ವಿಜ್ಞಾನ ಸಾಹಿತ್ಯ ಎರವಲು ಪಡೆದುಕೊಂಡದ್ದಾಗಿದೆ: ಅನುವಾದಕ ಕೆ.ಪುಟ್ಟಸ್ವಾಮಿ

Update: 2019-02-22 17:45 GMT

ಬೆಂಗಳೂರು, ಫೆ.22: ಅನುವಾದ ಹಾಗೂ ಜನಪ್ರಿಯ ವಿಜ್ಞಾನ ಸಾಹಿತ್ಯ ಎಲ್ಲವೂ ಪಾಶ್ಚಿಮಾತ್ಯ ಸಾಹಿತ್ಯದಿಂದ ಎರವಲು ಪಡೆದುಕೊಂಡದ್ದಾಗಿದೆ ಎಂದು ವಿಮರ್ಶಕ ಹಾಗೂ ಅನುವಾದಕ ಡಾ.ಕೆ.ಪುಟ್ಟಸ್ವಾಮಿ ಹೇಳಿದ್ದಾರೆ.

ಶನಿವಾರ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ಅನುವಾದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹಳ ಹಿಂದಿನಿಂದಲೂ ದೇಶೀಯ ವಿಜ್ಞಾನದಲ್ಲಿರುವುದನ್ನು ಮರೆಮಾಚಿ, ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆಯುವುದನ್ನು ರೂಢಿಸಿಕೊಂಡಿದ್ದೇವೆ ಎಂದರು.

ನಮ್ಮ ದೇಶದಲ್ಲಿ ಸುಮಾರು 1500 ವರ್ಷಗಳ ಹಿಂದೆ ಪಾಶ್ಚಿಮಾತ್ಯ ವಿಜ್ಞಾನಕ್ಕಿಂತ ವಿಶಾಲವಾದ ಹಾಗೂ ಅರ್ಥಗರ್ಭಿತವಾದ ಇತಿಹಾಸವಿತ್ತು. ಪರಮಾಣು ಸಿದ್ಧಾಂತ, ವೈದ್ಯ ವಿಜ್ಞಾನ, ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಹಲವು ಇದ್ದವು ಎಂದ ಅವರು, ಕೌಟಿಲ್ಯನ ಸಿದ್ಧಾಂತವನ್ನು ನಾವೆಲ್ಲರೂ ಅರ್ಥಶಾಸ್ತ್ರವಾಗಿಯಷ್ಟೇ ನೋಡಿದ್ದೇವೆ. ಆದರೆ, ಅದರಲ್ಲಿ ಅರ್ಥಶಾಸ್ತ್ರವನ್ನು ಮೀರಿದ ವಿಜ್ಞಾನವಿದೆ ಎಂಬುದನ್ನು ಇತ್ತೀಚಿನ ಕೆಲವು ವಿಜ್ಞಾನಿಗಳು ಹುಡುಕಿಕೊಂಡಿದ್ದಾರೆ ಎಂದು ಹೇಳಿದರು.

ಭಾರತದಲ್ಲಿದ್ದ ಸುಸಂಸ್ಕೃತವಾದ ಸಂಪತ್ತು ಹಾಗೂ ವಿಜ್ಞಾನವನ್ನು ಅಂದಿನ ವಿಜ್ಞಾನಿಗಳು ಹಾಗೂ ಜನರು ಬೆಳೆಸಿಕೊಂಡು ಹೋಗಲಿಲ್ಲ. ಅದರ ಬದಲಿಗೆ ಪರ್ಯಾಯ ಮಾದರಿಗಳನ್ನು ಹುಡುಕಿದರು. ಇದರ ಪರಿಣಾಮದಿಂದಾಗಿ ವಸಾಹತುಶಾಹಿ ಆಗಮನದ ನಂತರ ಅವರು ದೇಶೀಯ ವಿಜ್ಞಾನದ ಮಾದರಿಗಳನ್ನು ನಾಶ ಮಾಡಿ ಪಾಶ್ಚಾತ್ಯ ಮಾದರಿಗಳನ್ನು ಮುಂದಿಟ್ಟರು. ಅದನ್ನು ಇಂದಿಗೂ ನಾವು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈಜ್ಞಾನಿಕ ಕ್ರಾಂತಿಯ ಯುಗ: ಪ್ರಪಂಚದಲ್ಲಿ 20 ನೆ ಶತಮಾನದ ಕಾಲಘಟ್ಟವನ್ನು ವೈಜ್ಞಾನಿಕ ಕ್ರಾಂತಿಯ ಯುಗ ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಅಮೂರ್ತವಾದ ಸಿದ್ಧಾಂತಕ್ಕೆ ಮೂರ್ತವಾದ ಸಂಶೋಧನೆಗಳ ಮೂಲಕ ಜೀವ ತುಂಬಲಾಯಿತು. ಅಣು ಅನ್ನು ಹೊಡೆಯಬಹುದು, ಸೋಂಕುಗಳಿಂದ ಜೀವಿ ಸಾಯುತ್ತದೆ ಎಂಬಂತಹ ಸೂಕ್ಷ್ಮ ಸಂಶೋಧನೆಗಳು ಹೊರಬಂದವು ಎಂದು ಅವರು ಹೇಳಿದರು.

ಭಾರತದಲ್ಲಿ 1900 ರಲ್ಲಿ ಪಾಶ್ಚಿಮಾತ್ಯ ವಿದ್ವಾಂಸರ ಗರಡಿಯಲ್ಲಿ ಬೆಳೆದವರು ದೇಶೀಯ ಭಾಷೆಯಲ್ಲಿ ವಿಜ್ಞಾನ ಬರೆಯಲು ಆರಂಭಿಸಿದರು. ಆ ಸಂದರ್ಭದಲ್ಲಿ ಪಠ್ಯ ಮಾದರಿ, ಜನಪ್ರಿಯ ಮಾದರಿ ವಿಜ್ಞಾನ ಹಾಗೂ ಸಂಶೋಧನಾ ವಿಜ್ಞಾನ ಎಂಬ ಮೂರು ವರ್ಗಗಳು ಸೃಷ್ಟಿಯಾದವು. ಪಠ್ಯ ಮಾದರಿಯು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ರಚಿಸಲ್ಪಟ್ಟಿತು ಎಂದು ತಿಳಿಸಿದರು.

ವಿಜ್ಞಾನದಲ್ಲಿ 20 ನೆ ಶತಮಾನದಲ್ಲಾದ ಬದಲಾವಣೆಯ ಸಂದರ್ಭವನ್ನಿಟ್ಟು ನೋಡಿದರೆ ದೇಶದಲ್ಲಿ ವ್ಯಾಪಕವಾಗಿ ವಿಜ್ಞಾನ ಬೆಳೆಯಬೇಕಿತ್ತು. ಆದರೆ, ರಾಜಕೀಯ, ಸಿನಿಮಾ ಹಾಗೂ ಸಾಮಾಜಿಕ ಸಂಗತಿಗಳು ಬೆಳೆದಷ್ಟು ವೇಗವಾಗಿ ವಿಜ್ಞಾನ ಬೆಳೆಯಲಿಲ್ಲ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬೆಳೆಸಲು ಹಲವರು ಶ್ರಮಿಸಿದ್ದಾರೆ ಎಂದ ಅವರು, ಶಿವರಾಮಕಾರಂತರು ಮೈಸೂರು ವಿವಿ ಮೂಲಕ ಪ್ರಸಾರಾಂಗದಲ್ಲಿ ವಿಜ್ಞಾನ ಸಾಹಿತ್ಯವನ್ನು ಪ್ರಕಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ಇತ್ತೀಚಿಗೆ ವಿಜ್ಞಾನ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ ಎಂದರು.

ಕನ್ನಡದಲ್ಲಿ ಜನಪ್ರಿಯ ವಿಜ್ಞಾನದಲ್ಲಿನ ಕಾಠಿಣ್ಯತೆಯನ್ನು ಕಡಿಮೆ ಮಾಡುತ್ತಾ ಸಾಮಾಜಿಕತೆ ಬೆರೆಸುತ್ತಾ ಓದಲು ಅನುಕೂಲವಾಗುವಂತೆ ವಿಜ್ಞಾನ ಸಾಹಿತ್ಯ ರಚನೆ ಮಾಡುತ್ತಿರುವವರು ಅನೇಕರಿದ್ದಾರೆ. ಆದರೆ, ಇಂದಿನ ಕನ್ನಡದ ಮನಸುಗಳು ಕಲುಷಿತಗೊಂಡಿವೆ. ಜತೆಗೆ ಒಕ್ಕೂಟದ ವ್ಯವಸ್ಥೆಯಲ್ಲಿಯೂ ಬಿರುಕು ಬಿಟ್ಟಿದೆ. ಹಿಂದಿಯನ್ನು ವಿರೋಧಿಸಿದರೆ ದೇಶದ್ರೋಹಿ ಆಗುತ್ತೇವೆ, ಇಂಗ್ಲಿಷ್ ವಿರೋಧಿಸಿದರೆ ತಂದೆ-ತಾಯಿಗೆ ವಿರೋಧಿಗಳಾಗುತ್ತಿದ್ದೇವೆ. ಇಂತಹ ಸಂಕಷ್ಟದಲ್ಲಿ ಕನ್ನಡದ ವಿಜ್ಞಾನ ಸಾಹಿತ್ಯ ಮರೆಯಾಗುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು, ಅನುವಾದಕಿ ಸವಿತಾ ಶ್ರೀನಿವಾಸ, ಪರಿಸರವಾದಿ ಪ್ರದೀಪ್ ಕೆಂಜಿಗೆ, ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ ಉಪಸ್ಥಿತರಿದ್ದರು.

ಇಂದಿನ ಪಠ್ಯಗಳಲ್ಲಿ ವಿಜ್ಞಾನವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಡಾರ್ವಿನ್‌ನ ಮಾನವ ವಿಕಾಸದಲ್ಲಿ ‘ಮಂಗನಿಂದ ಮಾನವ’ ಎಂಬ ಪಠ್ಯವಿದೆ. ಆದರೆ, ಡಾರ್ವಿನ್‌ನ ಕೃತಿಯಲ್ಲಿ ಎಲ್ಲಿಯೂ ಇದರ ಬಗ್ಗೆ ಪ್ರಸ್ತಾಪವಿಲ್ಲ. ಇದು ತಪ್ಪು ಎಂದು ತಿಳಿದಿದ್ದರೂ ಯಾರೂ ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ.

-ಡಾ.ಕೆ.ಪುಟ್ಟಸ್ವಾಮಿ, ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News