ಲಕ್ನೋದಲ್ಲಿ ನಡೆದ ಈ ಹಿಂದೂ- ಮುಸ್ಲಿಂ ಮದುವೆ ‘ಲವ್ ಜಿಹಾದ್’ ಅಲ್ಲ ಯಾಕೆ ಗೊತ್ತೇ?

Update: 2019-02-19 06:30 GMT

ಲಕ್ನೋ, ಫೆ.19: ಹಿಂದೂ- ಮುಸ್ಲಿಂ ಜೋಡಿಯ ವಿವಾಹಕ್ಕೆ ಸಂಘಪರಿವಾರ ಸಂಘಟನೆಗಳ ವಿರೋಧದಿಂದಾಗಿ ಬಹಳಷ್ಟು ಕಡೆ ಹಿಂಸಾಚಾರ ನಡೆದ ನಿದರ್ಶನಗಳಿದ್ದರೂ, ರವಿವಾರ ಇಲ್ಲಿ ನಡೆದ ಅಂತರ ಧರ್ಮೀಯ ವಿವಾಹ ಮಾತ್ರ ಇದಕ್ಕೆ ವಿರುದ್ಧವಾಗಿತ್ತು.

ಇಲ್ಲಿನ ತಾಜ್ ವಿವಾಂತ ಹೋಟೆಲ್‍ನಲ್ಲಿ ನಡೆದ ಈ ವಿವಾಹದಲ್ಲಿ ಬಿಜೆಪಿಯ ಹಿರಿಯ ನಾಯಕರು, ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಲಾಲ್, ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಸೇರಿದಂತೆ ಉತ್ತರ ಪ್ರದೇಶ ಸರ್ಕಾರದ ಹಲವು ಮಂದಿ ಸಚಿವರು ಪಾಲ್ಗೊಂಡಿದ್ದರು.

‘ಶ್ರೇಯಾ ಗುಪ್ತಾ ವೆಡ್ಸ್ ಫೈಝಾನ್ ಕರೀಂ’ ಎಂಬ ಫಲಕ ಹೋಟೆಲ್ ಲಾಬಿಯಲ್ಲಿತ್ತು.

ಹಿಂದೂ ಮುಸ್ಲಿಂ ವಿವಾಹ ಇತ್ತೀಚಿನ ದಿನಗಳಲ್ಲಿ ಅಪರೂಪವೇನೂ ಅಲ್ಲದಿದ್ದರೂ, ರಾಜಕೀಯಕ್ಕಾಗಿ ‘ಲವ್ ಜಿಹಾದ್’ ಎಂಬ ಸುಳ್ಳನ್ನು ಬಳಸಲಾಗಿತ್ತು. ಮುಸ್ಲಿಂ ಯುವಕರು ಹಿಂದೂ ಯುವತಿಯರಿಗೆ ಆಮಿಷವೊಡ್ಡಿ ಸೆಳೆಯುತ್ತಿದ್ದಾರೆ ಎಂದು ಆಪಾದಿಸುವ ಸಂಘಪರಿವಾರ  ಸಂಘಟನೆಗಳು ಇದಕ್ಕೆ ಲವ್ ಜಿಹಾದ್ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಕೇರಳದಲ್ಲಿ ನಡೆದೆ ಇಂತಹ 11 ಅಂತರ್ ಧರ್ಮೀಯ ವಿವಾಹದ ಬಗ್ಗೆ ಎನ್‍ಐಎ ತನಿಖೆ ನಡೆಸಿದೆ. ಆದರೆ ಯಾವ ಪ್ರಕರಣಗಳಲ್ಲೂ ಬಲಾತ್ಕಾರದ ಮತಾಂತರಕ್ಕೆ ಪುರಾವೆ ಸಿಕ್ಕಿಲ್ಲ. ಕೇರಳದ ಹಾದಿಯಾ ಪ್ರಕರಣವಂತೂ ರಾಷ್ಟ್ರದ ಗಮನ ಸೆಳೆದಿತ್ತು.

ಲಕ್ನೋ ವಿವಾಹದ ಬಗ್ಗೆ ಪ್ರತಿಕ್ರಿಯಿಸಿದ ಪತ್ರಕರ್ತರೊಬ್ಬರು, "ಇತ್ತೀಚೆಗಷ್ಟೇ ಆಗ್ರಾದಲ್ಲಿ ಅಂತರ ಧರ್ಮೀಯ ವಿವಾಹವಾದ ಜೋಡಿಯ ಮೇಲೆ ದಾಳಿ ಮಾಡಿದ್ದ ಸಂಘಪರಿವಾರ ಸಂಘಟನೆಗಳ ಲವ್‍ ಜಿಹಾದ್ ಬ್ರಿಗೇಡ್ ಈಗ ಎಲ್ಲಿದೆ?" ಎಂದು ಪ್ರಶ್ನಿಸಿದರು.

ವಧು ಶ್ರೀಯಾ ಗುಪ್ತಾ ಲಕ್ನೋದ ಲೊರೆಂಟೊ ಕಾನ್ವೆಂಟ್‍ನಲ್ಲಿ ಶಿಕ್ಷಣ ಪಡೆದಿದ್ದರು. ಈಕೆ ಬಿಜೆಪಿ ಮುಖಂಡ ರಾಮ್‍ ಲಾಲ್‍ ರ ಸೊಸೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್‍ ಲಾಲ್ ಚುನಾವಣೆ ಸಂದರ್ಭದಲ್ಲಿ ಲವ್‍ ಜಿಹಾದ್ ವಿರುದ್ಧ ಭಾಷಣ ಮಾಡಿದ್ದರು. ಫೈಝಾನ್ ಕರೀಂ, ಡಾ.ವಜ್ಹಾತ್ ಕರೀಂ ಮತ್ತು ಡಾ.ಸುರ್ಚಿತಾ ಚಟರ್ಜಿ ಕರೀಂ ಅವರ ಪುತ್ರ. ಇವರು ರಾಜ್ಯ ಕಾಂಗ್ರೆಸ್ ಮುಖಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News