ಮಾಹಿತಿ ಸೋರಿಕೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿಯ ಕಂಪ್ಯೂಟರ್ ಜಪ್ತಿ

Update: 2019-02-21 04:28 GMT

ಹೊಸದಿಲ್ಲಿ, ಫೆ.21: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿ ತಂತ್ರಜ್ಞಾನ ವಿಭಾಗವು, ರಹಸ್ಯ ಮಾಹಿತಿ ಸೋರಿಕೆ ಆರೋಪದಲ್ಲಿ ಸಂಸ್ಥೆಯ ಆರಕ್ಕೂ ಹೆಚ್ಚು ಸಿಬ್ಬಂದಿಯ ಕಂಪ್ಯೂಟರ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಧಿಕೃತವಾಗಿ ನಿರ್ಧಾರ ಕೈಗೊಳ್ಳುವ ಮುನ್ನವೇ, ಹೆದ್ದಾರಿ ಯೋಜನೆಗಳು ಹಾಗೂ ನೀತಿಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಯನ್ನು ರಹಸ್ಯವಾಗಿ ಹೆದ್ದಾರಿ ನಿರ್ಮಾಣ ಸಂಸ್ಥೆಗಳಿಗೆ ಮತ್ತು ಇತರ ಗುತ್ತಿಗೆದಾರರಿಗೆ ಪೂರೈಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಾಧಿಕಾರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಇಂಥ ಕ್ರಮ ಕೈಗೊಂಡಿರುವುದು ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ. "ಸಿಬ್ಬಂದಿ ಯಾವುದೇ ಅವ್ಯವಹಾರದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಕೆಲ ಖಾಸಗಿ ವ್ಯಕ್ತಿಗಳು ಕೆಲವೊಂದು ಮಾಹಿತಿ ಹಾಗೂ ಕಡತಗಳನ್ನು ಅನಧಿಕೃತವಾಗಿ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಎನ್‌ಎಚ್‌ಎಐ ಸದಸ್ಯ ಆರ್.ಕೆ.ಚತುರ್ವೇದಿ ಹೇಳಿದ್ದಾರೆ. ಎನ್‌ಎಚ್‌ಎಐನ ಐಟಿ ನೀತಿಗೆ ಅನುಗುಣವಾಗಿ ಕಂಪ್ಯೂಟರ್‌ಗಳನ್ನು ಮೂರು- ನಾಲ್ಕು ತಿಂಗಳಿಗೊಮ್ಮೆ ಸ್ಕ್ಯಾನ್ ಮಾಡಲಾಗುತ್ತದೆ. ಈ ವೇಳೆ ಮಾಹಿತಿ ಸೋರಿಕೆ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆಯವರೆಗೂ ಕಂಪ್ಯೂಟರ್‌ಗಳ ತಪಾಸಣೆ ಪ್ರಕ್ರಿಯೆ ಮುಂದುವರಿದಿದ್ದು, ಮತ್ತಷ್ಟು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬುಧವಾರ ವಶಪಡಿಸಿಕೊಂಡ ಕಂಪ್ಯೂಟರ್‌ಗಳು ಮುಖ್ಯ ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿಗಳದ್ದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News