ಲಂಚ ಪ್ರಕರಣದ ತನಿಖೆ ನಡೆಸಲು ಹೋದ ಸಿಬಿಐ ಅಧಿಕಾರಿಗಳಿಗೆ ಹಲ್ಲೆ

Update: 2019-02-24 08:25 GMT

ಹೊಸದಿಲ್ಲಿ, ಫೆ.24: ಸಹೋದ್ಯೋಗಿಯ ಲಂಚ ಪ್ರಕರಣದ ಬಗ್ಗೆ ತನಿಖೆ ನಡೆಸಲು ತೆರಳಿದ್ದ ಸಿಬಿಐ ತನಿಖಾ ತಂಡದ ಮೇಲೆ ಆರೋಪಿ ಅಧಿಕಾರಿಯ ಸಂಬಂಧಿಕರು ಹಲ್ಲೆ ನಡೆಸಿ, ತನಿಖಾ ತಂಡದ ಸದಸ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಘಟನೆ ನಡೆದಿದೆ.

ಸಹೋದ್ಯೋಗಿ ಮೇಲಿನ ಲಂಚ ಪ್ರಕರಣದ ತನಿಖೆಗಾಗಿ ಆತನ ಮನೆಗೆ ತೆರಳಿದ್ದಾಗ ಈ ದಾಳಿ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಐದು ಮಂದಿ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಬಿಐ ಎಎಸ್‍ಐ ಸುನೀಲ್ ದತ್ ಸೇರಿದಂತೆ ಇಬ್ಬರು ಅಧಿಕಾರಿಗಳ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಸುನೀಲ್ ದತ್ ಗಾಝಿಯಾಬಾದ್‍ ನ ಸಿಬಿಐ ಅಕಾಡಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಮುನಾ ಎಕ್ಸ್‍ ಪ್ರೆಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಭೂಹಗರಣದ ಆರೋಪಿಗಳಿಂದ ಲಂಚ ಪಡೆದ ಆರೋಪವನ್ನು ಹೊರಿಸಲಾಗಿತ್ತು.

ಈ ಇಬ್ಬರು ಆರೋಪಿ ಅಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದ ಪೊಲೀಸರ ನೆರವಿನಿಂದ, ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎಂದು ಆಪಾದಿಸಲಾಗಿತ್ತು. ಇಂದು ಸಿಬಿಐ ಇನ್‍ಸ್ಪೆಕ್ಟರ್, ಒಬ್ಬರು ಸಬ್ ಇನ್‍ಸ್ಪೆಕ್ಟರ್, ಇಬ್ಬರು ಪೇದೆಗಳು ಹಾಗೂ ಮಹಿಳಾ ಕಾನ್‍ಸ್ಟೇಬಲ್ ಗಳನ್ನೊಳಗೊಂಡ ತನಿಖಾ ತಂಡ ಉತ್ತರ ಪ್ರದೇಶದ ಗೌತಮಬುದ್ಧನಗರ ಬಳಿಯ ಸೋನ್‍ಪುರದಲ್ಲಿರುವ ದತ್ ನಿವಾಸಕ್ಕೆ ತೆರಳಿದಾಗ ಈ ಹಲ್ಲೆ ನಡೆದಿದೆ. ದತ್ ಕುಟುಂಬದ ಸದಸ್ಯರು ತನಿಖಾ ತಂಡದ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ತಂಡದ ಐದು ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹಲ್ಲೆ ನಡೆಸುತ್ತಿದ್ದಾಗ ದತ್ ಹಿಂಬಾಗಿಲಿನಿಂದ ತಪ್ಪಿಸಿಕೊಂಡ ಎನ್ನಲಾಗಿದೆ. ಮೊಬೈಲ್ ಫೋನ್ ಡೈರಿ ಮತ್ತು ಗುರುತಿನಪತ್ರಗಳನ್ನು ಸುಟ್ಟುಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News