ಸೇನಾಧಿಕಾರಿಯ ಒಂದೇ ಏಟಿಗೆ ತತ್ತರಿಸಿದ್ದ ಮೌಲಾನಾ ಮಸೂದ್ ಅಝರ್ !

Update: 2019-02-19 03:52 GMT

ಶ್ರೀನಗರ, ಫೆ. 19: ಜೈಶ್-ಇ- ಮೊಹ್ಮದ್ ಸಂಘಟನೆ ರೂಪಿಸಿದ ಅತ್ಯಂತ ಮಾರಕ ದಾಳಿಗಳಲ್ಲೊಂದಾದ ಪುಲ್ವಾಮ ದಾಳಿ ನಡೆದ ಕೆಲವೇ ದಿನಗಳಲ್ಲಿ, ಹಲವು ಬಾರಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್‌ನನ್ನು ವಿಚಾರಣೆ ನಡೆಸಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಬಾಯಿ ಬಿಡಿಸುವುದು ತೀರಾ ಸುಲಭ ಎಂದು ಹೇಳಿಕೆ ನೀಡಿದ್ದಾರೆ.

ಹಿಂದೊಮ್ಮೆ ವಿಚಾರಣೆ ನಡೆಸುವ ವೇಳೆ ಸೇನಾ ಅಧಿಕಾರಿಯ ಒಂದೇ ಏಟಿಗೆ ಆತ ತಾನು ಶಾಮೀಲಾಗಿರುವ ಕೃತ್ಯಗಳ ಬಗ್ಗೆ ಒಪ್ಪಿಕೊಂಡಿದ್ದ ಎಂದು ಅಸ್ಸಾಂನ ನಿವೃತ್ತ ಡಿಜಿಪಿ ಅವಿನಾಶ್ ಮೋಹನೇನಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಆತನನ್ನು ನಿಭಾಯಿಸುವುದು ತೀರಾ ಸುಲಭ. ಸೇನಾ ಅಧಿಕಾರಿಯ ಒಂದು ಏಟು ಆತನನ್ನು ಸಂಪೂರ್ಣವಾಗಿ ನಡುಗಿಸಿತ್ತು ಎಂದು ಮೋಹನಾನಿ ಹೇಳಿದ್ದಾರೆ. ಗುಪ್ತಚರ ವಿಭಾಗದ ಎರಡು ವರ್ಷಗಳ ಸೇವಾವಧಿಯಲ್ಲಿ ಹಲವು ಬಾರಿ ಅಝರ್‌ನನ್ನು ಇವರು ವಿಚಾರಣೆಗೆ ಗುರಿಪಡಿಸಿದ್ದರು. 1994ರಲ್ಲಿ ಮೊದಲ ಬಾರಿ ಕಾಶ್ಮೀರ ಕಣಿವೆಯಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದ. ಆದರೆ ಆ ವೇಳೆಗೆ ಇನ್ನೂ ಪಾಕಿಸ್ತಾನದ ಐಎಸ್‌ಐನ ಪರೋಕ್ಷ ಯುದ್ಧದ ಅರಿವು ಭಾರತಕ್ಕೆ ಇರಲಿಲ್ಲ.

ಕಾಶ್ಮೀರ ಕಣಿವೆಯಲ್ಲಿ ಸಂಘಟನೆಯ ಕಾರ್ಯಾಚರಣೆ ಮತ್ತು ನೇಮಕಾತಿ ಪ್ರಕ್ರಿಯೆ ಸೇರಿದಂತೆ ಹಲವು ಪ್ರಮುಖ ವಿವರಗಳನ್ನು ಆತ ವಿಚಾರಣೆ ವೇಳೆ ಬಹಿರಂಗಪಡಿಸಿದ್ದ ಎಂದು ಕಾಶ್ಮೀರ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಹೇಳಿದ್ದಾರೆ. "ಕೋತ್ ಬಲ್ವಾಲ್ ಜೈಲಿನಲ್ಲಿ ಹಲವು ಬಾರಿ ಆತನನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದೆ, ಆತನಿಂದ ಮಾಹಿತಿಗಳು ನಿರಂತರವಾಗಿ ಹರಿಯುತ್ತಿದ್ದುದರಿಂದ ನಾವು ಯಾವುದೇ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗುತ್ತಿರಲಿಲ್ಲ. ಹರ್ಕತ್ ಅಲ್ ಮುಜಾಹಿದೀನ್ ಹಾಗೂ ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ ಸಂಘಟನೆಗಳು ಹರ್ಕತ್ ಅಲ್ ಅನ್ಸಾರ್ ಸಂಘಟನೆ ಜತೆಗೆ ವಿಲೀನವಾಗುವುದನ್ನೂ ಆತ ತಿಳಿಸಿದ್ದ" ಎಂದು ವಿವರಿಸಿದ್ದಾರೆ.

1994ರಲ್ಲಿ ಪೋರ್ಚ್‌ಗೀಸ್ ಪಾಸ್‌ಪೋರ್ಟ್‌ನಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸಿದ್ದ ಅಝರ್, ಕಾಶ್ಮೀರಕ್ಕೆ ಆಗಮಿಸುವ ಮುನ್ನ ಸಹರಣಪುರಕ್ಕೆ ಪ್ರಯಾಣ ಬೆಳೆಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News