ಆರೆಸ್ಸೆಸ್ ಚುನಾವಣಾ ಕಾರ್ಯತಂತ್ರ ಬದಲಿಸಿದ ಪುಲ್ವಾಮ ದಾಳಿ

Update: 2019-02-22 03:35 GMT

ನಾಗ್ಪುರ, ಫೆ. 22: ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಕಾರ್ಯತಂತ್ರವನ್ನು ಬದಲಿಸಿಕೊಂಡಿರುವ ಆರೆಸ್ಸೆಸ್, ಪುಲ್ವಾಮ ದಾಳಿಯ ಬಳಿಕ ರಾಮಮಂದಿರ ವಿವಾದವನ್ನು ಹಿಂದಿಕ್ಕಿ ಭಯೋತ್ಪಾದನೆ ವಿಚಾರವನ್ನೇ ಪ್ರಮುಖ ಚುನಾವಣಾ ವಿಷಯವಾಗಿ ಬಿಂಬಿಸಲು ನಿರ್ಧರಿಸಿದೆ.

ಗುರುವಾರ ನಡೆದ ಆರೆಸ್ಸೆಸ್‌ನ ವಿದರ್ಭ ಪ್ರಾಂತ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.

ಈ ಸಭೆಯಲ್ಲಿ ಸಂಘ ಪರಿವಾರದ ಎಲ್ಲ 36 ಸಹ ಸಂಘಟನೆಗಳ ಪ್ರತಿನಿಧಿಗಳು ಕೂಡಾ ಭಾಗವಹಿಸಿದ್ದರು. ಮುಂದಿನ ತಿಂಗಳ ಆರಂಭದಿಂದ ಶುರುವಾಗುವ ಚುನಾವಣಾ ಪ್ರಚಾರಕ್ಕೆ ಸ್ವಯಂಸೇವಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಲ್ಲೆಡೆ ಇಂಥ ಪ್ರಾಂತ ಮಟ್ಟದ ಸಭೆಗಳನ್ನು ಆರೆಸ್ಸೆಸ್ ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿಯುವಂತೆ ನೆರವಾಗುವುದು ಆರೆಸ್ಸೆಸ್‌ನ ಉದ್ದೇಶ. ಈ ತಿಂಗಳ ಆರಂಭ ದಲ್ಲಿ ನಿಧಾನವಾಗಿ ಚಾಲನೆ ಪಡೆದ "ಘರ್ ಘರ್ ಮೋದಿ" ಅಭಿಯಾನ ಪ್ರಮುಖವಾಗಿ ರಾಮಮಂದಿರ ವಿಚಾರವನ್ನು ಪ್ರಸ್ತಾಪಿಸಿತ್ತು. ಆದರೆ ಫೆ.14ರ ಘಟನೆ ಬಳಿಕ, ಆರೆಸ್ಸೆಸ್ ತಮ್ಮ ಪ್ರಚಾರ ಕಾರ್ಯತಂತ್ರವನ್ನು ಮರುರೂಪಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

"ಇದೀಗ ರಾಮಮಂದಿರದ ಬದಲು, ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ದೇಶದಲ್ಲಿ ಸುಭದ್ರ ಸರ್ಕಾರದ ಅಗತ್ಯವಿದೆ" ಎಂಬ ವಿಚಾರವನ್ನು ಮನದಟ್ಟು ಮಾಡಲು ಆರೆಸ್ಸೆಸ್ ಮುಂದಾಗಿದೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News