ಕನ್ನಡದ ಸಾಕ್ಷಿಪ್ರಜ್ಞೆ ಕೋ ಚೆನ್ನಬಸಪ್ಪ ಇನ್ನಿಲ್ಲ

Update: 2019-02-23 13:11 GMT

ಬೆಂಗಳೂರು, ಫೆ. 23: ಸ್ವಾತಂತ್ರ ಹೋರಾಟಗಾರ, ನಿವೃತ್ತ ನ್ಯಾಯಾಧೀಶ, ಹಿರಿಯ ಸಾಹಿತಿ, ಕನ್ನಡದ ವೈಚಾರಿಕತೆಯ ಸಾಕ್ಷಿ ಪ್ರಜ್ಞೆ, ನಾಡೋಜ ಕೋ.ಚೆನ್ನಬಸಪ್ಪ (97) ಅವರು ಶನಿವಾರ ಬೆಳಗ್ಗೆ 7:30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚೆನ್ನಬಸಪ್ಪನವರು ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಹೋಬಳಿಯ ಕಾನಮಡುಗು ಸಮೀಪ ಆಲೂರು ಸಮೀಪದ ಗ್ರಾಮದಲ್ಲಿ 1922ರ ಫೆಬ್ರವರಿ 21ರಂದು ಕೋಣನ ವೀರಣ್ಣ ಮತ್ತು ಬಸಮ್ಮ ಪುತ್ರರಾಗಿ ಜನಿಸಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಮುಗಿಸಿದ ಕೋ.ಚೆ., ಆಂಧ್ರದ ಅನಂತಪುರದಲ್ಲಿ ಕಾಲೇಜು ಕಲಿತರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜೈಲು ವಾಸ ಅನುಭವಿಸಿದ್ದರು. ನಂತರದಲ್ಲಿ ಬಿಎ, ಕಾನೂನು ಪದವಿಯನ್ನೂ, ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1946ರಲ್ಲಿ ನ್ಯಾಯವಾದಿಯಾಗಿ ವಕೀಲ ವೃತ್ತಿ ಆರಂಭಿಸಿದ ಕೋ.ಚೆ, 1965ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. ನಿವೃತ್ತಿಯ ನಂತರ ಸುಪ್ರೀಂ ಕೋರ್ಟ್‌ನ ನ್ಯಾಯವಾದಿಯಾಗಿಯೂ ಕೆಲಸ ಮಾಡಿದ್ದರು. ರೈತರು, ಶೋಷಿತರು ಹಾಗೂ ಕಾರ್ಮಿಕರ ಸೇರಿದಂತೆ ವಿವಿಧ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು.

ಜಿಲ್ಲಾ ನ್ಯಾಯಾಧೀಶರಾಗಿ, ವಿಜಯಪುರ, ಮಂಗಳೂರು, ಹಾಸನ, ಶಿವಮೊಗ್ಗ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ರಾಮಕೃಷ್ಣ ಆಶ್ರಮದ ನಿಕಟ ಸಂಪರ್ಕ ಹೊಂದಿದ್ದ ಅವರು ಪುದುಚೇರಿಯ ಅರವಿಂದ ಆಶ್ರಮದ ಅಧ್ಯಕ್ಷರೂ ಆಗಿದ್ದರು.

ರಾಷ್ಟ್ರಕವಿ ಕುವೆಂಪು ಅವರ ಪ್ರೀತಿಯ ಶಿಷ್ಯರಾಗಿದ್ದ ಕೋಚೆ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ಕವನ ಸಂಕಲನಗಳು, ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಕಥಾ ಸಂಕಲನಗಳು, ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಕಾದಂಬರಿಗಳು ಸೇರಿದಂತೆ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ವಿಜಯಪುರದಲ್ಲಿ ನಡೆದ 79ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗೂ ಭಾಜನರಾಗಿದ್ದರು.

ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್, ಗಾಂಧಿ ಕಗ್ಗೊಲೆ ಮತ್ತು ಪರಿಣಾಮ, ಲಿಂಗಾಯತರು ಹಿಂದುಗಳಲ್ಲ ಎಂಬ ಅವರ ಕೊನೆಯ ಪುಸ್ತಕ ಓದುಗರ ಮೆಚ್ಚುಗೆ ಗಳಿಸಿದೆ. ‘ನನ್ನ ಮನಸ್ಸು ನನ್ನ ನಂಬುಗೆ’ ಎಂಬ ಅವರ ಆತ್ಮಕಥೆ ಹೊರ ತರಲಾಗಿದೆ. ಬಾಕ್ಸ್

ಅಂತ್ಯಕ್ರಿಯೆ: ಇಲ್ಲಿನ ರಾಜಾಜಿನಗರದ ಮೊದಲನೆಯ ಬ್ಲಾಕ್‌ನ ನಿವಾಸದಲ್ಲಿ ಕೋ.ಚನ್ನಬಸಪ್ಪ ಅವರ ಪಾರ್ಥಿವ ಶರೀರ ಇರಿಸಲಾಗಿದೆ. ನಾಳೆ (ಫೆ.24) ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News