ಉದ್ಯೋಗ ಖಾತ್ರಿಗೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ

Update: 2019-02-18 17:08 GMT

ಬೆಂಗಳೂರು, ಫೆ.18: ಕೇಂದ್ರ ಸರಕಾರದ ಉದ್ಯೋಗ ನಷ್ಟತೆಯ ನೀತಿಗಳನ್ನು ಹಿಮ್ಮೆಟ್ಟಿಸಿ ಸರ್ವರಿಗೂ ಉದ್ಯೋಗ ಖಾತ್ರಿಗಾಗಿ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ವಿದ್ಯಾರ್ಥಿ, ಯುವಜನರು, ಕಾರ್ಮಿಕರಿಂದು ‘ಉದ್ಯೋಗಕ್ಕಾಗಿ ನಾವು ನೀವು’ ಘೋಷಣೆಯೊಂದಿಗೆ ಸಹಿ ಸಂಗ್ರಹ ಚಳವಳಿ ನಡೆಸಿದರು.

ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಎಐಸಿಟಿಇವರೆಗೂ ಪಾದಯಾತ್ರೆ ನಡೆಸಿದ ನಿರುದ್ಯೋಗಿಗಳು, ವಿದ್ಯಾವಂತ ಯುವಜನರು ಹಾಗೂ ಕಾರ್ಮಿಕರು, ದೇಶದ ಎಲ್ಲ ಯುವಜನರಿಗೂ ಉದ್ಯೋಗ ಖಾತ್ರಿ ನೀಡಬೇಕು. ಈ ಸಂಬಂಧ ಕೇಂದ್ರ ಸರಕಾರ ಸರಿಯಾದ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಕೆ.ಪ್ರಕಾಶ್ ಮಾತನಾಡಿ, ಪ್ರತಿವರ್ಷ ಕೋಟ್ಯಂತರ ಯುವಜನರು ಶಿಕ್ಷಣವನ್ನು ಮುಗಿಸಿಕೊಂಡು ಹೊರಬರುತ್ತಿದ್ದಾರೆ. ಆದರೆ, ಆಳುವ ವರ್ಗಗಳು ಉದ್ಯೋಗ ಸೃಷ್ಟಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿವೆ. ಇದರಿಂದಾಗಿ, ಶಿಕ್ಷಣ ಪಡೆದರೂ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕಳೆದ 18 ತಿಂಗಳ ಅವಧಿಯಲ್ಲಿ ಕೇವಲ 5.56 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಅದೇ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಯನದ ಪ್ರಕಾರ 2014-15 ನೆ ಸಾಲಿನಲ್ಲಿ 10 ಲಕ್ಷಕ್ಕೂ ಅಧಿಕ ಉದ್ಯೋಗಗಳು ನಷ್ಟವಾಗಿವೆ ಎಂದು ಹೇಳಿದೆ. ಅಲ್ಲದೆ, ದೇಶದಲ್ಲಿ ನೋಟು ಅಮಾನ್ಯೀಕರಣದ ಬಳಿಕ 90 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದು ಸಿಎಂಐಇ ವರದಿ ತಿಳಿಸಿದೆ. ಇದು ಹೀಗೆ ಮುಂದುವರಿದರೆ ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆ ಅಧಿಕವಾಗುತ್ತದೆ. ಹೀಗಾಗಿ, ಕೂಡಲೇ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತ ಸರಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಸುಮಾರು 10 ಲಕ್ಷದಷ್ಟು ಶಿಕ್ಷಕರ ಹುದ್ದೆಗಳು, ರೈಲ್ವೆಯಲ್ಲಿ ಮೂರು ಲಕ್ಷ, ಅಂಚೆ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು, ಬ್ಯಾಕ್‌ಲಾಕ್ ಹುದ್ದೆಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡಲು ಮುಂದಾಗುತ್ತಿಲ್ಲ. ಬದಲಿಗೆ, ಕಳೆದ ಮೂರು ವರ್ಷಗಳಿಂದ ಖಾಲಿಯಿದ್ದ ಹುದ್ದೆಗಳನ್ನು ರದ್ಧು ಮಾಡಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡ ಕೆ.ಎನ್.ಉಮೇಶ್ ಮಾತನಾಡಿ, ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಘಟನೆ(ಎನ್‌ಎಸ್‌ಎಸ್‌ಒ) ಸಮೀಕ್ಷೆ ಪ್ರಕಾರ ಕಳೆದ 45 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದೆ. 2017-18 ರಲ್ಲಿ ಶೇ.17.4 ಗ್ರಾಮೀಣ ಹಾಗೂ ಶೇ.18.7 ರಷ್ಟು ನಗರದ ಯುವಕರು ಮತ್ತು ಶೇ.13.6 ಹಾಗೂ ಶೇ.27.2 ನಗರದ ಯುವತಿಯರು ನಿರುದ್ಯೋಗಿಗಳಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸರಕಾರ ಕಾಯಿದೆಗಳನ್ನು ತಿದ್ಧುಪಡಿ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗುತ್ತಿಗೆ, ಅರೆ ಗುತ್ತಿಗೆ ಹೆಸರಿನಲ್ಲಿ ನೇಮಿಸಿಕೊಳ್ಳಲು ಕಂಪನಿಗಳ ಮಾಲಕರಿಗೆ ನೇರವಾಗಿ ಅವಕಾಶ ಕಲ್ಪಿಸುತ್ತಿದೆ. ಕೇಂದ್ರ ಸರಕಾರದ ಈ ನೀತಿಗಳಿಂದ ಖಾಯಂ ಉದ್ಯೋಗ ಎಂಬುದು ನಾಶವಾಗಿ, ಎಲ್ಲವೂ ಗುತ್ತಿಗೆಯಾಗುತ್ತಿದೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ರಾಜಶೇಖರ ಮೂರ್ತಿ, ಡಿವೈಎಫ್‌ಐನ ರವಿ, ಜನವಾದಿ ಮಹಿಳಾ ಸಂಘಟನೆಯ ಸೆಲ್ವಿ, ಎಸ್‌ಎಫ್‌ಐನ ದಿಲೀಪ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News