ಆತ್ಮಹತ್ಯೆಗೆ ಶರಣಾಗಿದ್ದಾರೆ 888 ಸೈನಿಕರು!

Update: 2019-02-20 08:57 GMT

ಹೊಸದಿಲ್ಲಿ, ಫೆ.20: ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಒಟ್ಟು 888 ಸೈನಿಕರು 2011ರಿಂದ 2018ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಭೂಸೇನೆಯಲ್ಲಿ ಅತಿಹೆಚ್ಚು ಅಂದರೆ 704 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಾಯುಪಡೆಯಲ್ಲಿ ಇದಕ್ಕಿಂತ ಐದು ಪಟ್ಟು ಕಡಿಮೆ ಎಂದರೆ 148 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಏಳು ವರ್ಷದ ಅವಧಿಯಲ್ಲಿ 36 ಮಂದಿ ನೌಕಾಪಡೆ ಯೋಧರು ಆತ್ಮಹತ್ಯೆಗೆ ಶರಣಾಗಿದ್ದಾರೆ.

2011ರಲ್ಲಿ ಭೂಸೇನೆಯಲ್ಲಿ ಗರಿಷ್ಠ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವರ್ಷ 105 ಮಂದಿ ಸಾವಿಗೆ ಶರಣಾಗಿದ್ದಾರೆ. ಆ ಬಳಿಕ 2016ರಲ್ಲಿ 101 ಮಂದಿ ಹಾಗೂ ಕಳೆದ ವರ್ಷ 80 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರೂ ಸೇನೆಗಳಲ್ಲಿ ಸೇರಿ ಸರಾಸರಿ ವರ್ಷಕ್ಕೆ 111 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇನೆಯಲ್ಲಿ ವರ್ಷಕ್ಕೆ 88 ಮಂದಿ, ವಾಯುಪಡೆ ಹಾಗೂ ನೌಕಾಪಡೆಯಲ್ಲಿ ಕ್ರಮವಾಗಿ ಸರಾಸರಿ 18.5 ಹಾಗೂ 4.5 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮೂರು ಸೇನೆಗಳಲ್ಲಿ ಮಾತ್ರವಲ್ಲದೇ, ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧರ ಅಂಕಿ ಅಂಶವನ್ನೂ ಸರ್ಕಾರ ಸಂಗ್ರಹಿಸಿದೆ. 2012ರಿಂದ 2015ರ ಅವಧಿಯಲ್ಲಿ ಸಿಆರ್‍ಪಿಎಫ್‍ನಲ್ಲಿ ಗರಿಷ್ಠ ಅಂದರೆ 149 ಮಂದಿ ಸಾವಿಗೆ ಶರಣಾಗಿದ್ದಾರೆ. ಬಿಎಸ್‍ಎಫ್‍ನಲ್ಲಿ 134 ಮಂದಿ, ಸಿಐಎಸ್‍ಎಫ್‍ನಲ್ಲಿ 56, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆ ಹಾಗೂ ಎಸ್‍ಎಸ್‍ಬಿಯಲ್ಲಿ ತಲಾ 25 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸ್ಸಾಂ ರೈಫಲ್‍ನ 30 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News