3 ಕೆಜಿ ಬೀಫ್ ಪತ್ತೆ ಮಾಡುವ ಮೋದಿಗೆ 350 ಕೆಜಿ ಆರ್ ಡಿಎಕ್ಸ್ ಪತ್ತೆ ಮಾಡಲು ಸಾಧ್ಯವಾಗಿಲ್ಲ

Update: 2019-02-22 09:35 GMT

ಹೊಸದಿಲ್ಲಿ, ಫೆ.22: ಪ್ರಧಾನಿ ನರೇಂದ್ರ ಮೋದಿ 3 ಕೆಜಿ ಗೋಮಾಂಸ ಪತ್ತೆ ಮಾಡಬಲ್ಲರು; ಆದರೆ 350 ಕೆಜಿ ಆರ್‍ಡಿಎಕ್ಸ್ ಪತ್ತೆ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ದಿಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರೂನ್ ಯೂಸುಫ್ ವ್ಯಂಗ್ಯವಾಡಿದ್ದಾರೆ.

ಪುಲ್ವಾಮಾದಲ್ಲಿ 40 ಮಂದಿ ಸಿಆರ್‍ ಪಿಎಫ್ ಯೋಧರ ಸಾವಿಗೆ ಕಾರಣವಾದ ಫೆಬ್ರವರಿ 14ರ ಘಟನೆ ಹಿನ್ನೆಲೆಯಲ್ಲಿ ಯೂಸುಫ್ ಟ್ವಿಟರ್‍ನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಯನ್ನು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, "ನಾಚಿಕೆಗೇಡು ಮತ್ತು ಬೇಜವಾಬ್ದಾರಿಯುತ ಹೇಳಿಕೆ" ಎಂದು ಟೀಕಿಸಿದ್ದಾರೆ. ಯೂಸುಫ್ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಇಬ್ಬಂದಿತನವನ್ನು ಬಹಿರಂಗಪಡಿಸಿದೆ ಎಂದು ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜೀವ್ ಬಬ್ಬರ್ ತಿರುಗೇಟು ನಿಡಿದ್ದಾರೆ.

"ಅವರು ಕೆಲ ದಿನಗಳವರೆಗೂ ಕಾಯಲಾರರು; ಭದ್ರತಾ ಏಜೆನ್ಸಿಗಳನ್ನು ಅವಮಾನಿಸಲು ಆರಂಭಿಸಿದ್ದಾರೆ. ಇದು ಅವರ ದ್ವಿಮುಖ ಧೋರಣೆಯನ್ನು ತೋರಿಸುತ್ತದೆ. ಸರ್ವಪಕ್ಷ ಸಭೆಯಲ್ಲಿ ಸರ್ಕಾರದ ಜತೆಗಿರುವುದಾಗಿ ಭರವಸೆ ನೀಡಿದ್ದ ಅವರು ಇದೀಗ, ಈ ನಾಚಿಕೆಗೇಡು ಹೇಳಿಕೆ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ" ಎಂದು ಬಬ್ಬರ್ ಟೀಕಿಸಿದ್ದಾರೆ. ಯೂಸುಫ್ ಹೇಳಿಕೆಯನ್ನು ದೆಹಲಿ ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮುಹಮ್ಮದ್ ಹಾರೂನ್ "ಆಕ್ಷೇಪಾರ್ಹ" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News