ಅನುಕೂಲಕ್ಕೆ ತಕ್ಕಂತೆ ರಾಮಾಯಣ-ಮಹಾಭಾರತ ಬದಲಿಸಿದ ಬ್ರಾಹ್ಮಣ್ಯ: ಬಂಜಗೆರೆ ಜಯಪ್ರಕಾಶ್

Update: 2019-02-23 14:41 GMT

ಬೆಂಗಳೂರು, ಫೆ.23: ಸೂತಕ ಕವಿಗಳಾದ ವಾಲ್ಮೀಕಿ ಹಾಗೂ ವ್ಯಾಸರು ರಚಿಸಿದ್ದ ಸಮುದಾಯ ಕಥನವಾದ ರಾಮಾಯಣ-ಮಹಾಭಾರತವನ್ನು ಬ್ರಾಹ್ಮಣ್ಯ ವ್ಯವಸ್ಥೆಯು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡಿದೆ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಶನಿವಾರ ನಗರದ ಕಲಾ ಕಾಲೇಜಿನಲ್ಲಿ ಇತಿಹಾಸ ಸಂಶೋಧನೆ ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಟಿಇಡಿಎಸ್ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಎ ರೀಟಾ ರೀನಿ ಅವರು ಅನುವಾದಿಸಿರುವ ಬ್ರಜ್ ರಂಜನ್ ಮಣಿ ಅವರ ‘ಚರಿತ್ರೆಯ ಅಬ್ರಾಹ್ಮಣೀಕರಣ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಮಾಯಣವನ್ನು ಬರೆದ ವಾಲ್ಮೀಕಿ ಹಾಗೂ ಮಹಾಭಾರತವನ್ನು ಬರೆದ ವ್ಯಾಸರು ಬ್ರಾಹ್ಮಣರೇ ಒಪ್ಪಿರುವ ಶೂದ್ರ ಜಾತಿಗೆ ಸೇರಿದವರು. ಆದರೆ, ಅದನ್ನು ಕ್ರಮೇಣವಾಗಿ ಬದಲಿಸುತ್ತಾ ಬದಲಿಸುತ್ತಾ ಕ್ರಿ.ಶ.1-2 ನೆ ಸಂದರ್ಭಕ್ಕೆ ಸಂಪೂರ್ಣವಾಗಿ ಬ್ರಾಹ್ಮಣ್ಯ ಪರವಾದ ಪಠ್ಯವನ್ನಾಗಿ ರೂಪಿಸಿದರು. ಅಂದು ಸಮುದಾಯದ ಕಥನಗಳಾಗಿದ್ದ ಈ ಎರಡೂ ಮಹಾ ಕಾದಂಬರಿಗಳನ್ನೂ ಬದಲಿಸಿದರು ಎಂದು ತಿಳಿಸಿದರು.

ದೇಶದಲ್ಲಿ ಬ್ರಾಹ್ಮಣ್ಯೀಕರಣ ಬೆಳೆದ ನಂತರ ದುಡಿಮೆಯನ್ನು ಜಾತಿಯಾಧಾರಿತವಾಗಿ ವಿಧಿ ಬದ್ಧಗೊಳಿಸಿ ಹೇರಲಾಗಿದೆ. ಅದನ್ನು ಉಲ್ಲಂಘಿಸದಂತೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ತಳ ಸಮುದಾಯಗಳಿಂದಲೇ ನಿರ್ಮಾಣಗೊಂಡಿದ್ದನ್ನು ಅವರು ಬೇರೆಯದ್ದಕ್ಕೆ ಬಳಸಿದರು. ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯವನ್ನು ಸೃಷ್ಟಿಸಿದರು. ಅಲ್ಲದೆ, ಅವರು ಯಜಮಾನ್ಯ ವ್ಯವಸ್ಥೆಯನ್ನು ಸ್ಥಾಪಿಸಿ, ನೀವು ಶ್ರಮ ಹಾಕಿದರೆ ಫಲವನ್ನು ಬಯಸಬಾರದು. ಹಕ್ಕುದಾರರು ಆಗಿರಬೇಕಾ-ಬೇಡವಾ ಎಂಬುದನ್ನು ನಿರ್ಧರಿಸಲ್ಪಟ್ಟಿತು ಎಂದರು.

ಭಾರತದಲ್ಲಿ 1500 ವರ್ಷಗಳ ಹಿಂದಿನ ಯಜಮಾನ್ಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇವೆ. ಆದರೆ, ಇಂದು ಜ್ಞಾನ, ಸಂಪನ್ಮೂಲ, ಸಾಮಗ್ರಿ ಎಲ್ಲವನ್ನೂ ಒಂದು ಸಮುದಾಯ ನಿರ್ವಹಿಸಲ್ಪಡುತ್ತಿದೆ. ಆದರೆ, ಈ ಬ್ರಾಹ್ಮಣ್ಯ ಎಂಬುದು ಒಂದು ಜಾತಿಯಲ್ಲ. ದೇಶದಲ್ಲಿ ಆಳುವ ಸಂಸ್ಕೃತಿಯನ್ನು ಸ್ವೀಕರಿಸಿದ ನಂತರ ತಮ್ಮ ಅಸ್ತಿತ್ವಕ್ಕಾಗಿ ಈ ಜಾತಿಯನ್ನು ಸ್ವೀಕರಿಸಿದರು. ತಮ್ಮ ಅನುಕೂಲ ಹಾಗೂ ಅಗತ್ಯತೆಗಾಗಿ ಸೃಷ್ಟಿಸಿಕೊಂಡರು ಎಂದ ಅವರು, ತಳ ಸಮುದಾಯಗಳೇ ಬ್ರಾಹ್ಮಣರನ್ನು ಶ್ರೇಷ್ಠ ಸ್ಥಾನದಲ್ಲಿ ಕೂರಿಸುವುದು ಹಾಗೂ ರಾಜರನ್ನು ಭೂ ಮಾಲಕರನ್ನಾಗಿಸುವಲ್ಲಿ ಬಳಕೆಯಾಗಿದ್ದಾರೆ ಎಂದು ವಿಷಾದಿಸಿದರು.

ಯಜಮಾನಿಕೆ ಸಂಸ್ಕೃತಿ ಪೋಷಣೆ: ದಕ್ಷಿಣ ಭಾರತದ ಜನ ತಮ್ಮ ಪೂರ್ವಿಕರನ್ನು ಮೂರ್ತಿಗಳನ್ನಾಗಿಸಿ, ಅನಂತರ ದೇವರುಗಳನ್ನಾಗಿ ಮಾಡುತ್ತಿದ್ದರು. ಬಹುತೇಕ ಬುಡಕಟ್ಟು ಸಮುದಾಯಗಳಲ್ಲಿ ಇದು ಕಾಣಬಹುದು. ರಾಮ, ಕೃಷ್ಣ ಎಲ್ಲರೂ ಕಪ್ಪು ದೇವರಾಗಿದ್ದು, ಮೂಲ ನಿವಾಸಿಗಳಾಗಿದ್ದಾರೆ. ಅತ್ಯಂತ ಪ್ರಖ್ಯಾತ ವ್ಯಕ್ತಿಗಳನ್ನು ಆಲಯಗಳಲ್ಲಿ ಕೂರಿಸಿ ಬ್ರಾಹ್ಮಣ್ಯ ವ್ಯವಸ್ಥೆಯು ಯಜಮಾನಿಕೆ ಸಂಸ್ಕೃತಿಯನ್ನು ಪೋಷಿಸಿದರು ಎಂದು ಅವರು ಹೇಳಿದರು.

ಬ್ರಾಹ್ಮಣ್ಯ ವ್ಯವಸ್ಥೆಗೆ ಒಂದೇ ಒಂದು ಬಿಳಿಯ ದೇವರು ಸೃಷ್ಟಿ ಮಾಡಲಾಗಲಿಲ್ಲ. ಅವರಿಗೆ ದೇವರ ಮೂರ್ತಿ ಕಲ್ಪನೆಯಿಲ್ಲ. ಪೂಜೆ ಮಾಡುವುದು ಬ್ರಾಹ್ಮಣ್ಯ ಪದ್ದತಿಯಲ್ಲ. ಪೂಜೆ ಮಾಡುವುದು ದಕ್ಷಿಣದಿಂದ ಬಂದ ಪದ್ದತಿ. ಪೂಜೆಯಲ್ಲಿ ಪೂ ತಮಿಳುನಿಂದ ಬಂದಿರುವ ಪದ ಎಂದ ಅವರು, ಕರಿಯ ಬಣ್ಣ ಬದಲಿಸಿದರೆ ಸ್ಥಳೀಯರು ತಮ್ಮದಲ್ಲ ಎಂದು ದೂರವಾಗುತ್ತಾರೆ ಎಂಬ ಆತಂಕದಿಂದ ನೈಜ ಬಣ್ಣವನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಇಂದಿನ ದಕ್ಷಿಣ ಭಾರತದ ಪ್ರಖ್ಯಾತ ದೇವರುಗಳಿರುವ ಎಲ್ಲ ಪ್ರದೇಶಗಳು ಹಿಂದಿನ ದಿನಗಳಲ್ಲಿ ವ್ಯಾಪಾರಿ ಮಾರ್ಗಗಳಾಗಿದ್ದವು. ವ್ಯಾಪಾರ ಮಾಡಲು ಬರುವಾಗ ಹೆಚ್ಚಿನ ಸರಕನ್ನು ಇಲ್ಲಿರಿಸಿ ವ್ಯಾಪಾರ ಮುಗಿದ ಬಳಿಕ ಅದನ್ನು ಕೊಂಡೊಯ್ಯುತ್ತಿದ್ದರು. ಆ ಸಂದರ್ಭದಲ್ಲಿ ಕೃತಜ್ಞಾ ಭಾವದಿಂದ ಕಾಣಿಕೆ ಅರ್ಪಿಸುತ್ತಿದ್ದರು. ಆದರೆ, ಸರಳವಾಗಿದ್ದ ಭಕ್ತಿ ಮಾರ್ಗವನ್ನು ಯಜಮಾನ್ಯ ವ್ಯವಸ್ಥೆ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದೆ. ಕೆಲವೇ ಸಮುದಾಯವನ್ನು ಕಾಪಾಡಲು ಸಂಸ್ಕೃತಿ, ಸಾಹಿತ್ಯ, ದೇವತೆಗಳು, ನಂಬಿಕೆಗಳನ್ನು ಬ್ರಾಹ್ಮಣ್ಯೀಕರಿಸಲಾಗಿದೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ವಿಮರ್ಶಕಿ ಡಾ.ಆಶಾದೇವಿ, ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಜಿ.ಮೂರ್ತಿ, ಪ್ರಕಾಶಕಿ ಸಿಂಥ್ಯಾ ಸ್ಟೀಫನ್, ಅನುವಾದಕಿ ರೀಟಾ ರೀನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಾಡಿನ ಪ್ರಮುಖ ಮೂರು-ನಾಲ್ಕು ದೇವರುಗಳನ್ನು ಬ್ರಾಹ್ಮಣೀಕರಿಸಲಾಗಿದೆ. ತಿರುಪತಿ ತಿಮ್ಮಪ್ಪನ ಹೆಸರು ಯಾವುದೇ ಉಪನಿಷತ್ತುಗಳಲ್ಲಿ ಇಲ್ಲ. ಪಾಂಡವಾಪುರದ ಕೃಷ್ಣನ ಭಂಗಿಯು ಭಾಗವತದ ಲೀಲಾ ಪುರಾಣದಲ್ಲಿಲ್ಲ. ಧರ್ಮಸ್ಥಳದ ಮಂಜುನಾಥ ಜೈನ ಮಹಿಳೆ ಮಂಜುಶ್ರೀ ಹೆಸರನ್ನು ಗಂಡು ದೇವರನ್ನಾಗಿ ಮಾಡಲಾಗಿದೆ. ಎಲ್ಲ ದೇವರುಗಳು ಬಯಲಲ್ಲಿದ್ದವರು. ಅಲ್ಲದೆ, ಜನ ಸಾಮಾನ್ಯರು ದೇವರುಗಳೊಂದಿಗೆ ನೇರವಾಗಿ ಸಂಭಾಷಣೆ ಮಾಡುತ್ತಿದ್ದವರು.

-ಬಂಜಗೆರೆ ಜಯಪ್ರಕಾಶ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News