ಹೌದು, ಅವರಿಗೆ ಅನುಭವವಿಲ್ಲ, ನಮಗೆ ಅನುಭವವಿದೆ: ರಿಲಯನ್ಸ್ ಬಗ್ಗೆ ಡಸಾಲ್ಟ್ ಸಿಇಒ

Update: 2019-02-20 18:31 GMT

 ಬೆಂಗಳೂರು, ಫೆ.20: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಯಾವುದೇ ಹಗರಣವಾಗಿಲ್ಲ. ಒಪ್ಪಂದದಂತೆ 36 ವಿಮಾನಗಳನ್ನು ಭಾರತಕ್ಕೆ ಪೂರೈಸಲಾಗುವುದು ಎಂದು ದಸಾಲ್ಟ್ ಏವಿಯೇಷನ್ ಸಂಸ್ಥೆಯ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ.

  ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಪ್ಪಂದದಂತೆ 36 ವಿಮಾನಗಳನ್ನು ಪೂರೈಸಲಾಗುವುದು. ಭಾರತ ಸರಕಾರ ಬಯಸಿದರೆ ಇನ್ನಷ್ಟು ವಿಮಾನಗಳನ್ನೂ ಸಂತೋಷದಿಂದ ಪೂರೈಸಲು ನಾವು ಸಿದ್ಧ. ರಫೇಲ್ ಅತ್ಯುತ್ತಮ ಯುದ್ಧವಿಮಾನವಾಗಿದ್ದು, ಈ ವಿಮಾನದ ಮೂಲಕ ಭಾರತದಲ್ಲಿ ನಮ್ಮ ಹೆಜ್ಜೆಗುರುತನ್ನು ಮೂಡಿಸಲು ನಮಗೆ ಸಾಧ್ಯವಾಗುತ್ತಿದೆ ಎಂದು ಹೇಳಿದರು.

  ರಕ್ಷಣಾ ಸಾಧನಗಳನ್ನು ಉತ್ಪಾದಿಸುವಲ್ಲಿ ಯಾವುದೇ ಅನುಭವ ಇರದಿದ್ದರೂ ರಿಲಯನ್ಸ್ ಸಂಸ್ಥೆಯನ್ನು ಭಾಗೀದಾರರನ್ನಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಅವರಿಗೆ ಅನುಭವವಿಲ್ಲ. ಆದರೆ ನಮಗೆ ಸಾಕಷ್ಟು ಅನುಭವವಿದೆ. ಈ ಅನುಭವ ಮತ್ತು ತಂತ್ರಜ್ಞಾನವನ್ನು ಭಾರತೀಯ ಸಂಸ್ಥೆಗೆ ನಾವು ವರ್ಗಾಯಿಸಲಿದ್ದೇವೆ” ಎಂದು ಉತ್ತರಿಸಿದರು. “ನಾವು ಒಗ್ಗೂಡಿ ಕಾರ್ಯ ನಿರ್ವಹಿಸಲಿದ್ದೇವೆ. ನಮ್ಮ ತಂಡ(ಭಾರತ ಮತ್ತು ಫ್ರಾನ್ಸ್) ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಸದ್ಯಕ್ಕೆ ಯಾವುದೇ ಆತಂಕಕ್ಕೆ ಕಾರಣವಿಲ್ಲ. ಭಾರತದಲ್ಲಿ ಉತ್ತಮ ಸೌಲಭ್ಯಕ್ಕಾಗಿ ನನ್ನ ಹಣವನ್ನು ಹೂಡಿದ್ದೇನೆ ಮತ್ತು ಇಲ್ಲಿ ನನಗೆ ಸೂಕ್ತವಾದ ಸಹಭಾಗಿಯನ್ನು ಕಂಡುಕೊಂಡಿದ್ದೇನೆ” ಎಂದು ಎರಿಕ್ ಹೇಳಿದರು. ಫ್ರೆಂಚ್ ವಿಮಾನವನ್ನು ಭಾರತದಲ್ಲಿ ಉತ್ಪಾದಿಸಲು ಕಂಪೆನಿ ನಡೆಸುವ ಔದ್ಯಮಿಕ ಪ್ರಕ್ರಿಯೆಯ ಉಸ್ತುವಾರಿ ಹೊಂದಿರಲು ನಾನು ಬಯಸಿರುವ ಕಾರಣ ರಿಲಯನ್ಸ್ ಸಂಸ್ಥೆಯನ್ನು ಸಹಭಾಗಿ ಎಂದು ಆಯ್ಕೆ ಮಾಡಿಕೊಳ್ಳಲಾಯಿತು ಎಂದುತ್ತರಿಸಿದರು.

ಯುಪಿಎ ಅವಧಿಯಲ್ಲಿ ರಫೇಲ್ ಒಪ್ಪಂದದ ದರ, ಎನ್‌ಡಿಎ ಅವಧಿಯಲ್ಲಿ ಮಾಡಿಕೊಂಡಿರುವ ಒಪ್ಪಂದಕ್ಕಿಂತ ಕಡಿಮೆಯಿತ್ತು ಎಂಬ ರಾಹುಲ್ ಗಾಂಧಿ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ದರ ಶೇ.2.8ರಷ್ಟು ಅಗ್ಗವಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಎನ್‌ಡಿಎ ಅವಧಿಯ ದರ ಉತ್ತಮವಾಗಿದೆಯಲ್ಲವೇ ಎಂದು ಮರುಪ್ರಶ್ನಿಸಿದರು. ಅಲ್ಲದೆ ಈ ವ್ಯವಹಾರ ಅತ್ಯಂತ ಪಾರದರ್ಶಕವಾಗಿದೆ ಎಂದು ಭಾರತದ ಸುಪ್ರೀಂಕೋರ್ಟ್ ಕೂಡಾ ತಿಳಿಸಿದೆ ಎಂದವರು ಹೇಳಿದರು.

ರಫೇಲ್ ಅತ್ಯುನ್ನತ ಮಟ್ಟದ ಕಾರ್ಯನಿರ್ವಹಣೆಯ ವಿಮಾನವಾಗಿದೆ. ಈ ದೇಶದ ರಕ್ಷಣಾ ಪ್ರಕ್ರಿಯೆಯ ಬೆನ್ನೆಲುಬಾಗಲಿದೆ ರಫೇಲ್ ಯುದ್ಧವಿಮಾನ. ಆದ್ದರಿಂದ ರಫೇಲ್ ಒಪ್ಪಂದವನ್ನು ರಾಜಕೀಯಗೊಳಿಸದೆ , ಈ ವಿಮಾನವು ಭಾರತದ ರಕ್ಷಣಾ ಪಡೆಯ ಬಲವರ್ಧನೆಗೆ ಎಷ್ಟು ಸಹಕಾರಿ ಎಂಬ ಕುರಿತು ಚರ್ಚೆ ಸಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News