​ಪುಣೆ: ಕಾಶ್ಮೀರಿ ಪತ್ರಕರ್ತನ ಮೇಲೆ ಹಲ್ಲೆ

Update: 2019-02-23 03:56 GMT

ಪುಣೆ, ಫೆ.23: ಪುಲ್ವಾಮಾ ಉಗ್ರ ದಾಳಿಯ ಬಳಿಕ ಕಾಶ್ಮೀರಿಗಳ ಮೇಲೆ ಇತರೆಡೆಗಳಲ್ಲಿ ನಡೆಯುತ್ತಿರುವ ದಾಳಿಗಳು ಹೆಚ್ಚುತ್ತಿದ್ದು, ಜಮ್ಮು ಕಾಶ್ಮೀರದ 24 ವರ್ಷ ವಯಸ್ಸಿನ ಪತ್ರಕರ್ತರೊಬ್ಬರ ಮೇಲೆ ನಗರದಲ್ಲಿ ಹಲ್ಲೆ ನಡೆದಿದೆ.

ಸ್ಥಳೀಯ ಪೊಲೀಸರು ಆರಂಭದಲ್ಲಿ ಇದನ್ನು ಬೀದಿ ಜಗಳ ಎಂದು ಹೇಳಿದ್ದರೂ, ಬಳಿಕ ಇಬ್ಬರು ಶಂಕಿತ ಹಲ್ಲೆಕೋರರ ಮೇಲೆ ಪ್ರಕರಣ ದಾಖಲಿಸಿ ಒಬ್ಬನನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ಟ್ರಾಫಿಕ್ ಸಿಗ್ನಲ್‌ನಲ್ಲಿ ನಡೆದ ಜಗಳದಲ್ಲಿ ಪತ್ರಕರ್ತನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ.

ಪುಣೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಜಿಬ್ರಾನ್ ನಝೀರ್ ಎಂಬವರ ಮೇಲೆ ಈ ಹಲ್ಲೆ ನಡೆದಿದ್ದು, "ನಿನ್ನನ್ನು ವಾಪಸ್ ಕಾಶ್ಮೀರಕ್ಕೆ ಕಳುಹಿಸುತ್ತೇವೆ" ಎಂದು ತಂಡ ಬೆದರಿಕೆ ಹಾಕಿದೆ. ಇದು ಯೋಜಿತ ದಾಳಿ ಎಂದು ನಝೀರ್ ಆಪಾದಿಸಿದ್ದಾರೆ. ದಾಳಿಕೋರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಕ್ಷಮೆ ಯಾಚಿಸಿದ್ದಾನೆ.

ಈ ಘಟನೆ ಬೀದಿ ಜಗಳಕ್ಕೆ ಸಂಬಂಧಿಸಿದ್ದೇ ವಿನಃ ಪುಲ್ವಾಮಾ ಘಟನೆಗೆ ಸಂಬಂಧಿಸಿದ್ದಲ್ಲ ಎನ್ನುವುದು ಪೊಲೀಸರ ಸಬೂಬು. ಮಹಾರಾಷ್ಟ್ರದ ಯಾವತ್ಮಲ್ ಕಾಲೇಜಿನಲ್ಲಿ ಓದುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಶಿವಸೇನೆಯ ಘಟಕವಾದ ಯುವಸೇನಾ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಗುರುವಾರ ರಾತ್ರಿ 10:45ರ ವೇಳೆಗೆ ಪುಣೆಯ ತಿಕಲ್ ರಸ್ತೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದಾಗ, ಹಿಂದೆ ಇದ್ದ ಇಬ್ಬರು ಬೈಕ್ ಸವಾರರು ಮುಂದೆ ಚಲಿಸುವಂತೆ ಇವರಿಗೆ ಸೂಚಿಸಿದಾಗ ವಾಗ್ವಾದ ನಡೆಯಿತು ಎನ್ನಲಾಗಿದೆ. ಹಿಮಾಚಲ ಪ್ರದೇಶದ ನೋಂದಣಿ ಹೊಂದಿದ್ದ ಬೈಕ್ ನೋಡಿದ ಹಲ್ಲೆಕೋರರು, ನಿನ್ನನ್ನು ಹಿಮಾಚಲಕ್ಕೆ ವಾಪಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದರು. ಆಗ ನಝೀರ್, ತಾನು ಕಾಶ್ಮೀರ ಮೂಲದ ಪತ್ರಕರ್ತ ಎಂದು ಹೇಳಿದರು. ಆಗ ನಿನ್ನನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಅಲ್ಲೇ ಪತ್ರಿಕೋದ್ಯಮ ವೃತ್ತಿ ಮಾಡು ಎಂದು ಹೇಳಿ, ಮೊಬೈಲ್ ಫೋನ್ ಕಿತ್ತುಕೊಂಡು ಬೈಕ್‌ಗೆ ಹಾನಿಪಡಿಸಿ ಪರಾರಿಯಾಗಿದ್ದಾರೆ ಎಂದು ನಝೀರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News