ಕುಮಾರಸ್ವಾಮಿ ಕುಟುಂಬ ಯೋಜನೆಯ ಮುಖ್ಯಮಂತ್ರಿ: ಪ್ರೊ.ಚಂಪಾ ವ್ಯಂಗ್ಯ

Update: 2019-02-24 14:29 GMT

ಬೆಂಗಳೂರು, ಫೆ.24: ಎಚ್.ಡಿ.ಕುಮಾರಸ್ವಾಮಿ ಕುಟುಂಬ ಯೋಜನೆಯ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವ್ಯಂಗ್ಯವಾಡಿದ್ದಾರೆ.

ರವಿವಾರ ನರಗದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ‘ಪ್ರಾಥಮಿಕ ಶಿಕ್ಷಣದಲ್ಲಿ ಬೋಧನಾ ಮಾಧ್ಯಮ’ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1 ಸಾವಿರ ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವ ಕುಮಾರಸ್ವಾಮಿ ತೀರ್ಮಾನಕ್ಕೆ ಅವರ ಅಣ್ಣ ಎಚ್.ಡಿ.ರೇವಣ್ಣ ಹಾಗೂ ತಂದೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ ಸೂಚಿಸಿರುವುದನ್ನು ನೋಡಿದರೆ ಇದು ಕುಟುಂಬ ಯೋಜನೆ ಇರಬೇಕೆನ್ನುವ ಅನುಮಾನವಿದೆ ಎಂದು ಕಿಡಿಕಾರಿದರು.

ಮೈತ್ರಿ ಸರಕಾರ ಈಗಾಗಲೇ 1 ಸಾವಿರ ಇಂಗ್ಲಿಷ್ ಶಾಲೆಗಳಿಗೆ ಅನುಮತಿ ನೀಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಗಳಲೂ ನಾಲ್ಕು ಶಾಲೆಗಳನ್ನು ತೆರೆಯುತ್ತಿದ್ದಾರೆ. ಈ ಕುರಿತು ಸಿಎಂ ಶಿಕ್ಷಣ ತಜ್ಞರ, ಚಿಂತಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಿಂದೆ ಭರವಸೆ ನೀಡಿದ್ದರು. ಆದರೆ, ಭರವಸೆ ಸಿಎಂ ನೆನಪಿಗೆ ಬಂದಿಲ್ಲವೇನೋ ಎಂದು ಪ್ರಶ್ನಿಸಿದರು.

ಇಂಗ್ಲಿಷ್ ಭಾಷೆಯನ್ನು ಒಂದು ಭಾಷಾ ಮಾಧ್ಯಮವನ್ನಾಗಿ ಕಲಿಸುವುದೇ ಬೇರೆ. ಅದನ್ನು ಮಾತೃ ಭಾಷೆಯ ಸ್ಥಾನದಲ್ಲಿಟ್ಟು ಕಲಿಸುವುದೇ ಬೇರೆಯಾಗಿರುತ್ತದೆ. ಅದರ ಇಚ್ಛಾಶಕ್ತಿ ರಾಜಕೀಯ ವ್ಯಕ್ತಿಗಳಿಗಿರಬೇಕು. ಒಂದು ವೇಳೆ ಕನ್ನಡ ಸಾಹಿತ್ಯ ಪರಿಷತ್ತು ಇಂಗಿಷ್ ಭಾಷಾ ಶಿಕ್ಷಣದ ವಿರುದ್ಧ ಸಂಘಟಿತರಾದರೆ, ಕೇವಲ 24 ಗಂಟೆಯಲ್ಲೇ ದೊಡ್ಡ ಆಂದೋಲನ ನಡೆಯುತ್ತದೆ. ಅಂತಹ ಶಕ್ತಿ ಪರಿಷತ್ತಿಗೆ ಇದೆ ಎಂದು ಎಚ್ಚರಿಕೆ ನೀಡಿದರು.

ಮಾತೃ ಭಾಷಾ ಶಿಕ್ಷಣದ ಬಗ್ಗೆ ಆರೋಗ್ಯಕರವಾಗಿ ಹೋರಾಟ ಮಾಡಬೇಕಾಗಿದ್ದು, ತನ್ನ ನೆಲದಲ್ಲಿ ಇರುವ ದೂರದ ಮಾತೃ ಭಾಷಾ ಆಶಾಕಿರಣವನ್ನು ನೋಡಬಹುದಾಗಿದೆ. ಅಲ್ಲದೆ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಬೇಕು ಎನ್ನುವ ಚಿಂತನೆ, ಬಡವ- ಶ್ರೀಮಂತರ ಮಕ್ಕಳ ಬೇಕು- ಬೇಡಗಳಲ್ಲ. ಅದನ್ನು ಚೆನ್ನಾಗಿ ಕಲಿತು ವಿಶ್ವದ ಜ್ಞಾನ ಪಡೆಯಲು ಸಾಧ್ಯವಂತಾಗಬೇಕು. ಆದರೆ, ಅದರಿಂದಲೇ ಸ್ವರ್ಗ ಎಂಬ ವ್ಯಾಧಿ ಸರಿಯಾದುದ್ದಲ್ಲ ಎಂದು ತಿಳಿಸಿದರು.

ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ಮಾತನಾಡಿ, ಒಂದರಿಂದ ಹದಿನಾಲ್ಕು ವರ್ಷದ ಮಕ್ಕಳು ತನ್ನ ಮಾತೃಭಾಷೆಯಲ್ಲಿ ಸಂತೋಷದಿಂದ, ಸೃಜನಾತ್ಮಕತೆಯಿಂದ ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತಾರೆ. ಆದರೆ, ಅದನ್ನು ಬೇಡ ಎನ್ನುವ ಅಪ್ಪ-ಮಕ್ಕಳು, ಅಣ್ಣ-ತಮ್ಮಂದಿರು ನಮ್ಮ ರಾಜ್ಯದಲ್ಲಿದ್ದು, ರಾಜ್ಯದ ಎಲ್ಲ ಜನರ ವಿಚಾರಗಳನ್ನು ಈ ಮೂರು ಜನರೇ ತೀರ್ಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷೆ ಭಾವನಾತ್ಮಕ ಸಂಬಂಧವಲ್ಲ ಸಮುದಾಯದ ಜೀವನ ಶೈಲಿ. ಅದು ನೆನಪುಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ಒಂದು ಸಾಧನ. ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕಾದ ಒಂದು ಸಾಧನ ಭಾಷೆ. ತನ್ನ ನೆಲದ ಭಾಷೆಯನ್ನು ಎಷ್ಟರ ಮಟ್ಟಿಗೆ ಬಳಸುತ್ತೇವೆ ಎಂಬ ಪೂರಕ ಅಂಶದ ಮೇಲೆ ಭಾಷೆಯ ಅಳಿವು-ಉಳಿವು ನಿಂತಿದೆ ಎಂದು ತಿಳಿಸಿದರು.

ಯಾವುದೇ ಮಗು ಮಾತೃಭಾಷೆಯಲ್ಲಿ ಪ್ರಬುದ್ಧತೆಯನ್ನು ಸಾಧಿಸದ ಹೊರತು, ಎರಡನೆ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ. ಒಂದು ಭಾಷೆಯನ್ನು ಕಲಿಸಲಿಕ್ಕೆ ಬೇಕಾದ ಸೂಕ್ತ ಪರಿಸರವನ್ನು ಕಲ್ಪಿಸಬೇಕು. ಅಲ್ಲದೆ, ಭಾಷೆಯ ಆಯ್ಕೆಯ ವಿಚಾರದಲ್ಲಿ ಮಕ್ಕಳ ಹಿತಾಸಕ್ತಿಯೇ ಪರಮಶಕ್ತಿ ಆಗಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞರಾದ ಎಂ.ಅಬ್ದುಲ್ ರಹಮಾನ್ ಪಾಷ, ಭಕ್ತರಹಳ್ಳಿ ಕಾಮರಾಜ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್ ಉಪಸ್ಥಿತರಿದ್ದರು.

ಸುಳ್ಳು ಕತೆಗಳನ್ನು ಸತ್ಯ ಎಂದು ಹೇಳುವವರ ಕೈಗೆ ಪ್ರಭುತ್ವ ಸಿಕ್ಕಿದ್ದು, ಅಂತವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದ್ದು, ಅದು ಸಂವಿಧಾನಕ್ಕೆ ಮಾರಕವಾಗಿದೆ. ಅಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಭ್ರಮಾ ಲೋಕದ ಸಿದ್ಧಾಂತವನ್ನು ಸೃಷ್ಠಿಸಿ ಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ.  -ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಮುಖ್ಯ ಮಂತ್ರಿ ಕುಮಾರಸ್ವಾಮಿ ಪ್ರಾದೇಶಿಕ ಪಕ್ಷದ ನಾಯಕನಾಗಿ ಪ್ರಾದೇಶಿಕ ಹಿತ್ತಾಸಕ್ತಿಯನ್ನೇ ಸಂಪೂರ್ಣವಾಗಿ ಕಡೆಗಣಿಸಿದ್ದು, ಮಾತೃ ಭಾಷಾ ಮಾಧ್ಯಮದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತಾಡುವಾಗ ಅವರ ಘನತೆಗೆ ತಕ್ಕಂತೆ ಮಾತನಾಡಲಿ.

- ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News