'ಮೋದಿ ಭದ್ರಕೋಟೆಗೆ ಲಗ್ಗೆ ಹಾಕಲು ಪ್ರಿಯಾಂಕಾ ಸಜ್ಜು'

Update: 2019-02-18 04:00 GMT

ವಾರಣಾಸಿ, ಫೆ. 18: ಪೂರ್ವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈ ತಿಂಗಳ ಕೊನೆಗೆ ತಮ್ಮ ನಾಲ್ಕು ದಿನಗಳ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ತೆರಳಿ ತಳಮಟ್ಟದ ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

"ಈ ತಿಂಗಳು ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಹ್ಮದಾಬಾದ್‌ನಲ್ಲಿ ಫೆ.28ರಂದು ನಡೆಯುವ ಕಾಂಗ್ರೆಸ್ ಕಾರ್ಯಕಾರಿಣಿಗೆ ಮುನ್ನ ಈ ಪ್ರವಾಸ ಕೈಗೊಳ್ಳಲಿದ್ದಾರೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣಾ ಹೊಣೆ ಹೊಂದಿರುವ ಪ್ರಿಯಾಂಕಾಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ, ಈಗಾಗಲೇ ರಾಜ್ಯದಲ್ಲಿ ಫೆ.14ರಂದು ನಾಲ್ಕು ದಿನಗಳ ಪ್ರವಾಸ ಮುಗಿಸಿದ್ದು, ಪ್ರವಾಸದ ವೇಳೆ ಹಲವು ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸುಧೀರ್ಘ ಸಭೆಗಳನ್ನು ನಡೆಸಿದ್ದಾರೆ. ಪ್ರಿಯಾಂಕಾ 41 ಹಾಗೂ ಸಿಂಧಿಯಾ 39 ಸ್ಥಾನಗಳ ಉಸ್ತುವಾರಿ ಹೊಂದಿದ್ದಾರೆ.

"ಪ್ರಿಯಾಂಕಾ ಹಾಗೂ ಸಿಂಧಿಯಾ ಭೇಟಿ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ. ಪಕ್ಷ ಇದೀಗ ಚುನಾವಣಾ ರಣರಂಗಕ್ಕೆ ಸಂಪೂರ್ಣ ಶಕ್ತಿಯೊಂದಿಗೆ ಧುಮುಕಲು ಸಜ್ಜಾಗಿದೆ" ಎಂದು ಎಐಸಿಸಿ ಕಾರ್ಯದರ್ಶಿ ಪ್ರಕಾಶ್ ಜೋಶಿ ಹೇಳಿದ್ದಾರೆ.

ವಾರಣಾಸಿ ಭೇಟಿ ವೇಳೆ ಪ್ರಿಯಾಂಕಾ, ಕಳೆದ ಐದು ವರ್ಷಗಳಲ್ಲಿ ಮೋದಿ ಯೋಜನೆಗಳಡಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಕ್ಷದ ಮುಖಂಡರಿಂದ ಮಾಹಿತಿ ಪಡೆಯಲಿದ್ದಾರೆ.

ಈ ಭೇಟಿಯ ವೇಳೆ ಸಣ್ಣ ರೋಡ್‌ಶೋ ಜತೆಗೆ ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರ ಭೇಟಿ ಇರುತ್ತದೆ. ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ. ನೆಹರೂ ಕುಟುಂಬದ ಭದ್ರಕೋಟೆ ಎನಿಸಿದ ರಾಯಬರೇಲಿ ಹಾಗೂ ಅಮೇಥಿಯಿಂದ ಹೊರಗೆ ಹೆಜ್ಜೆಹಾಕಲು ಪ್ರಿಯಾಂಕಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News