ಯುಪಿಎ ಅವಧಿಯಲ್ಲಿ ಕಾಶ್ಮೀರ ಶಾಂತವಾಗಿತ್ತು ಎಂದ ಕೇಂದ್ರ ಸಚಿವ ವಿ.ಕೆ.ಸಿಂಗ್

Update: 2019-02-19 10:45 GMT

ಶಿಮ್ಲಾ, ಫೆ.19: ಭಾರತದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ 2005-2012ರ ಅವಧಿಯಲ್ಲಿ ಸಹಜವಾಗಿತ್ತು ಹಾಗೂ ಆ ಬಳಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 2004-2014ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು ಎನ್ನುವುದು ಗಮನಾರ್ಹ.

ಪುಲ್ವಾಮ ಉಗ್ರರ ದಾಳಿಗೆ ಪ್ರತೀಕಾರ ಕೈಗೊಳ್ಳಲಾಗುತ್ತದೆ. ಆದರೆ ಶಾಂತಚಿತ್ತದಿಂದ ಹಾಗೂ ಪರಿಪೂರ್ಣ ಸಿದ್ಧತೆಯೊಂದಿಗೆ ಇದನ್ನು ನಡೆಸಲಾಗುತ್ತದೆ ಎಂದು ಸಚಿವರು ಹೇಳಿದರು.

ಈ ದಾಳಿಯನ್ನು 40 ದೇಶಗಳು ಪ್ರಬಲವಾಗಿ ವಿರೋಧಿಸುವ ಮೂಲಕ ಜಾಗತಿಕಮಟ್ಟದಲ್ಲಿ ಪಾಕಿಸ್ತಾನ ಏಕಾಂಗಿಯಾಗಿದೆ. ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾದನ್ ಹತ್ಯೆಗೆ ಅಮೆರಿಕ ಕೂಡಾ ಹಲವು ವರ್ಷಗಳ ಸಿದ್ಧತೆ ನಡೆಸಿ ಸೂಕ್ತ ಕಾರ್ಯತಂತ್ರ ರೂಪಿಸಿ ಕ್ರಮ ಕೈಗೊಂಡಿತು ಎಂದು ಸಿಂಗ್ ಉಲ್ಲೇಖಿಸಿದರು. ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ಅನುಚ್ಛೇದದ ಅನ್ವಯ ನೀಡಿರುವ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಲು ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಭಾರತ ಎಂದೂ ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವುದಿಲ್ಲ; ಆದರೆ ಬೇರೆಯವರು ಅದನ್ನು ಮಾಡಿದಲ್ಲಿ, ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಿಜೆಪಿ ಸಮಾರಂಭವೊಂದರ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತಾ ಸಿಂಗ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News