ಮತ್ತೆ ಬೀದಿಗೆ ಬಂದ ರೈತರು

Update: 2019-02-22 07:00 GMT

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ರೈತರ ಮಹಾರ್ಯಾಲಿ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ನೂರಾರು ಕಿಲೋಮೀಟರ್ ದಾರಿಯನ್ನು ನಡೆಯುತ್ತಲೇ ಕ್ರಮಿಸಿ ಅವರು ಮುಂಬೈ ತಲುಪಿ ಸರಕಾರಕ್ಕೆ ತಮ್ಮ ನೋವುಗಳನ್ನು ತೋಡಿಕೊಂಡಿದ್ದರು. ರೈತರ ಸಂಕಷ್ಟಗಳ ಕುರಿತಂತೆ ಈ ರ್ಯಾಲಿ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಗ್ರಾಮೀಣ ರೈತರನ್ನು ಎಷ್ಟು ಹತಾಶಗೊಳಿಸಿತ್ತು ಎಂದರೆ ಅವರು ಬೀದಿಗಿಳಿಯದೆ ಬೇರೆ ದಾರಿಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈ ಪಾದಯಾತ್ರೆಯಲ್ಲಿ ರೈತರ ಪಾದಗಳು ಹರಿದು ಹೋಗಿದ್ದವು. ಒಬ್ಬ ಮಹಿಳೆಯ ಹರಿದ ಪಾದದ ಚಿತ್ರ ಅಂತರ್‌ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಮಾರ್ಚ್ 2018ರಲ್ಲಿ ನಡೆದ ಮೊತ್ತಮೊದಲ ರೈತರ ದೀರ್ಘಪಾದಯಾತ್ರೆಯಲ್ಲಿ ಉತ್ತರ ಮಹಾರಾಷ್ಟ್ರದ ಸುಮಾರು 40,000 ರೈತರು ಏಳು ದಿನಗಳ ಕಾಲ ಪಾದಯಾತ್ರೆ ಕೈಗೊಂಡಿದ್ದರು. ಮಾರ್ಚ್ 6ರಿಂದ 12ರವರೆಗೆ ರೈತರು ನಾಸಿಕ್‌ನಿಂದ ಮುಂಬೈವರೆಗೆ ಶಾಂತಿಯುತವಾಗಿ ಪಾದಯಾತ್ರೆಯಲ್ಲಿ ಸಾಗಿ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು. ಮಹಾರಾಷ್ಟ್ರ ಸರಕಾರವು ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು . ಮುಖ್ಯಮಂತ್ರಿ ದೇವೇಂದ್ರ ಫಡ್ನ್ನವೀಸ್ ಖುದ್ದು ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಭರವಸೆ ನೀಡಿದ್ದರು. ಈ ವೇಳೆ, ಮೇ 1, 2018ರ ಒಳಗಾಗಿ ಅರಣ್ಯ ಕೃಷಿಭೂಮಿಯ ಮೇಲಿನ ರೈತರ ಹಕ್ಕನ್ನು ಅವರಿಗೆ ನೀಡಲಾಗುವುದು ಎಂದು ಫಡ್ನವೀಸ್ ತಿಳಿಸಿದ್ದರು. ಇದರೊಂದಿಗೆ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ಒಂದೇಒಂದು ಬೇಡಿಕೆಯನ್ನೂ ಸರಕಾರ ಈಡೇರಿಸಿಲ್ಲ.

ಚುನಾವಣೆ ಹತ್ತಿರ ಬರುತ್ತಿದೆ. ರೈತರ ಸಂಕಟಗಳ ಪರವಾಗಿ ಮಾತನಾಡುತ್ತಿದ್ದ ಶಿವಸೇನೆ ಇತ್ತೀಚೆಗೆ ತನ್ನ ದಾಟಿಯನ್ನು ಬದಲಿಸಿದೆ. ಅದು ಬಿಜೆಪಿಯೊಂದಿಗೆ ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಲು ನಿರ್ಧರಿಸಿದೆ. ರೈತರ ಬೇಡಿಕೆಗಳ ಕುರಿತಂತೆ ಎಲ್ಲರೂ ವೌನ ತಳೆದಿದ್ದಾರೆ. ಈ ಕಾರಣದಿಂದಲೇ ಇದೀಗ ರೈತರು ಎರಡನೇ ಮಹಾಯಾತ್ರೆಯನ್ನು ಆರಂಭಿಸಿದ್ದಾರೆ. ಪೊಲೀಸರು ಕಠಿಣ ನಿರ್ಬಂಧಗಳನ್ನು ಹೇರಿದ್ದರೂ ಮತ್ತು ಹಲವು ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದರೂ ಎರಡನೇ ಐತಿಹಾಸಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ರೈತರು ನಾಸಿಕ್‌ನ ಮುಂಬೈ ನಾಕಾ ತಲುಪಿದ್ದಾರೆ. 180 ಕಿ.ಮೀ. ದೂರವನ್ನು ಕ್ರಮಿಸಲಿರುವ ರೈತರು ಫೆಬ್ರವರಿ 27ರಂದು ಮುಂಬೈ ತಲುಪುವ ಸಾಧ್ಯತೆಯಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)ದ ಅಂಗ ಸಂಸ್ಥೆಯಾಗಿರುವ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರೈತರ ದೀರ್ಘ ಪಾದಯಾತ್ರೆಗೆ ಕರೆ ನೀಡಿದೆ. ಈ ಬಾರಿ 23 ಜಿಲ್ಲೆಗಳ ಸುಮಾರು 80,000 ರೈತರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿ ಎಐಕೆಎಸ್ ಹದಿನೈದು ಬೇಡಿಕೆಗಳನ್ನು ಮುಂದಿಟ್ಟಿದೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಮಾರ್ಚ್, 2018ರಲ್ಲಿ ನಡೆದ ಪಾದಯಾತ್ರೆಯ ಸಮಯದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವುದು. ಮಹಾರಾಷ್ಟ್ರ ಸರಕಾರ 2017ರಲ್ಲಿ ರೈತರ 34,000 ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರೂ ಈವರೆಗೆ 17,000 ಕೋಟಿ ರೂ. ಹಂಚಲೂ ಅದಕ್ಕೆ ಸಾಧ್ಯವಾಗಿಲ್ಲ. ಇದೇ ರೀತಿ ಭೂರಹಿತ ರೈತರಿಗೆ ಜಮೀನಿನ ಹಕ್ಕನ್ನು ನೀಡುವುದಾಗಿ ಮತ್ತು ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತರುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ನಾಸಿಕ್‌ನ ಸುರ್ಗುನ ತೆಹ್ಸಿಲ್ ಹೊರತಾಗಿ ಇನ್ನೆಲ್ಲೂ ಜಮೀನಿನ ಹಕ್ಕುಪತ್ರವನ್ನು ನೀಡಿಲ್ಲ.

 ರೈತರು ಉಳುಮೆ ಮಾಡುತ್ತಿರುವ ದೇಗುಲಗಳ ಒಡೆತನದ ಜಮೀನನ್ನು ರೈತರಿಗೆ ನೀಡುವಂತೆ ರೈತ ಸಂಘಟನೆಗಳು ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ.ಜಮೀನುರಹಿತ ರೈತರು ಉಳುಮೆ ಮಾಡುತ್ತಿರುವ ಆರು ಲಕ್ಷ ಹೆಕ್ಟೇರ್‌ಗೂ ಅಧಿಕ ಜಮೀನು ದೇವಸ್ಥಾನಗಳ ಸುಪರ್ದಿಯಲ್ಲಿದೆ. ಹಾಗಾಗಿ ಈ ರೈತರು ಈ ಜಮೀನಿನ ಮೇಲೆ ಸ್ವಾಭಾವಿಕ ಹಕ್ಕನ್ನು ಹೊಂದಿದ್ದಾರೆ. ವೃದ್ಧ ರೈತರ ಪಿಂಚಣಿಯನ್ನು ಮಾಸಿಕ 600ರೂ.ನಿಂದ 3,000ರೂ.ಗೆ ಏರಿಸಬೇಕೆಂದು ರೈತರು ಆಗ್ರಹಿಸಿದ್ದರು. ಆದರೆ ಸರಕಾರ ಕೇವಲ ಮಾಸಿಕ 900ರೂ.ಗೆ ಏರಿಕೆ ಮಾಡಿದೆ. ರೈತಸ್ನೇಹಿ ಬೆಳೆ ವಿಮೆ ಯೋಜನೆ, ಬೆಳೆಗಳಿಗೆ ಉತ್ತಮ ಬೆಲೆ, ಗದ್ದೆಗಳನ್ನು ಬರಗಾಲಮುಕ್ತಗೊಳಿಸುವ ಸಲುವಾಗಿ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವಂತೆ ರೈತರು ಸರಕಾರಕ್ಕೆ ಮನವಿ ಮಾಡಿದ್ದರು. ತುರ್ತು ಕ್ರಮವಾಗಿ ಸರಕಾರ ಕುಡಿಯುವ ನೀರನ್ನು ಪೂರೈಸಬೇಕು, ನರೇಗಾದಡಿ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಶಾಲಾ ಮತ್ತು ಕಾಲೇಜು ಶುಲ್ಕವನ್ನು ಮನ್ನಾ ಮಾಡಬೇಕು ಎನ್ನುವುದೂ ಹೋರಾಟಗಾರರ ಬೇಡಿಕೆಯಾಗಿದೆ. ವಿಪರ್ಯಾಸವೆಂದರೆ ಬ್ಯಾಂಕುಗಳಿಂದ ಬೃಹತ್ ಸಾಲಗಳನ್ನು ಎತ್ತಿ, ಅವುಗಳ ಮುಳುಗಡೆಗೆ ಕಾರಣವಾಗುತ್ತಿರುವ ಕಾರ್ಪೊರೇಟ್ ಶಕ್ತಿಗಳ ರಕ್ಷಣೆಗಾಗಿ ಸರಕಾರ ತುರ್ತು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. 12 ಬ್ಯಾಂಕ್‌ಗಳಿಗೆ ಹೆಚ್ಚುವರಿ ಬಂಡವಾಳಕ್ಕಾಗಿ ಸರಕಾರ 48 ಸಾವಿರ ಕೋಟಿ ರೂಪಾಯಿಯ ಮೊತ್ತದ ಯೋಜನೆಯನ್ನು ಘೋಷಿಸಿದೆ. ಇಂದು ದೇಶದ ರೈತರ ಒಟ್ಟು ಸಾಲದ ಮೊತ್ತದ ನಾಲ್ಕು ಪಟ್ಟಿನಷ್ಟು, ಕಾರ್ಪೊರೇಟ್ ವಲಯದ ವಸೂಲಿಯಾಗದ ಸಾಲದ ಮೊತ್ತವಿದೆ. ಆದರೂ ಕಾರ್ಪೊರೇಟ್ ಜನರನ್ನು ರಕ್ಷಿಸಲು ಸರಕಾರದ ಬಳಿ ಹಣವಿದೆ. ರೈತರ ಬೇಡಿಕೆಗಳ ವಿಷಯ ಬಂದಾಗಷ್ಟೇ ಅದಕ್ಕೆ ಹಣದ ಕೊರತೆ ಎದುರಾಗುತ್ತದೆ. ಪುಲ್ವಾಮ ದಾಳಿಯ ಬಳಿಕ ದೇಶ, ಸೈನಿಕರ ಬಗ್ಗೆ ಮಾತನಾಡುತ್ತಿದೆ.

ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅರ ‘ಜೈ ಜವಾನ್-ಜೈ ಕಿಸಾನ್’ ಘೋಷಣೆಯ ಅಣಕವಿದು. ಜವಾನರು ಮತ್ತು ಕಿಸಾನರು ಬೇರೆ ಬೇರೆಯಲ್ಲ. ಗಡಿಯ ಭದ್ರತೆ ಎಷ್ಟು ಮುಖ್ಯವೋ ಆಹಾರ ಭದ್ರತೆಯೂ ದೇಶದ ಸಾರ್ವಭೌಮತೆಯ ದೃಷ್ಟಿಯಿಂದ ಅಷ್ಟೇ ಮುಖ್ಯ. ಈ ದೇಶದ ಜನರಿಗೆ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಅನ್ನ ಹಾಕುತ್ತಿರುವ ರೈತರನ್ನು ಮರೆತ ಸರಕಾರಕ್ಕೆ ದೇಶಪ್ರೇಮದ ಕುರಿತಂತೆ ಮಾತನಾಡುವ ಹಕ್ಕಿಲ್ಲ. ಸೈನಿಕರ ಮೇಲೆ ತೋರಿಸುವ ಪ್ರೀತಿಯನ್ನು ನಾವು ರೈತರ ಜೊತೆಗೂ ತೋರಬೇಕಾಗಿದೆ. ಅದು ಕೂಡ ದೇಶಪ್ರೇಮದ ಭಾಗವೇ ಆಗಿದೆ. ಆದುದರಿಂದ ಮುಂಬೈಯಲ್ಲಿ ಸೇರುವ ರೈತರ ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸಿ ದೇಶಪ್ರೇಮವನ್ನು ಸಾಬೀತು ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ನೆರೆದ ರೈತರ ತಲೆಗೆ ‘ಅರ್ಬನ್ ನಕ್ಸಲ್’ ಎಂಬ ಪಟ್ಟ ಕಟ್ಟಿ ಅವರನ್ನು ಮಟ್ಟ ಹಾಕುವ ಪ್ರಯತ್ನವನ್ನು ಸರಕಾರ ಮಾಡಿದರೆ ಅದು ಇನ್ನಷ್ಟು ದುರಂತಗಳಿಗೆ ಕಾರಣವಾಗಬಹುದು. ರೈತರಿಗೆ ಮಾಡುವ ಅನ್ಯಾಯ ದೇಶಕ್ಕೆ ಮಾಡುವ ದ್ರೋಹ ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡು ಪರಿಸ್ಥಿತಿಯನ್ನು ಸರಕಾರ ನಿರ್ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News