ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಆ್ಯಸಿಡ್ ಎರಚಿದ ಪತಿ

Update: 2019-02-22 13:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.22: ಪತ್ನಿಯ ಮೇಲೆ ಪತಿಯೇ ಆ್ಯಸಿಡ್ ದಾಳಿ ನಡೆಸಿರುವ ದುರ್ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿರಂಜಿತ್ ಬಿಸ್ವಾನ್ ಎಂಬಾತ ತನ್ನ ಪತ್ನಿ ತಪಾಸ್ಸಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಈ ದಂಪತಿ, ಬೆಂಗಳೂರಿನ ನಾಗರಬಾವಿ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಫೆಬ್ರವರಿ 20 ರಂದು ದಂಪತಿ ಆಸ್ಪತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಚಿರಂಜಿತ್ ತನ್ನ ಪತ್ನಿ ಬಳಿ ಹಣ ಕೇಳಿದ್ದಾನೆ. ಹಣ ಇಲ್ಲ ಎಂದಾಗ ಪತ್ನಿಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ಕೃತ್ಯ ಎಸಗಿದ ನಂತರದಲ್ಲಿ ಆತ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ರಸ್ತೆಯಲ್ಲಿ ಚಿರಾಡುತ್ತಿದ್ದ ಮಹಿಳೆಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News