ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಪುಲ್ವಾಮ ದಾಳಿ ಯಾಕಾಯಿತು ?

Update: 2019-02-18 18:46 GMT

ಹೊಸದಿಲ್ಲಿ, ಫೆ.18: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಾಗಲೇ ಪುಲ್ವಾಮ ಭಯೋತ್ಪಾದಕ ದಾಳಿ ನಡೆದಿರುವ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಸಂದೇಹ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಪಾಕಿಸ್ತಾನಿಯರು ಈ ಕೃತ್ಯವನ್ನು ನಡೆಸಿದ್ದೇ ಆಗಿದ್ದಲ್ಲಿ, ಅದಕ್ಕೆ ನೀವು ಹೇಗೆ ಅವಕಾಶ ಮಾಡಿಕೊಟ್ಟಿರಿ ?. ಭಯೋತ್ಪಾದನೆಯನ್ನು ನಿಗ್ರಹಿಸಲು ಕಳೆದ ಐದು ವರ್ಷಗಳಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿರಿ ? ಎಂದವರು ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ, ಕದತಟ್ಟುತ್ತಿರುವಾಗ... ನಿಮಗೆ ಯುದ್ಧವನ್ನು ಸಾರುವ ಅಗತ್ಯ ಉಂಟಾಗಿದೆ. ನಿಮಗೆ ಛಾಯಾ ಸಮರದಲ್ಲಿ ತೊಡಗುವ ಅಗತ್ಯವಿದೆಯೆಂದು ನೀವು ಭಾವಿಸಿದ್ದೀರಿ. ನಿಮಗೆ ಜನತೆಯ ಪ್ರಾಣಗಳ ಜೊತೆ ಚೆಲ್ಲಾಟವಾಡುವ ಅಗತ್ಯವಿದೆಯೆಂಬ ಭಾವನೆ ಬಂದಿದೆ ಎಂದು ಮಮತಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಸರಕಾರವು ಭದ್ರತಾ ವೈಫಲ್ಯದ ಹೊಣೆ ಹೊರುವ ಬದಲು ರಾಜಕೀಯದಾಟದಲ್ಲಿ ನಿರತವಾಗಿದೆಯೆಂದು ಅವರು ಹೇಳಿದರು. ಪುಲ್ವಾಮ ಭಯೋತ್ಪಾದಕ ದಾಳಿಯ ಬಗ್ಗೆ ಕಟ್ಟುನಿಟ್ಟಿನ ತನಿಖೆಯಾಗಬೇಕೆಂದು ಆಗ್ರಹಿಸಿದ ಮಮತಾ ಅವರು, ಈ ಘಟನೆಯ ನೆಪಮಾಡಿಕೊಂಡು, ಬಿಜೆಪಿ ಹಾಗೂ ಆರೆಸ್ಸೆಸ್ ಪಶ್ಚಿಮ ಬಂಗಾಳದಾದ್ಯಂತ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆಯೆಂದು ಆರೋಪಿಸಿದರು.

‘‘ಗಲಭೆಗಳನ್ನು ಸೃಷ್ಟಿಸಲೆಂದೇ ಕೆಲವು ಆರೆಸ್ಸೆಸ್ ಪ್ರಚಾರಕರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ರಾತ್ರಿ ಹೊತ್ತಲ್ಲಿ ಬೀದಿಗಳಲ್ಲಿ ತಿರುಗಾಡುತ್ತಿದ್ದಾರೆ ಎಂಬ ಬಗ್ಗೆ ವರದಿಗಳು ಬಂದಿವೆ. ರಾಷ್ಟ್ರವಾದದ ಹೆಸರಿನಲ್ಲಿ ನಡೆಯುವ ಇಂತಹ ಚಟುವಟಿಕೆಗಳಿಗೆ ಜನತೆ ಮರುಳಾಗಕೂಡದು’’ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News