ಪಠಾಣ್ ಕೋಟ್ ದಾಳಿಗೆ ಮುನ್ನ ಉಗ್ರರು ಅಪಹರಿಸಿದ್ದ ಪೊಲೀಸ್ ಅಧಿಕಾರಿ ಈಗ ಎಲ್ಲಿದ್ದಾರೆ ಗೊತ್ತಾ?

Update: 2019-02-22 14:35 GMT

 ಗುರುದಾಸಪುರ(ಪಂಜಾಬ್),ಫೆ.22: ಪಠಾಣಕೋಟ್ ವಾಯುಪಡೆ ನೆಲೆಯ ಮೇಲಿನ ದಾಳಿಗೆ ಕೆಲವೇ ಗಂಟೆಗಳ ಮುನ್ನ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟಿದ್ದ ಗುರುದಾಸಪುರದ ಮಾಜಿ ಪೊಲೀಸ್ ಅಧೀಕ್ಷಕ(ಎಸ್‌ಪಿ) ಸಲ್ವಿಂದರ್ ಸಿಂಗ್ ಅವರಿಗೆ ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಭ್ರಷ್ಟಾಚಾರ ಪ್ರಕರಣವೊಂದರಲ್ಲಿಯೂ ಸಿಂಗ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾ.ಪ್ರೇಮ ಕುಮಾರ್ ಅವರು,ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಿದರು.

ಸಿಂಗ್ ಅವರು ಅತ್ಯಾಚಾರ ಸಂತ್ರಸ್ತೆಯ ಪತಿಯ ವಿರುದ್ಧದ ಬೇರೊಂದು ಅತ್ಯಾಚಾರ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರು ಮತ್ತು ತನಿಖಾಧಿಕಾರಿಯಾಗಿ ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು. ಆಕೆಯ ಪತಿಯನ್ನು ಆರೋಪದಿಂದ ಮುಕ್ತಗೊಳಿಸುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ತನ್ನ ಗಂಡನ ವಿರುದ್ಧದ ಕಾನೂನುಕ್ರಮವನ್ನು ಮುಚ್ಚಿಹಾಕಲು 50,000ರೂ.ಗಳ ಲಂಚವನ್ನೂ ಸಿಂಗ್ ಕೇಳಿದ್ದರು ಎಂದು ಮಹಿಳೆಯು ಆರೋಪಿಸಿದ್ದಳು.

ಸಿಂಗ್ ಅವರ ಮೊಬೈಲ್ ಕರೆಗಳ ವಿವರಗಳನ್ನು ಪಡೆದಿದ್ದ ಪೊಲೀಸರು ಅವರು ನಿಯಮಿತವಾಗಿ ಮಹಿಳೆಯ ಸಂಪರ್ಕದಲ್ಲಿದ್ದರು ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು.

ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸಿಂಗ್ ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದರು ಮತ್ತು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯವು ಅವರನ್ನು ‘ಘೋಷಿತ ಅಪರಾಧಿ’ ಎಂದು ಹೆಸರಿಸಿತ್ತು.

ಅತ್ಯಾಚಾರ ಸಂತ್ರಸ್ತೆಯ ಪತಿ ಆಗಿನ ಪಂಜಾಬ್ ಮುಖ್ಯಮಂತ್ರಿ ಪ್ರಕಾಶಸಿಂಗ್ ಬಾದಲ್ ಅವರಿಗೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿದ ಬಳಿಕ ಸಿಂಗ್ ವಿರುದ್ಧ ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು.

2017,ಎ.20ರಂದು ಸಿಂಗ್ ಗುರುದಾಸಪುರ ನ್ಯಾಯಾಲಯಕ್ಕೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News