ಜನಸಾಮಾನ್ಯರ ಸಂಕಟಗಳು ಕಡೆಗಣಿಸಲ್ಪಡದಿರಲಿ

Update: 2019-02-19 07:46 GMT

ಪುಲ್ವಾಮದಲ್ಲಿ ಸೇನಾಪಡೆ ವಾಹನದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ದೇಶದ ಆಂತರಿಕ ವಾತಾವರಣವೇ ಬದಲಾಗಿದೆ. ಯಾರೂ ಈಗ ಕೇಂದ್ರದ ಮೋದಿ ಸರಕಾರದ ವೈಫಲ್ಯಗಳ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿಲ್ಲ. ಎಲ್ಲೆಡೆ ಯುದ್ಧದ ರಣೋತ್ಸಾಹ ಕಂಡು ಬರುತ್ತಿದೆ. ಈ ರಣೋತ್ಸಾಹ ಕಂಡು ನಮ್ಮ ಪ್ರಧಾನಿ ಉತ್ತೇಜಿತರಾಗಿ ‘‘ನನ್ನ ಹೃದಯದಲ್ಲೂ ಬೆಂಕಿ ಹೊತ್ತಿದೆ’’ ಎಂದು ಹೇಳುತ್ತಿದ್ದಾರೆ. ಹೀಗೆ ಎಲ್ಲರಲ್ಲೂ ಬೆಂಕಿಯ ಜ್ವಾಲೆಗಳು ಭುಗಿಲೇಳುತ್ತಿವೆ. ಆದರೆ ಹುತಾತ್ಮ ಯೋಧರ ಮನೆಗಳಲ್ಲಿ ಸೂತಕದ ವಾತಾವರಣ ಉಂಟಾಗಿದೆ.

ಈ ಯದ್ಧೋನ್ಮಾದದಲ್ಲಿ ಜನಸಾಮಾನ್ಯರ ದೈನಂದಿನ ಸಮಸ್ಯೆಗಳು ಸಂಕಟಗಳು ಕಡೆಗಣಿಸಲ್ಪಟ್ಟಿವೆ. ಕಳೆದ ನಾಲ್ಕೂವರೆ ವರ್ಷಗಳ ಕಾಲಾವಧಿಯಲ್ಲಿ ಈ ದೇಶದಲ್ಲಿ ನಡೆದ ಅನಾಹುತಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ನೋಟು ಅಮಾನ್ಯದ ಅವಾಂತರ, ಬ್ಯಾಂಕ್, ಎಟಿಎಂ ಮುಂದೆ ನಿಂತ ಸಾಲುಗಳು, ಸಾಲಾಗಿ ನಿಂತಾಗಲೇ ಸಾವಿಗೀಡಾದ ಅಮಾಯಕರು, ದನ ರಕ್ಷಣೆ ಹೆಸರಲ್ಲಿ ಕೋಮುವಾದಿ ಗೂಂಡಾಪಡೆಗಳು ನಡೆಸಿದ ಕಗ್ಗೊಲೆಗಳು, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಈ ಯಾವ ಜ್ವಲಂತ ಪ್ರಶ್ನೆಗಳು ಈಗ ಚರ್ಚೆಯ ವಿಷಯಗಳಲ್ಲ, ಎಲ್ಲೆಡೆ ಯುದ್ಧದ ಗಾಳಿ ಬೀಸುತ್ತಿವೆ. ಇದನ್ನು ಇನ್ನು ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯವರೆಗೆ ಕೊಂಡೊಯ್ಯಲು ದೇಶದ ಆಳುವ ಪಕ್ಷ ಅತ್ಯುತ್ಸಾಹ ತೋರುತ್ತಿದೆ

 ಈ ಘಟನೆ ನಡೆದ ನಂತರ ಪ್ರಧಾನಿಯ ಉತ್ಸಾಹವೂ ಇಮ್ಮಡಿಯಾಗಿದೆ. ಆದರೆ ಆರ್ಥಿಕ ದುರವಸ್ಥೆಯಿಂದ ಬಳಲಿ ಬೆಂಡಾದ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ. ಇಂಥ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರೆ ದೇಶದ್ರೋಹದ ಆರೋಪಕ್ಕೆ ಗುರಿಯಾಗಬೇಕಾಗಿ ಬಂದಿದೆ. ಈ ವಾತಾವರಣವನ್ನು ಬಳಸಿಕೊಂಡು ಮೋದಿ ಮತ್ತು ಸಂಘ ಪರಿವಾರದ ಅತಿರೇಕಗಳನ್ನು ವಿರೋಧಿಸುತ್ತಿದ್ದ ಚಿಂತಕರು, ಸಾಹಿತಿಗಳು, ಕಲಾವಿದರ ಮೇಲೆ ದಾಳಿ ಆರಂಭವಾಗಿದೆ. ಸೋಮವಾರ ಮಂಡ್ಯದಲ್ಲಿ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ, ಐದು ಲಕ್ಷ ರೂ. ಪರಿಹಾರ ನೀಡಿದ ನಟ ಪ್ರಕಾಶ ರೈ ಅವರ ವಿರುದ್ಧ ಮೋದಿ ಭಕ್ತರು ಘೋಷಣೆ ಕೂಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಅತ್ಯಂತ ದೊಡ್ಡ ಹಗರಣವಾದ ರಫೇಲ್ ಹಗರಣವನ್ನು ಮುಚ್ಚಿ ಹಾಕಲು ಈ ಘಟನೆ ನೆರವಾಗಿದೆ. ಆದರೆ ಮೋದಿ ಸರಕಾರದ ಸೇಡಿನ ರಾಜಕೀಯ ನಿಂತಿಲ್ಲ. ರಫೇಲ್ ಹಗರಣ ಬಯಲಿಗೆಳೆದ ‘ಹಿಂದೂ’ ಪತ್ರಿಕೆಗೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳು ನೀಡುತ್ತಿದ್ದ ಜಾಹೀರಾತುಗಳನ್ನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ನಾಲ್ಕೂವರೆ ವರ್ಷಗಳ ಮೋದಿ ಸರಕಾರದ ನಡೆ ಜನತಂತ್ರಕ್ಕೆ ಮಾರಕವಾಗಿದೆ. 2014ರಲ್ಲಿ ಸಂಸತ್ತನ್ನು ‘ಜನತಂತ್ರ ಮಂದಿರ’ ಎಂದು ವರ್ಣಿಸಿದ ಮೋದಿ ನಂತರ ಅದನ್ನು ಕಡೆಗಣಿಸುತ್ತಲೇ ಬಂದರು. ಈ ವರ್ಷ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಬಜೆಟ್ ಅಂಗೀಕರಿಸಲಾಯಿತು. ಅವಿಶ್ವಾಸ ಗೊತ್ತುವಳಿಗೆ ಅವಕಾಶ ಕೊಡಲಿಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಹುನ್ನಾರವನ್ನು ನಡೆಸುತ್ತಲೇ ಬಂತು. ಸಾವಿರಾರು ರೈತರು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಯ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಯಿತು. ಈ ಯಾವ ಅಂಶಗಳೂ ಈಗ ಚರ್ಚೆಯಾಗುತ್ತಿಲ್ಲ

ರಫೇಲ್ ಹಗರಣದಲ್ಲಿ ಮಹಾಲೇಖಪಾಲರ ವರದಿ(ಸಿಎಜಿ) ಹೊರಗೆ ಬಿದ್ದಿದೆ. 16ನೇ ಲೋಕಸಭಾ ಅಧಿವೇಶನದ ಕೊನೆಯ ದಿನ ಇದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಹೀಗಾಗಿ ಚರ್ಚೆಗೆ ಅವಕಾಶವೇ ಇರಲಿಲ್ಲ. ಆಳುವ ಪಕ್ಷಕ್ಕೆ ಅನುಕೂಲಕರ ಎಂದು ಹೇಳಲಾಗಿರುವ ಈ ವರದಿಯಲ್ಲಿ ಹಲವು ಜ್ವಲಂತ ಪ್ರಶ್ನೆಗಳಿಗೆ ಉತ್ತರವಿಲ್ಲ ಎಂದುಹೇಳಲಾಗುತ್ತಿದೆ.

ರಫೇಲ್ ಯುದ್ಧವಿಮಾನ ಖರೀದಿ ದರದ ಗೊಂದಲದ ಜೊತೆಗೆ ಈ ವ್ಯವಹಾರದ ಪಾಲುಗಾರಿಕೆಯನ್ನು ಅನಿಲ್ ಅಂಬಾನಿ ಕಂಪೆನಿಗೆ ನೀಡಿರುವ ಕ್ರಮವೂ ವಿವಾದದ ಅಲೆಯನ್ನು ಎಬ್ಬಿಸಿದೆ. ಈ ಅಂಶಗಳನ್ನು ಸಿಎಜಿ ವರದಿ ಗಮನಕ್ಕೆ ತೆಗೆದುಕೊಂಡಿಲ್ಲ. ಒಟ್ಟಾರೆ ಸಿಎಜಿ ವರದಿ ಸಂದೇಹಾಸ್ಪದವಾಗಿದೆ. ಈ ಬಗೆಗೂ ಯಾರೂ ಮಾತಾಡುತ್ತಿಲ್ಲ.

ಕಾಶ್ಮೀರದಲ್ಲಿ ಭಯೋತ್ಪಾದಕರ ಕೃತ್ಯವನ್ನು ದೇಶ ಒಕ್ಕೊರಲಿನಿಂದ ಖಂಡಿಸಿದೆ. ಆದರೆ ಇದರ ಹೆಸರಿನಲ್ಲಿ ಜನಸಾಮಾನ್ಯರ ದೈನಂದಿನ ಸಂಕಟ, ಸಮಸ್ಯೆಗಳು ಕಡೆಗಣಿಸಲ್ಪಡಬಾರದು, ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಸರಕಾರ ಯುದ್ಧದ ಮಾತನ್ನು ಆಡುವುದರಿಂದ ಇನ್ನಷ್ಟು ದುರಂತಗಳು ಸಂಭವಿಸುತ್ತವೆಯೇ ಹೊರತು ಜನರಿಗೆ ಶಾಂತಿ ನೆಮ್ಮದಿ ಸಿಗುವುದಿಲ್ಲ.

ಜಾಗತಿಕವಾಗಿ ಪಾಕಿಸ್ತಾನದ ಮುಖವಾಡ ಕಳಚಬೇಕು. ಅಲ್ಲಿನ ಆಳುವ ವರ್ಗದ ತಪ್ಪಿಗೆ ಅಲ್ಲಿನ ಜನರನ್ನು ಶತ್ರುಗಳಂತೆ ಕಾಣಬಾರದು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಾಡಿದಂತೆ ಮತ್ತೆ ಸಂಧಾನ ಮಾತುಕತೆಗಳನ್ನು ನಡೆಸಿ ಪಾಕಿಸ್ತಾನದ ಕಿವಿ ಹಿಂಡಿ ಬುದ್ಧ್ದಿ ಹೇಳಬೇಕು. ಅದೊಂದೇ ಉಳಿದ ದಾರಿಯಾಗಿದೆ.

ಆದರೆ ಸಂಧಾನ ಮಾತುಕತೆಗಳಲ್ಲಿ ಆಳುವ ಪಕ್ಷದ ನಾಯಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ನಿತ್ಯವೂ ಪ್ರಚೋದನಾಕಾರಿ ಮಾತುಗಳೇ ಬರುತ್ತಿವೆ. ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಎಂಬಾಕೆ ಗೋಧ್ರಾ ಮಾದರಿ ಹತ್ಯಾಕಾಂಡವನ್ನು ಮತ್ತೆ ನಡೆಸುವಂತೆ ಪ್ರಧಾನಿ ಮೋದಿಯವರಿಗೆ ಕರೆ ನೀಡಿದ್ದಾರೆ. ಇದರ ಅರ್ಥವಿಷ್ಟೆ ಹಿಂದೆ ನಡೆದ ಗೋಧ್ರಾ ಹತ್ಯಾಕಾಂಡವನ್ನು ಮೋದಿಯವರೇ ಮಾಡಿಸಿದ್ದರೆಂಬುದನ್ನು ಈ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಬಿಜೆಪಿಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಈ ದೇಶದ ಶೇ. 31ರಷ್ಟು ಜನರು ನೀಡಿದ್ದಾರೆ. ಆದರೆ ಅದು ಈ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಯುದ್ಧ ಪ್ರಚೋದಕ ಮಾತುಗಳನ್ನು ಆಡುತ್ತಿದೆ. ಇಂಥ ಮಾತುಗಳು ಅದಕ್ಕೆ ಶೋಭೆ ತರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News