ಆದಿತ್ಯನಾಥ್ ವಿರುದ್ಧ ಹೇಳಿಕೆ ನೀಡಿದ ಐಪಿಎಸ್ ಅಧಿಕಾರಿ ಅಮಾನತು

Update: 2019-02-20 03:40 GMT

ಲಕ್ನೋ, ಫೆ.20: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಅಲ್ಲಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಸ್ವೀರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

ಕಳೆದ ತಿಂಗಳು ಸುದ್ದಿ ಜಾಲತಾಣವೊಂದರ ಜತೆ ಮಾತನಾಡುವ ವೇಳೆ ಸಿಂಗ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 1992ನೇ ಬ್ಯಾಚ್ ಉತ್ತರ ಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್, ನಿಯಮಾವಳಿ ಮತ್ತು ಮಾರ್ಗಸೂಚಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು.

ಪೊಲೀಸ್ ಪಡೆ ಸೇರುವ ಮುನ್ನ ಮೂಲತಃ ಪಂಜಾಬ್‌ನ ಹೋಶಿಯಾಪುರದವರಾದ ಜಸ್ವೀರ್ ಸಿಂಗ್, ಸಿವಿಲ್ ಎಂಜಿನಿಯರ್ ಮತ್ತು ವಕೀಲರಾಗಿದ್ದರು. 1995ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋರಖ್‌ಪುರ ಸಂಸದರಾಗಿದ್ದ ಆದಿತ್ಯನಾಥ್ ವಿರುದ್ಧ 2002ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು. ಆ ಘಟನೆ ಬಳಿಕ ಜಸ್ವೀರ್ ಅವರನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಆಹಾರ ವಿಭಾಗಕ್ಕೆ ಬಿಎಸ್ಪಿ ಸರ್ಕಾರ ವರ್ಗಾಯಿಸಿತ್ತು.

ಲಖೀಂಪುರ ಆಹಾರ ಹಗರಣ ಪ್ರಕರಣದಲ್ಲಿ ಆಹಾರ ಸಚಿವರ ವಿರುದ್ಧವೇ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಆಹಾರ ವಿಭಾಗದಿಂದ ಮತ್ತೆ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿತ್ತು. ರಾಜಕಾರಣಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದ್ದಕ್ಕೆ ತನಗೆ ಶಿಕ್ಷೆಯಾಗುತ್ತಿದೆ ಎಂದು ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಜತೆಗೆ "ಅಪರಾಧ ಕೃತ್ಯಗಳಲ್ಲಿ ಯಾವ ರಾಜಿಯೂ ಇಲ್ಲ. ನಾನು ಐಎಎಸ್ ಅಧಿಕಾರಿ. ನ್ಯಾಯದ ಪರ" ಎಂದು ಹೇಳಿದ್ದರು. ಆದರೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರು, ಎಡಿಜಿಯವರನ್ನು ಸರ್ಕಾರದ ಸೇವಾ ನಡವಳಿಕೆ ಉಲ್ಲಂಘನೆ ಆರೋಪದಲ್ಲಿ ಅಮಾನತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News