ಸಬ್‌ ಅರ್ಬನ್ ರೈಲ್ವೆ ಯೋಜನೆ ಜಾರಿ: ರೈಲ್ವೆ ಸಚಿವ ಗೋಯೆಲ್-ಸಿಎಂ ಕುಮಾರಸ್ವಾಮಿ ಚರ್ಚೆ

Update: 2019-02-22 13:11 GMT

ಬೆಂಗಳೂರು, ಫೆ.2: ಕೇಂದ್ರದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಹಾಗೂ ಉಪನಗರ ರೈಲ್ವೆ ಯೋಜನೆ ಅನುಷ್ಟಾನ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಸಮಾಲೋಚನೆ ನಡೆಸಿದರು.

ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಉಪನಗರ ರೈಲು ಯೋಜನೆಯ ಬಗ್ಗೆ ರಾಜ್ಯ ಸರಕಾರ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದರೆ ಕಾರ್ಯಾರಂಭಿಸಲಾಗುವುದು ಎಂದರು.

ರೈಲ್ವೆ ಇತಿಹಾಸದಲ್ಲೇ ಇಷ್ಟು ವೇಗವಾಗಿ ಯಾವುದೇ ಕೆಲಸ ಆಗಿಲ್ಲ. 23 ಸಾವಿರ ಕೋಟಿ ರೂ.ಯೋಜನೆಯಲ್ಲಿ 160 ಕಿ.ಮೀ.ದೂರ ಈ ಕೆಲಸ ನಡೆಯಲಿದೆ. ಮೆಟ್ರೋ, ರೈಲ್ವೆ, ವಿಮಾನ ನಿಲ್ದಾಣಗಳಿಗೆ ಇದರಿಂದ ಸಂಪರ್ಕ ಸಾಧ್ಯವಾಗಲಿದೆ. 80 ನಿಲ್ದಾಣಗಳಿಗೆ ಸಬ್ಅರ್ಬನ್ ಯೋಜನೆಯಿಂದ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದರು.

ಆರು ತಿಂಗಳಲ್ಲಿ ಇಡೀ ಕರ್ನಾಟಕ ವೈಫೈ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲ ಸಬ್ಅರ್ಬನ್ ರೈಲ್ವೆ ನಿಲ್ದಾಣಗಳಿಗೂ ವೈಫೈ ಸೌಲಭ್ಯ ಒದಗಿಸಲಾಗುವುದು ಎಂದ ಅವರು, ಬೆಂಗಳೂರು ಸಬ್ಅರ್ಬನ್ ರೈಲ್ವೆ ಯೋಜನೆ ಜಾರಿಗೆ ರಾಜ್ಯ ಸರಕಾರ 19 ಷರತ್ತುಗಳನ್ನು ವಿಧಿಸಿತ್ತು. ಈ ಸಂಬಂಧ ನಾನು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಇಂದು ಒಂದೇ ಸಭೆಯಲ್ಲಿ ಆ ಎಲ್ಲ ಷರತ್ತುಗಳನ್ನು ರದ್ದು ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದರು.

ಸುಮಾರು 6 ಸಾವಿರ ಕೋಟಿ ರೂ.ಮೌಲ್ಯದ ಭೂಮಿಯನ್ನು ಕೇವಲ ಒಂದು ರೂ. ಗೆ ಗುತ್ತಿಗೆಗೆ ನೀಡಲಾಗುತ್ತಿದೆ. 70 ಕಿ.ಮೀ ಮಾರ್ಗ ಎತ್ತರಿಸಿದ ಮಾರ್ಗ ಹಾಗೂ 90 ಕೀಮಿ ಉದ್ದ ಸಾಧಾರಣ ಮಾರ್ಗವಾಗಿ ರೈಲ್ವೆ ಮಾರ್ಗ ರೂಪಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ ಎಂದು ತಿಳಿಸಿದರು.

ಬೆಂಗಳೂರು ಸಬ್ಅರ್ಬನ್ ರೈಲು ಅನಂತಕುಮಾರ್ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದು ಅವರ ಸಹೋದರನಾಗಿ ನನ್ನ ಕರ್ತವ್ಯ ಎಂದ ಅವರು, ಈ ಯೋಜನೆ 2016ರಲ್ಲೆ ಆರಂಭವಾಗಿದ್ದು, ಚುನಾವಣೆ ಘೋಷಣೆಯಾದರೂ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಫೆ.25ರಂದು ಕೇಂದ್ರ ಸಂಪುಟದ ಅನುಮೋದನೆ ಪಡೆದು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಸಬ್‌ಅರ್ಬನ್ ರೈಲ್ವೆ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಉಪನಗರ ರೈಲ್ವೆ ವಿಷಯದಲ್ಲಿ ಗೋಯೆಲ್ ಅವರಿಗೆ ವೈಯಕ್ತಿಕ ಆಸಕ್ತಿ ಇದೆ. 1995ರಲ್ಲಿ ದೇವೇಗೌಡರು ಸಿಎಂ ಆಗಿದ್ದ ವೇಳೆ ಉಪನಗರ ರೈಲು ಯೋಜನೆ ಬಗ್ಗೆ ಪ್ರಸ್ತಾಪವಾಗಿತ್ತು. ಇದೀಗ ಸ್ವತಃ ಪಿಯೂಷ್ ಗೋಯೆಲ್ ಆಸಕ್ತಿ ವಹಿಸಿ ಎಲ್ಲದಕ್ಕೂ ಕ್ಲಿಯರೆನ್ಸ್ ಕೊಡ್ತಿದ್ದಾರೆ. ಇಂದಿನ ಸಭೆಯಲ್ಲಿಯೂ ಕೇಂದ್ರ, ರಾಜ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲ ರೀತಿಯ ಒಡಂಬಡಿಕೆಗೆ ಸಿದ್ದವಾಗಿದ್ದೇವೆ. 400ಕೋಟಿ ರೂ. ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ ಎಂದರು.

ವೈಯಕ್ತಿಕವಾಗಿ ರೈಲ್ವೆ ಸಚಿವ ಗೋಯೆಲ್ ಆಸಕ್ತಿ ವಹಿಸಿ ಕೆಲಸ ಮಾಡಿಕೊಡಲು ನಮ್ಮ ನಿಬಂಧನೆ ಒಪ್ಪಿದ್ದಾರೆ. ಅದರ ಪ್ರಕಾರ ಇಲಾಖೆ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಿದ್ದು. ಎಲ್ಲ ವಿಚಾರಗಳನ್ನೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಿದ್ದೇವೆ. ಉಪನಗರ ರೈಲು ಯೋಜನೆಗೆ ಶಿಲಾನ್ಯಾಸ ನೆರವೇರಿಸಲು ತೀರ್ಮಾನ ಮಾಡಿದ್ದೇವೆ ಎಂದರು.

ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಅರವಿಂದ ಲಿಂಬಾವಳಿ, ಲೇಹರ್ ಸಿಂಗ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಕೇಂದ್ರ-ರಾಜ್ಯ ಸರಕಾರ ಡಬಲ್ ಎಂಜಿನ್ ರೈಲಿನಂತೆ ಕಾರ್ಯನಿರ್ವಹಿಸಬೇಕು. ಕರ್ನಾಟಕದ ಜನತೆ ಬಿಜೆಪಿಗೆ 104 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದರೆ ಈ ಡಬಲ್ ಎಂಜಿನ್ ಮತ್ತಷ್ಟು ಚೆನ್ನಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳುತ್ತಿತ್ತು’

-ಪಿಯೂಷ್ ಗೋಯೆಲ್, ರೈಲ್ವೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News