ಭಯೋತ್ಪಾದಕರು ಗುರಿ ಸಾಧಿಸುವುದಕ್ಕೆ ನೆರವಾಗುತ್ತಿರುವ ಕೋಮುವಾದಿಗಳು

Update: 2019-02-18 05:28 GMT

ಪುಲ್ವಾಮದಲ್ಲಿ ಆತ್ಮಹತ್ಯಾ ದಾಳಿ ನಡೆಸಿದ ಭಯೋತ್ಪಾದಕ ಏನನ್ನು ಸಾಧಿಸ ಬಯಸಿದ್ದ? ಈ ಕೃತ್ಯ ನಡೆಸುವುದಕ್ಕೆ ಅವನನ್ನು ಪ್ರಚೋದಿಸಿ ಸಜ್ಜುಗೊಳಿಸಿ ಕಳುಹಿಸಿದ್ದವರು ಏನನ್ನು ಬಯಸಿದ್ದರು? ಕಾಶ್ಮೀರದಲ್ಲಿನ ಭಯೋತ್ಪಾದನೆಯ ಇತಿಹಾಸ ಬಲ್ಲವರಿಗೆಲ್ಲ ಸ್ಪಷ್ಟವಾಗಿ ತಿಳಿದಿರುವಂತೆ 40 ಜೀವಗಳ ಆಹುತಿ ಪಡೆಯುವುದಷ್ಟೇ ಅವರ ಗುರಿಯಾಗಿರಲಿಲ್ಲ. ಈ ರೀತಿ 40 ಮಂದಿ ಯೋಧರನ್ನು ಕೊಂದ ಮಾತ್ರಕ್ಕೆ ಪೊಲೀಸರು ಮತ್ತು ಸೈನಿಕರೆಲ್ಲ ಕಾಶ್ಮೀರ ಬಿಟ್ಟು ಓಡಿ ಹೋಗುವುದೂ ಇಲ್ಲ. ಭಾರತ ಸರಕಾರ ಕೂಡ ಇಂತಹ ದಾಳಿಯೊಂದು ನಡೆದ ಮಾತ್ರಕ್ಕೆ ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಬಿಡುವುದಿಲ್ಲ. ಇವೆಲ್ಲ ಭಯೋತ್ಪಾದಕರಿಗೆ ಚೆನ್ನಾಗಿಯೇ ಗೊತ್ತಿದೆ. ಅವರಿಗೆ ಅದರ ಅನುಭವವೂ ಇದೆ. ಈ ಹಿಂದೆಯೂ ಅವರು ಇಂತಹ ದಾಳಿಗಳನ್ನು ಮಾಡಿದಾಗ ನಮ್ಮ ಸರಕಾರವಾಗಲಿ, ನಮ್ಮ ಯೋಧರಾಗಲಿ ಧೃತಿಗೆಟ್ಟು ಕೈ ಚೆಲ್ಲಿಲ್ಲ. ಕಾಶ್ಮೀರದಲ್ಲಿರುವ ಭಯೋತ್ಪಾದಕರ ಸಂಖ್ಯೆಯನ್ನೇ ತೆಗೆದುಕೊಳ್ಳೋಣ.

2013ರಲ್ಲಿ ಕಾಶ್ಮೀರದಲ್ಲಿ ಉಗ್ರವಾದಿಗಳಾದವರ ಸಂಖ್ಯೆ 16. ಕಳೆದ ನಾಲ್ಕು ವರ್ಷಗಳಲ್ಲಿ 191 ಮಂದಿ ಉಗ್ರವಾದಿಗಳಾಗಿದ್ದಾರೆ ಎಂದು ಸರಕಾರಿ ಅಂಕಿಅಂಶ ಹೇಳುತ್ತದೆ. ಕಾಶ್ಮೀರದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಇದು ತೀರಾ ತೀರಾ ಸಣ್ಣ ಸಂಖ್ಯೆ. ಇದೇ ಸಂದರ್ಭದಲ್ಲಿ ಕಾಶ್ಮೀರದ ಉಗ್ರವಾದಿಗಳ ವಿರುದ್ಧ ಹೋರಾಡುತ್ತಾ ನೂರಾರು ಮಂದಿ ಕಾಶ್ಮೀರಿ ಯೋಧರೇ ಬಲಿಯಾಗಿದ್ದಾರೆ ಎನ್ನುವ ಅಂಶವನ್ನು ಗಮನಿಸಬೇಕು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಶ್ಮೀರಿ ಪೊಲೀಸ್ ಅಧಿಕಾರಿಗಳನ್ನು ಈ ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಇತ್ತೀಚೆಗೆ ಔರಂಗಜೇಬ್ ಎನ್ನುವ ಸೇನಾನಿಯನ್ನು ಭಯೋತ್ಪಾದಕರು ಬರ್ಬರವಾಗಿ ಕೊಂದು ಹಾಕಿದರು. ಅಂದರೆ ಭಯೋತ್ಪಾದನೆಯನ್ನು ಕಾಶ್ಮೀರಿಗಳು ಆತ್ಮಾರ್ಥವಾಗಿ ಒಪ್ಪಿಲ್ಲ ಮತ್ತು ಅವರದನ್ನು ಬೆಂಬಲಿಸುತ್ತಲೂ ಇಲ್ಲ. ಕಾಶ್ಮೀರಿಗಳಲ್ಲಿ ಭಾರತದ ಕುರಿತಂತೆ ಅಸಮಾಧಾನ ಇರಬಹುದು. ಆದರೆ ಅವರು ಅದಕ್ಕಾಗಿ ಭಯೋತ್ಪಾದನೆಯನ್ನು ಸಮರ್ಥಿಸುವ ಮಟ್ಟಕ್ಕೆ ಇಳಿದಿಲ್ಲ. ಭಯೋತ್ಪಾದಕರಿಗೆ ಇಂದು ನುಂಗಲಾರದ ತುತ್ತಾಗಿರುವುದು ಭಾರತ ಸರಕಾರವಲ್ಲ, ಇನ್ನೂ ಭಾರತದ ಜೊತೆಗೆ ಒಲವಿರಿಸಿಕೊಂಡಿರುವ ಕಾಶ್ಮೀರದ ಬಹುಸಂಖ್ಯಾತರು ಎನ್ನುವುದನ್ನು ಗಮನಿಸಬೇಕು. ಈ ಕಾರಣದಿಂದಲೇ ಅವರು ಕಾಶ್ಮೀರಿಗಳ ವಿರುದ್ಧ ಭಾರತ ಸರಕಾರವನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸೇನೆಯ ಮೇಲಿನ ದಾಳಿ ಅದರ ಮುಂದುವರಿದ ಭಾಗವೇ ಆಗಿದೆ.

ಅತ್ತ ಪುಲ್ವಾಮದಲ್ಲಿ ಭಯೋತ್ಪಾದಕರು ತಮ್ಮ ದಾಳಿಯಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ಭಯೋತ್ಪಾದಕರ ಮೂಲ ಉದ್ಧೇಶ ಸಫಲವಾಗಲು ದೇಶದೊಳಗಿರುವ ಸಂಘಪರಿವಾರ ಕಾರ್ಯಕರ್ತರು ಅವರಿಗೆ ನೆರವು ನೀಡತೊಡಗಿದ್ದಾರೆ. ದೇಶಾದ್ಯಂತ ಕಾಶ್ಮೀರಿ ಯುವಕರ ಮೇಲೆ ದಾಳಿಗಳು ನಡೆಯುತ್ತಿವೆ. ಹೆಚ್ಚಿನ ದಾಳಿಗಳು ನಡೆಯುತ್ತಿರುವುದು ಸಂಘಪರಿವಾರದ ಕಾರ್ಯಕರ್ತರಿಂದಲೇ ಎನ್ನುವುದನ್ನು ನಾವು ಗಮನಿಸಬೇಕು. ದಾಳಿಗೊಳಗಾಗುತ್ತಿರುವ ಕಾಶ್ಮೀರಿ ಯುವಕರು ನಿಜಕ್ಕೂ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುವವರಾಗಿದ್ದರೆ ಭಾರತಾದ್ಯಂತ ವಿವಿಧ ಕಾಲೇಜುಗಳಲ್ಲಿ ಯಾಕೆ ಅಧ್ಯಯನ ಮಾಡಲು ಬರುತ್ತಿದ್ದರು? ದೇಶಾದ್ಯಂತ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಕಾಶ್ಮೀರಿಗಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿಯನ್ನು ನಾವು ಹೊಂದಿರಬೇಕು.

ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿಗಳ ಜೊತೆಗೆ ನಾವು ಎಷ್ಟು ಭಾರತೀಯರಾಗಿ ವರ್ತಿಸುತ್ತೇವೆಯೋ ಅಷ್ಟರಮಟ್ಟಿಗೆ ಅದು ಕಾಶ್ಮೀರದ ಮೇಲೆ ಪರಿಣಾಮ ಬೀರುತ್ತದೆ. ಕಾಶ್ಮೀರವನ್ನು ಯಾವ ದಿಕ್ಕಿಗೆ ಮುನ್ನಡೆಸಬೇಕು ಎಂದು ತೀರ್ಮಾನಿಸಬಲ್ಲ ಈ ಯುವಕರನ್ನು ಅನ್ಯರಾಗಿ ಕಂಡು ದ್ವೇಷಿಸಿದರೆ ಅದರ ಪರಿಣಾಮವನ್ನು ಕಾಶ್ಮೀರ ಪರೋಕ್ಷವಾಗಿ ಅನುಭವಿಸಬೇಕಾಗುತ್ತದೆ. ಭಯೋತ್ಪಾದಕರಿಗೂ ಬೇಕಾಗಿರುವುದು ಇದುವೇ ಆಗಿದೆ. ಪುಲ್ವಾಮದಲ್ಲಿ ಯಾವನೋ ಒಬ್ಬ ಪಾತಕಿ ದಾಳಿ ನಡೆಸಿದ ಆರೋಪವನ್ನು ಇಲ್ಲಿರುವ ಕಾಶ್ಮೀರಿಯೊಬ್ಬನ ತಲೆಗೆ ಕಟ್ಟಿ ಹಲ್ಲೆ ನಡೆಸಿದರೆ ಆತನೂ ಭಾರತವನ್ನು ದ್ವೇಷಿಸತೊಡಗುತ್ತಾನೆ. ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಸುವ ಅಥವಾ ಅವರನ್ನು ದ್ವೇಷಿಸುವ, ದ್ವೇಷಿಸಲು ಕಲಿಸುವ ಪ್ರತಿಯೊಬ್ಬರು ಪರೋಕ್ಷವಾಗಿ ಭಯೋತ್ಪಾದಕರಿಗೆ ಸಹಕರಿಸುತ್ತಿರುತ್ತಾರೆ.

   ಇತ್ತೀಚೆಗೆ ಒಂದು ವಾಟ್ಸ್‌ಆ್ಯಪ್ ಸಂದೇಶ ವೈರಲ್ ಆಗುತ್ತಿದೆ. ‘ಕಾಶ್ಮೀರದ ಎಲ್ಲ ವಸ್ತುಗಳನ್ನು ಬಹಿಷ್ಕರಿಸಬೇಕು. ಪ್ರವಾಸೋದ್ಯಮವನ್ನು ನಾಶ ಮಾಡಬೇಕು. ಅಲ್ಲಿಯ ಜನರ ಆರ್ಥಿಕತೆಯನ್ನು ಅಭದ್ರಗೊಳಿಸಬೇಕು. ಅನ್ನ, ನೀರು ಸಿಗದಂತೆ ಕಾಶ್ಮೀರಿಗಳು ಒದ್ದಾಡುವಂತಾಗಬೇಕು....’ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಇಂತಹ ಬೇರೆ ಬೇರೆ ಸ್ವರೂಪದ ‘ಐಡಿಯಾ’ಗಳು ರವಾನೆಯಾಗುತ್ತಿವೆ. ಬಹುಶಃ ಸ್ಫೋಟದ ಬಳಿಕವೂ ತಮಗಾಗಿ ಹಗಲು ರಾತ್ರಿ ದುಡಿಯುತ್ತಿರುವ ದೇಶದೊಳಗಿರುವ ಸಂಘಪರಿವಾರದ ಕಾರ್ಯಕರ್ತರಿಗೆ ಭಯೋತ್ಪಾದಕರು ಕೃತಜ್ಞತೆಗಳನ್ನು ಹೇಳುತ್ತಿರಬೇಕು. ಭಯೋತ್ಪಾದಕರ ಉದ್ದೇಶ, ಭಾರತ ಕಾಶ್ಮೀರಿಗಳನ್ನು ದ್ವೇಷಿಸಬೇಕು ಎನ್ನುವುದೇ ಆಗಿದೆ. ದೇಶದೊಳಗಡೆ ಕಾಶ್ಮೀರಿಗಳ ಮೇಲೆ ಹಲ್ಲೆ ನಡೆದಷ್ಟು, ಅವರ ಸಂಖ್ಯೆ ಹೆಚ್ಚುತ್ತವೆ.

ಕಾಶ್ಮೀರಿಗಳ ಮೇಲೆ ದಾಳಿ ನಡೆಯಿತು, ಕಾಶ್ಮೀರಿಗಳು ಅನ್ನಾಹಾರವಿಲ್ಲದೆ ಸಾಯುತ್ತಿದ್ದಾರೆ ಎಂಬ ಖೇದದಿಂದ ಭಯೋತ್ಪಾದಕರೇನೂ ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗುವವರಲ್ಲ. ಕಾಶ್ಮೀರಿಗಳ ವಿರುದ್ಧ ಭಾರತ ಸರಕಾರ ಮತ್ತು ಸೇನೆ ದ್ವೇಷ ಸಾಧಿಸಿದಷ್ಟೂ 191ಇರುವ ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ. ಭಾರತಾದ್ಯಂತ ಅಂತರ್ಗಲಭೆ ಸಂಭವಿಸಬೇಕು ಎನ್ನುವುದು ಪಾಕಿಸ್ತಾನ ಮತ್ತು ಭಯೋತ್ಪಾದಕರ ಆಸೆಯೂ ಕೂಡ. ಪುಲ್ವಾಮದಲ್ಲಿ ದಾಳಿ ನಡೆದ ಬೆನ್ನಿಗೇ ಅದನ್ನು ಒಂದು ಧರ್ಮದ ತಲೆಗೆ ಉದ್ದೇಶಪೂರ್ವಕವಾಗಿ ಕಟ್ಟಿ, ತಮ್ಮ ರಾಜಕೀಯ ದುರುದ್ದೇಶಗಳನ್ನು ಈಡೇರಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಈಗಾಗಲೇ ಹಲವೆಡೆ ಸಂಘಪರಿವಾರ ಹಿಂಸಾಚಾರಕ್ಕೆ ಕರೆ ನೀಡಿದೆ. ಇಂತಹ ಪ್ರತೀಕಾರದಿಂದ ದೇಶ ಇನ್ನಷ್ಟು ಜರ್ಝರಿತವಾಗುತ್ತದೆ. ಯಾವ ಯುದ್ಧವೂ ಇಲ್ಲದೆ ತನ್ನ ದುರುದ್ದೇಶವನ್ನು ಪಾಕಿಸ್ತಾನ ಮತ್ತು ಅಲ್ಲಿನ ಭಯೋತ್ಪಾದಕರು ಸಾಧಿಸಿಕೊಳ್ಳುತ್ತಾರೆ.

ಮೊನ್ನೆ ಸ್ಫೋಟಿಸಿಕೊಂಡ ಭಯೋತ್ಪಾದಕನ ಪಾಲಕರ ಹೇಳಿಕೆಯೊಂದನ್ನು ಗಮನಿಸಬೇಕು ‘‘ಐದು ವರ್ಷಗಳ ಹಿಂದೆ ಈತ ವಿದ್ಯಾರ್ಥಿಯಾಗಿದ್ದ. ಕಾಲೇಜಿನಿಂದ ಬರುತ್ತಿರುವಾಗ ಇವನನ್ನು ತಡೆದ ಸೇನೆ ಕ್ರೂರವಾಗಿ ನಡೆಸಿಕೊಂಡಿತು. ಆ ಕಾರಣದಿಂದ ಆತ ಸೇನೆಯನ್ನು ದ್ವೇಷಿಸತೊಡಗಿದ’’ ಎಂದು ರಾಯ್ಟರ್‌ನಲ್ಲಿ ಅವರು ಹೇಳಿಕೆ ನೀಡಿದ್ದರು. ಸೇನೆಯ ಅಸೂಕ್ಷ್ಮವಾದ ವರ್ತನೆಯನ್ನು ಹೇಗೆ ಭಯೋತ್ಪಾದಕರು ಬಳಸಿಕೊಂಡರು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಸೇನೆ ಗರಿಷ್ಠ ಸಹನೆಯನ್ನು ಪಾಲಿಸಬೇಕಾಗಿದೆ. ಭಯೋತ್ಪಾದಕರ ಮೇಲಿನ ದ್ವೇಷವನ್ನು ಅಲ್ಲಿನ ನಾಗರಿಕರ ಮೇಲೆ ತೋರಿಸಿದ್ದೇ ಆದಲ್ಲಿ ಅದು ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸೀತೇ ಹೊರತು, ಭಯೋತ್ಪಾದಕರನ್ನು ಶಿಕ್ಷಿಸಲಾರದು. ಬಹುಸಂಖ್ಯಾತ ಕಾಶ್ಮೀರಿಗಳ ಭಾರತದ ಮೇಲಿನ ನಂಬಿಕೆಗೆ ಧಕ್ಕೆ ತರದಂತೆ, ಭಯೋತ್ಪಾದಕರನ್ನು ಗುರಿ ಮಾಡಿ ಸೇನೆ ಹೋರಾಟ ಮಾಡಬೇಕು. ಭಾರತದ ಒಳಗಿರುವ ಭಾರತೀಯ ಕಾಶ್ಮೀರಿಗಳ ಜೊತೆಗೆ ನಿಂತು ಅವರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಮರಳಿ ಕಾಶ್ಮೀರಕ್ಕೆ ಕಳುಹಿಸುವ ಬಹುದೊಡ್ಡ ಹೊಣೆಗಾರಿಕೆ ನಮ್ಮದಾಗಿದೆ. ಯಾರನ್ನೋ ಸಮಾಧಾನಿಸುವ ರಾಜಕಾರಣಕ್ಕಾಗಿ ಕೇಂದ್ರ ಮತ್ತು ಸೇನೆ ಜೊತೆಗೆ ಅಲ್ಲಿಯ ನಾಗರಿಕರನ್ನು ಬರ್ಬರವಾಗಿ ನಡೆಸಿಕೊಂಡರೆ ಭಯೋತ್ಪಾದಕರ ದಾಳಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದಂತೆ. ಕಾಶ್ಮೀರಿಗಳನ್ನು ನಮ್ಮವರನ್ನಾಗಿಸುವ ಮೂಲಕವೇ ನಾವು ಪಾಕಿಸ್ತಾನ ಮತ್ತು ಅದು ಸೃಷ್ಟಿಸುತ್ತಿರುವ ಭಯೋತ್ಪಾದಕರನ್ನು ವಿಫಲಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News