ದುಬೈ ಓಪನ್: ಬೆಂಕಿಕ್ ಸೆಮಿಪೈನಲ್‌ಗೆ, ಸಿಮೊನಾ ಹಾಲೆಪ್ ಹೊರಕ್ಕೆ

Update: 2019-02-22 18:46 GMT

ದುಬೈ, ಫೆ.22: ಮಾಜಿ ವಿಶ್ವ ನಂ.1 ಆಟಗಾರ್ತಿ ರೋಮಾನಿಯದ ಸಿಮೊನಾ ಹಾಲೆಪ್‌ಗೆ 4-6, 6-4, 6-2 ಸೆಟ್‌ಗಳ ಅಂತರದಲ್ಲಿ ಆಘಾತ ನೀಡಿದ ಸ್ವಿಸ್‌ನ ಬೆಲಿಂಡಾ ಬೆಂಕಿಕ್ ದುಬೈ ಓಪನ್ ಟೆನಿಸ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದು ಬೆಂಕಿಕ್ ಅವರ ಸತತ ಎರಡನೇ ದೈತ್ಯ ಸಂಹಾರ ಪ್ರದರ್ಶನವಾಗಿದೆ.

ವಿಶ್ವ ರ್ಯಾಂಕಿಂಗ್‌ನಲ್ಲಿ 56ನೇ ಸ್ಥಾನದಲ್ಲಿರುವ ಬೆಂಕಿಕ್ ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.8 ಆಟಗಾರ್ತಿ ಆರ್ಯನ್ ಸಬಾಲೆಂಕಾ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಸುಮಾರು 2 ಗಂಟೆ 15 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಬೆಂಕಿಕ್ 2015ರ ಚಾಂಪಿಯನ್ ಹಾಲೆಪ್ ವಿರುದ್ಧ 6 ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಬೆಂಕಿಕ್ ಅವರು ಹಾಲೆಪ್‌ರ ಸರ್ವ್‌ಗಳನ್ನು 7 ಬಾರಿ ಮುರಿದರೆ ತಮ್ಮ ಸರ್ವ್‌ಗಳನ್ನು 5 ಬಾರಿ ಕಳೆದುಕೊಂಡರು.

ತಮ್ಮ ಮುಂದಿನ ಪಂದ್ಯದಲ್ಲಿ ಬೆಂಕಿಕ್ ಎರಡು ಬಾರಿಯ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಅವರ ಸವಾಲನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಾರ್ಲಾ ಸ್ವಾರೆಝ್ ನವಾರ್ರೊ ಅವರನ್ನು 6-2, 6-3ರಿಂದ ಮಣಿಸಿದರು.

ಕ್ವಿಟೊವಾ ಪೈನಲ್‌ಗೆ ಲಗ್ಗೆ

ದುಬೈ ಓಪನ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಶೆಹ್ ಸು ವಿಯ್ ವಿರುದ್ಧ 3-6, 6-2, 6-4 ಸೆಟ್‌ಗಳ ಅಂತರದಿಂದ ಗೆದ್ದ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಎರಡು ತಿಂಗಳ ಅವಧಿಯಲ್ಲಿ ಮೂರನೇ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೊವಾ ಸಿಡ್ನಿ ಓಪನ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದು, ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಜಪಾನ್‌ನ ನವೊಮಿ ಒಸಾಕಾ ಎದುರು ಸೋತು ರನ್ನರ್‌ಅಪ್ ಆಗಿದ್ದರು.

ಕ್ವಿಟೊವಾ ದುಬೈ ಓಪನ್‌ನ ಫೈನಲ್‌ನಲ್ಲಿ ಸ್ವಿಸ್‌ನ ಬೆಲಿಂಡಾ ಬೆಂಕಿಕ್ ಅಥವಾ ಎಲಿನಾ ಸ್ವಿಟೋಲಿನಾ ಅವರ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News