ಈಶಾನ್ಯ ರಾಜ್ಯಗಳಲ್ಲಿ ವಾರಂಟ್ ಇಲ್ಲದೆ ಬಂಧಿಸಲು ಅಸ್ಸಾಂ ರೈಫಲ್ಸ್‌ಗೆ ಅಧಿಕಾರ ನೀಡಿದ ಕೇಂದ್ರ

Update: 2019-02-22 16:31 GMT

ಹೊಸದಿಲ್ಲಿ, ಫೆ. 22: ಈಶಾನ್ಯದ 5 ರಾಜ್ಯಗಳಲ್ಲಿ ವಾರಂಟ್ ಇಲ್ಲದೆ ಶೋಧನೆ ನಡೆಸಲು ಹಾಗೂ ಬಂಧಿಸಲು ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ಗೆ ಗೃಹ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

ಅಸ್ಸಾಂ ರೈಫಲ್ಸ್ ದೀರ್ಘ ಕಾಲದಿಂದ ಈಶಾನ್ಯದಲ್ಲಿ ಉಗ್ರ ನಿಗ್ರಹ ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಆದರೆ, ಈಶಾನ್ಯ ಕೆಲವು ಪ್ರದೇಶಗಳಲ್ಲಿ ಶಸಸ್ತ್ರ ಪಡೆ (ವಿಶೇಷ) ಅಧಿಕಾರ ಕಾಯ್ಡೆ (ಎಎಫ್‌ಎಸ್‌ಪಿಎ) ಅವರಿಗೆ ಈ ರಕ್ಷಣೆ ನೀಡಿತ್ತು. ಉಗ್ರರು ಹಾಗೂ ಭಯೋತ್ಪಾದಕರ ಬೆದರಿಕೆಗಳು ಇಳಿಕೆಯಾದ ಬಳಿಕ ಮೇಘಾಲಯ ಹಾಗೂ ಅರುಣಾಚಪ್ರದೇಶದ ಕೆಲವು ಪ್ರದೇಶಗಳಲ್ಲಿ ಈ ಕಾಯ್ದೆ ರದ್ದುಗೊಳಿಸಲಾಗಿತ್ತು.

 ಕೇಂದ್ರ ಗೃಹ ಸಚಿವಾಲಯದ ಈ ನೂತನ ಆದೇಶವು ಎಎಫ್‌ಎಸ್‌ಪಿಎ ಕಾಯ್ದೆ ರದ್ದುಗೊಂಡ ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್ ಯೋಧರಿಗೆ ರಕ್ಷಣೆ ನೀಡಲಿದೆ. ಅಪರಾಧ ದಂಡ ಸಂಹಿತೆ ಅಡಿಯಲ್ಲಿ ವಾರಂಟ್ ಇಲ್ಲದೆ ಬಂಧಿಸುವ ಹಾಗೂ ಶೋಧಿಸುವ ಅಧಿಕಾರವನ್ನು ಅಸ್ಸಾಂ ರೈಫಲ್ಸ್‌ಗೆ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಅಧಿಸೂಚನೆ ಹೇಳಿದೆ.

ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಹಾಗೂ ಮಿರೆರಾಂಗಳಲ್ಲಿ ಸಿಆರ್‌ಪಿಸಿ ಅಡಿಯಲ್ಲಿ ಅಸ್ಸಾಂ ರೈಫಲ್ಸ್‌ನ ಯೋಧರು ಈ ಅಧಿಕಾರ ಪಡೆಯಲಿದ್ದಾರೆ.

 ಮ್ಯಾನ್ಮಾರ್‌ನ ಗಡಿ ಕಾಯುವ ಅಸ್ಸಾಂ ರೈಫಲ್ಸ್‌ಗೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಸಂಚಾರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಕ್ತ ಅಧಿಕಾರದ ಅಗತ್ಯತೆ ಇದೆ ಎಂದು ಗೃಹ ಸಚಿವಾಲಯ ಹೇಳಿದೆ.

 ಭೂ ಗಡಿ ದಾಟುವ ಕುರಿತು ಭಾರತ ಹಾಗೂ ಮ್ಯಾನ್ಮಾರ್ 2018ರಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿದ ಬಳಿಕ ಅಸ್ಸಾಂ ರೈಫಲ್‌ನ ಮುಕ್ತ ಸಂಚಾರ ಸುಗಮಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News