ಯೋಧನ ಅಂತ್ಯಕ್ರಿಯೆಯಲ್ಲಿ ಶೂ ಧರಿಸಿ ಭಾಗವಹಿಸಿದ್ದ ಬಿಜೆಪಿ ನಾಯಕರಿಗೆ ತೀವ್ರ ತರಾಟೆ

Update: 2019-02-20 08:08 GMT
ಶಾಸಕ ಅಗರ್ವಾಲ್ ಹಾಗೂ ಸಚಿವ ಸತ್ಯಪಾಲ್ ಅಂತ್ಯಕ್ರಿಯೆ ವೇಳೆಯೇ ಮಾತನಾಡುತ್ತಾ, ನಗುತ್ತಿದ್ದ ದೃಶ್ಯ.

ಲಕ್ನೋ, ಫೆ.20: ಪುಲ್ವಾಮದಲ್ಲಿ ಸೋಮವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧನ ಅಂತ್ಯಕ್ರಿಯೆಯ ವೇಳೆ ಶೂ ಧರಿಸಿ ಕುಳಿತು ಅಸಂವೇದನಾಶೀಲರಾಗಿ ವರ್ತಿಸಿದ ಹಿರಿಯ ಬಿಜೆಪಿ ನಾಯಕರಿಗೆ ಯೋಧನ ಸಂಬಂಧಿಕರೇ ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.

ಯೋಧನ ಸಂಬಂಧಿಕರು ಬಿಜೆಪಿ ನಾಯಕರಿಂದ ಶೂ ತೆಗೆಸಿ ತರಾಟೆಗೆ ತೆಗೆದುಕೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಕೇಂದ್ರ ಸಚಿವ ಸತ್ಯಪಾಲ್ ಸಿಂಗ್, ಉತ್ತರಪ್ರದೇಶ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಹಾಗೂ ಮೀರತ್ ಬಿಜೆಪಿ ಶಾಸಕ ರಾಜೇಂದ್ರ ಅಗರ್ವಾಲ್ ಶೂ ಧರಿಸಿಕೊಂಡೇ ಯೋಧನ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಇದರಿಂದ ಕೆರಳಿದ ಹುತಾತ್ಮ ಯೋಧ ಅಜಯ ಕುಮಾರ್ ಕುಟುಂಬ ಸದಸ್ಯರು ಬಿಜೆಪಿ ನಾಯಕರ ವಿರುದ್ಧ ಕೂಗಾಡಿ, ಈ ಸಂದರ್ಭದಲ್ಲಿ ಸಂವೇದನಶೀಲರಾಗಿ ವರ್ತಿಸಬೇಕು ಎಂದು ಹೇಳಿದರು. ತಪ್ಪಿಗೆ ಎರಡೂ ಕೈಮುಗಿದು ಕ್ಷಮೆ ಯಾಚಿಸಿದ ನಾಯಕರು ತಾವು ಧರಿಸಿದ್ದ ಶೂಗಳನ್ನು ಕಳಚಿ ಬೇರೆಡೆಗೆ ಸಾಗಿಸಿದರು.

ಶಾಸಕ ಅಗರ್ವಾಲ್ ಹಾಗೂ ಸಚಿವ ಸತ್ಯಪಾಲ್ ಅಂತ್ಯಕ್ರಿಯೆ ವೇಳೆಯೇ ಮಾತನಾಡುತ್ತಾ, ನಗುತ್ತಿದ್ದ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಅಜಯ್ ಕುಮಾರ್ ಸಹಿತ ನಾಲ್ವರು ಯೋಧರು ಪುಲ್ವಾಮದಲ್ಲಿ ಜೈಶ್ ಉಗ್ರ ಸಂಘಟನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದರು. 27ರ ಹರೆಯದ ಕುಮಾರ್ ಪಶ್ಚಿಮ ಉತ್ತರಪ್ರದೇಶದ ಮೀರತ್‌ನ ಬಸ್ಸಿ ಟಿಕ್ರಿ ಗ್ರಾಮದವರು. ಕುಮಾರ್‌ಗೆ 2 ವರ್ಷ ವಯಸ್ಸಿನ ಗಂಡು ಮಗುವಿದೆ. ಕುಮಾರ್ ತಂದೆ ಕೂಡ ಸೈನಿಕ. 2011ರಲ್ಲಿ ಸೇನೆಗೆ ಸೇರಿದ್ದ ಕುಮಾರ್ 2015ರಲ್ಲಿ ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News