ಭಾರತಕ್ಕೆ ಚೀನಾಗಿಂತ 63 ಬಿಲಿಯನ್ ಡಾಲರ್‌ನಷ್ಟು ವಾಣಿಜ್ಯದ ಕೊರತೆ !

Update: 2019-02-19 16:54 GMT

ಬೆಂಗಳೂರು, ಫೆ.19: ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಆಮದು ಪ್ರಮಾಣಕ್ಕಿಂತ ರಫ್ತು ಪ್ರಮಾಣ ಹೆಚ್ಚಿದೆ. ಚೀನಾಕ್ಕಿಂತ 63 ಬಿಲಿಯನ್ ಡಾಲರ್‌ನಷ್ಟು, ದಕ್ಷಿಣ ಕೊರಿಯಾಗಿಂತ 12 ಬಿಲಿಯನ್ ಡಾಲರ್, ಆಸ್ಟ್ರೇಲಿಯಾಗಿಂತ 9 ಬಿಲಿಯನ್ ಡಾಲರ್ ಮತ್ತು ಜಪಾನ್‌ಗಿಂತ 6 ಬಿಲಿಯನ್ ಡಾಲರ್‌ನಷ್ಟು ವಾಣಿಜ್ಯ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಆರ್‌ಸಿಇಪಿ ಪಾಲುದಾರರ ಸಭೆ ಅಭಿಪ್ರಾಯಪಟ್ಟಿದೆ.

ನಗರದಲ್ಲಿ ಕರ್ನಾಟಕ ಸರಕಾರದ ಸಹಯೋಗದಲ್ಲಿ ಪ್ರಾದೇಶಿಕ ವಾಣಿಜ್ಯ ಕೇಂದ್ರ (ಸಿಆರ್‌ಟಿ) ಆಯೋಜಿಸಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ)ಯ ಪಾಲುದಾರರ ಸಲಹಾ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.

ಸಭೆಯಲ್ಲಿ ಕರ್ನಾಟಕದಲ್ಲಿ ಸಮಗ್ರ ಆರ್ಥಿಕ ಪ್ರಗತಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪಾಲುದಾರರು ಬೆಳಕು ಚೆಲ್ಲಿದರು. ಇದಕ್ಕೂ ಮುನ್ನ ಸಿಆರ್‌ಟಿಯು ಲಕ್ನೋ, ಚಂಡೀಘಡ, ಅಹಮದಾಬಾದ್ ಮತ್ತು ತಿರುವನಂತಪುರದಲ್ಲಿ ಇಂತಹ ಪಾಲುದಾರರ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ಡಾ.ರಾಮ ಉಪೇಂದ್ರ ದಾಸ್ ನೇತೃತ್ವದ ಸಿಆರ್‌ಟಿ ಸಂಶೋಧನಾ ತಂಡವು ರಾಜ್ಯದ ಖಾಸಗಿ ಕ್ಷೇತ್ರ ಮತ್ತು ವಾಣಿಜ್ಯ ವಲಯದ ಪ್ರಮುಖರ ಜತೆ ಸಂವಾದ ನಡೆಸಿ 8 ಅಂಶಗಳ ಪ್ರಗತಿಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಿತು ಹಾಗೂ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಸಲಹೆಗಳನ್ನು ನೀಡಿದರು.

ರಾಜ್ಯ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶ್ವೇಶ್ವರಯ್ಯ ವಾಣಿಜ್ಯ ಉತ್ತೇಜನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಸತೀಶ ಮಾತನಾಡಿ, ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಕೊರಿಯಾ, 10 ಏಸಿಯಾನ್ ದೇಶಗಳು ಸೇರಿದಂತೆ 15 ಕ್ಕೂ ಹೆಚ್ಚು ದೇಶಗಳು ಭಾರತದೊಂದಿಗೆ ಈ ಆರ್‌ಸಿಇಪಿಗೆ ಸಹಿ ಹಾಕಿವೆ ಎಂದು ತಿಳಿಸಿದರು.

ಆಸಿಯಾನ್ ದೇಶಗಳ ಜೊತೆಗೆ ಭಾರತ 2010 ರಲ್ಲಿ ಎಫ್‌ಟಿಎಗೆ ಪ್ರವೇಶ ಮಾಡಿದೆ. ಇದರ ಪರಿಣಾಮ ದೇಶದ ವಾಣಿಜ್ಯ ಕ್ಷೇತ್ರದಲ್ಲಿ ಶೇ.22 ರಷ್ಟು ಪ್ರಗತಿ ಸಾಧಿಸಲಾಗಿದ್ದು, 2017-18 ನೇ ಸಾಲಿನಲ್ಲಿ 812 ಬಿಲಿಯನ್ ಡಾಲರ್‌ಗಳ ವಹಿವಾಟು ನಡೆಸಿರುವುದು ಗಣನೀಯ ಸಾಧನೆಯಾಗಿದೆ. ಅಖಿಲ ಭಾರತ ಮಟ್ಟದಲ್ಲಿ ತೈಲ, ಕಲ್ಲಿದ್ದಲು/ಕೋಕ್ ಮತ್ತು ಖಾದ್ಯ ತೈಲಗಳನ್ನು ಹೆಚ್ಚಾಗಿ ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಮತ್ತಿತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ರಫ್ತಿಗಿಂತ ಆಮದಿನ ಪ್ರಮಾಣ ಹೆಚ್ಚಾಗಿದೆ ಎಂದರು.

ನಮ್ಮ ರಫ್ತಿನ ಪ್ರಮಾಣಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಾಗಿ ಸಿಂಗಾಪುರ, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ಆಮದು ಪ್ರಮಾಣವಿದೆ. ಕರ್ನಾಟಕದ ಪರಿಸ್ಥಿತಿಯೂ ಸಿಂಗಾಪುರ ರೀತಿಯಲ್ಲಿದೆ. ಅಲ್ಲಿ ರಫ್ತಿಗಿಂತ ಆಮದಿನ ಪ್ರಮಾಣ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಿಆರ್‌ಟಿ ತಂಡವು ಎಲ್ಲ ವಿಷಯಗಳನ್ನು ಪರಿಗಣಿಸಿ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ, ಅದರಲ್ಲಿಯೂ ಕರ್ನಾಟಕದ ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News