ನಡೆಯುತ್ತಿರುವುದು ಕಂಡುಬಂದರೆ ನ್ಯಾಯಾಂಗ ಅಧಿಕಾರಿಗಳು ತಕ್ಷಣವೇ ಅದರ ನಿರ್ಮೂಲನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ರಾಜ್ಯಾದ್ಯಂತ ಸುಮಾರು 1,100 ಮಂದಿ ನ್ಯಾಯಾಂಗ ಅಧಿಕಾರಿಗಳಿದ್ದಾರೆ. ಜೀವಿತಾವಧಿಯಲ್ಲಿ ಎಷ್ಟು ತೀರ್ಪು ಬರೆದಿದ್ದೇವೆ ಎಂಬುದರ ಜೊತೆಗೆ ಮಾನವ ಕಳ್ಳ ಸಾಗಣೆ ಪ್ರಕರಣಗಳಿಂದ ಎಷ್ಟು ಮಂದಿ ಸಂತ್ರಸ್ಥರನ್ನು ರಕ್ಷಿಸಿದ್ದೇವೆ ಎಂಬುದನ್ನು ಸಹ ನ್ಯಾಯಾಧೀಶರು ಲೆಕ್ಕವಿಡಬೇಕು. ನ್ಯಾಯಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು, ಪೊಲೀಸ್ ಅಧಿಕಾರಿ ಅಥವಾ ಸರಕಾರಿ ಅಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಮಾನವ ಕಳ್ಳ ಸಾಗಣೆ ಸಮಸ್ಯೆ ನಿರ್ಮೂಲನೆಗೆ ಸಮರೋಪಾದಿಯಲ್ಲಿ ಶ್ರಮಿಸಬೇಕು. ಇಂತಹ ವಿಷ ವರ್ತುಲದಿಂದ ಒಬ್ಬ ಸಂತ್ರಸ್ಥರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದರೆ ಬದುಕು ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೈಕೊರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಅರವಿಂದ ಕುಮಾರ್ ಮಾತನಾಡಿ, ಬಡತನ, ಜಾಗತೀಕರಣ ಮತ್ತು ಶಿಕ್ಷಣದ ಕೊರತೆಯಿಂದ ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಅದರ ಸುಳಿಗೆ ಸಿಲುಕಿದವರ ಪೈಕಿ ಹೆಚ್ಚಿನವರು ಲೈಂಗಿಕ ಶೋಷಣೆಗೆ ಗುರಿಯಾಗುತ್ತಾರೆ ಎಂದರು.

ಇಂತಹ ಪ್ರಕರಣಗಳ ಅಪರಾಧಿಗೆ ಶಿಕ್ಷೆಯಾಗುವ ಪ್ರಮಾಣವು 2015ರಲ್ಲಿ ಶೇ.65ರಷ್ಟಿತ್ತು. 2016ರಲ್ಲಿ ಶೇ.72ಕ್ಕೆ ಏರಿಕೆಯಾಗಿದೆ. ಸಾಕ್ಷಿಗಳು ಪ್ರಾಸಿಕ್ಯೂಷನ್‌ಗೆ ಸಹಕರಿಸದ ಹೊರತು ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಲು ಕೋರ್ಟ್‌ಗೆ ಸಾಧ್ಯವಾಗುವುದಿಲ್ಲ. ಆರೋಪಿಗಳು ಖುಲಾಸೆಯಾದರೆ ನ್ಯಾಯಾಲಯವನ್ನು ದೂರಿದರೆ ಲಾಭವಿಲ್ಲ. ಹೀಗಾಗಿ, ಆರೋಪಿಗಳ ದುಷ್ಕೃತ್ಯ ಸಾಬೀತುಪಡಿಸಲು ತನಿಖಾಧಿಕಾರಿಗಳು ಹಾಗೂ ಪ್ರಾಸಿಕ್ಯೂಷನ್ ಸಮರ್ಥವಾಗಿ ಕೆಲಸ ಮಾಡುವುದು ಅನಿವಾರ್ಯ ಎಂದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್, ಹೈಕೋರ್ಟ್ ರಿಜಿಸ್ಟ್ರಾರ್ ಶ್ರೀಷಾನಂದ ಹಾಗೂ ಅಧೀನ ನ್ಯಾಯಾಲಯದ ನ್ಯಾಯಾಧೀಶರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News