ಪುಲ್ವಾಮ ಬಾಂಬರ್ ಜತೆ ಸೂತ್ರಧಾರರು ಸಂಪರ್ಕ ಸಾಧಿಸಿದ್ದು ಹೇಗೆ ಗೊತ್ತೇ ?

Update: 2019-02-18 03:30 GMT

ಶ್ರೀನಗರ, ಫೆ. 18: ಪುಲ್ವಾಮದಲ್ಲಿ ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿಪಡೆದ ಆತ್ಮಹತ್ಯಾ ಬಾಂಬರ್ ಜತೆ ಈ ದಾಳಿಯ ಸೂತ್ರಧಾರರು ರಹಸ್ಯ ಸಂಪರ್ಕ ಸಾಧಿಸುವ ಸಲುವಾಗಿ ಪರಸ್ಪರ ಸಂವಹನದ ಸಾಫ್ಟ್‌ವೇರ್ (ಪೀರ್ ಟೂ ಪೀರ್) ಅಥವಾ ಇಂಥದ್ದೇ ಮೊಬೈಲ್ ಅಪ್ಲಿಕೇಶನ್ ಬಳಸಿರುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆ ಮತ್ತು ಗುಪ್ತಚರ ದಳದ ಅಧಿಕಾರಿಗಳು ಶಂಕಿಸಿದ್ದಾರೆ.

ಈ ಮೂಲಕ ಮೊಬೈಲ್ ಫೋನ್ ಕಣ್ಗಾವಲಿನಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಅಧಿಕಾರಿಗಳ ಅನಿಸಿಕೆ.

2018ರ ಡಿಸೆಂಬರ್‌ವರೆಗೂ ವೈಎಸ್‌ಎಂಎಸ್ ವ್ಯವಸ್ಥೆ ಮೂಲಕ ದಾಳಿಕೋರ ಹಾಗೂ ಸೂತ್ರಧಾರರು ಸಂದೇಶ ರವಾನಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ದಾಳಿಯ ಬಳಿಕ ಕೂಡಾ ಜೆಇಎಂ ಗುಂಪುಗಳ ನಡುವೆ ಐಎಸ್‌ಎಂಎಸ್ ಸಂದೇಶಗಳು ರವಾನೆಯಾಗಿದ್ದು, ಇಂಥ ಸಂದೇಶದ ಪ್ರತಿ ಬೇಹುಗಾರಿಕೆ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಹೇಳಲಾಗಿದೆ.

"ಮುಜಾಹಿದ್ದೀನ್ ಜೈಶ್ ಮೊಹ್ಮದ್‌ನ ಅಂತ್ಯಸಂಸ್ಕಾರ ಯಶಸ್ವಿ" ಎಂಬ ಒಂದು ಸಂದೇಶ ಭದ್ರತಾ ಪಡೆ ಅಧಿಕಾರಿಗಳಿಗೆ ಲಭ್ಯವಾಗಿದೆ. "ಭೀಕರ ದಾಳಿಯಲ್ಲಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಲಾಗಿದೆ ಮತ್ತು ಹಲವಾರು ವಾಹನಗಳು ಛಿದ್ರವಾಗಿವೆ" ಎಂದು ಮತ್ತೊಂದು ಸಂದೇಶದಲ್ಲಿ ಮಾಹಿತಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ವೈಎಸ್‌ಎಂಎಸ್ ಎನ್ನುವುದು ಅತ್ಯಂತ ಉನ್ನತ ರೇಡಿಯೊ ಫ್ರೀಕ್ವೆನ್ಸಿ ಮಾದರಿಯಾಗಿದ್ದು, ಇದು ಎನ್‌ಕ್ರಿಪ್ಟೆಡ್ ಸಂದೇಶವನ್ನು ರವಾನಿಸುತ್ತದೆ. ಅಂದರೆ ಸಿಮ್‌ಕಾರ್ಡ್ ಇಲ್ಲದ ಮೊಬೈಲ್ ಫೋನ್‌ಗೆ ರೇಡಿಯೊ ಅಡಳವಡಿಸಲಾಗುತ್ತದೆ. ಈ ರೇಡಿಯೊ ಸೆಟ್‌ನಲ್ಲಿ ವೈಫೈ ಸಾಮರ್ಥ್ಯದ ಸಣ್ಣ ಟ್ರಾನ್ಸ್‌ಮಿಟರ್ ಇರುತ್ತದೆ. ಮೊಬೈಲ್ ಸಂಪರ್ಕಿಸಲು ವೈಫೈ ಬಳಸಲಾಗುತ್ತದೆ. ಸೂಕ್ತ ಸಂವಹನಕ್ಕಾಗಿ ಸಂದೇಶ ಸ್ವೀಕರಿಸುವ ವ್ಯಕ್ತಿ, ಸಂದೇಶ ಕಳುಹಿಸುವ ವ್ಯಕ್ತಿಯ ದೃಷ್ಟಿ ಅಳತೆಯಲ್ಲಿರಬೇಕಾಗುತ್ತದೆ.

ಐಎಸ್‌ಎಂಎಸ್ ಅಪ್ಲಿಕೇಶನ್‌ಗಳು ಡಾರ್ಕ್‌ವೆಬ್‌ನಲ್ಲಿ 2012ರಿಂದ ಲಭ್ಯವಿದ್ದು, ಪಾಕಿಸ್ತಾನದ ಉಗ್ರ ಸಂಘಟನೆಗಳು ಹೊಸ ಅವತರಣಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ. ಇವುಗಳ ಫ್ರೀಕ್ವೆನ್ಸಿಯನ್ನು ಯಾವುದೇ ಕಣ್ಗಾವಲು ಸಾಧನಗಳು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News