ಅಲ್ಪಸಂಖ್ಯಾತರ ನಿರ್ದೇಶನಾಲಯದ ಸೇವೆ ತೃಪ್ತಿಕರ: ಹಾಸನ ನೂತನ ಜಿಲ್ಲಾಧಿಕಾರಿ ಅಕ್ರಮ್ ಪಾಷ

Update: 2019-02-25 12:25 GMT

ಬೆಂಗಳೂರು, ಫೆ.25: ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕನಾಗಿ ಕಳೆದ ಐದುವರೆ ವರ್ಷಗಳಿಂದ ಸಲ್ಲಿಸಿದ ಸೇವೆಯು ವೈಯಕ್ತಿಕವಾಗಿ ನನಗೆ ತೃಪ್ತಿಕರವಾಗಿದೆ ಎಂದು ಹಾಸನ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಿಳಿಸಿದರು.

ಮಂಗಳವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಬಾ ಸಂತೋಷದಿಂದಲೇ ನಾನು ಈ ಇಲಾಖೆಯಿಂದ ನಿರ್ಗಮಿಸುತ್ತಿದ್ದೇನೆ ಎಂದರು.

ರಾಜ್ಯ ಸರಕಾರವು ನನಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ. ಅದು ಕೂಡ ಸವಾಲಿನ ಕೆಲಸ. ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಇಡೀ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅಕ್ರಮ್ ಪಾಷ ಹೇಳಿದರು. ಐದು ವರ್ಷಗಳ ಹಿಂದೆ ಈ ಇಲಾಖೆಯು 400 ಕೋಟಿ ರೂ.ಗಳ ಬಜೆಟ್ ಹೊಂದಿತ್ತು. ಈಗ 2200 ಕೋಟಿ ರೂ.ಗಳ ಬಜೆಟ್‌ ಇದೆ. ಸಿಬ್ಬಂದಿಗಳ ಸಂಖ್ಯೆ 26 ರಿಂದ 6 ಸಾವಿರ ಆಗಿದೆ. ಈ ಇಲಾಖೆಯಲ್ಲಿ ಕೇವಲ 12 ಯೋಜನೆಗಳಿದ್ದವು. ಈಗ 31 ಯೋಜನೆಗಳನ್ನು ಪರಿಚಯಿಸಿದ್ದೇವೆ ಎಂದು ಅವರು ತಿಳಿಸಿದರು.

ಪ್ರಮುಖವಾಗಿ ಕೇಂದ್ರ ಸರಕಾರದ ವತಿಯಿಂದ ನಾವು ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ಬಹು ವಲಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ತಂದು, ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಕಟ್ಟುತ್ತಿದ್ದೇವೆ. ಅಲ್ಪಸಂಖ್ಯಾತ ಸಮುದಾಯದ ಸುಮಾರು 17.50 ಲಕ್ಷ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನೀಡುತ್ತಿದ್ದೇವೆ ಎಂದು ಅಕ್ರಮ್ ಪಾಷ ಹೇಳಿದರು.

ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರಲು ಪ್ರಯತ್ನಿಸಿದ್ದೇವೆ. ಅಲ್ಲದೆ, ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಹಾಯ ಧನ, ಶುಲ್ಕ ಮರುಪಾವತಿ, ಪಿಎಚ್‌ಡಿ ಹಾಗೂ ಎಂ.ಫಿಲ್ ಮಾಡುವವರಿಗೆ ಸಹಾಯ ಧನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಗರಿಷ್ಠ ಅಂಕ ಪಡೆದ ಎಸೆಸ್ಸೆಲ್ಸಿ ಮಕ್ಕಳಿಗೆ 10 ಸಾವಿರ ರೂ., ಪಿಯುಸಿ ವಿದ್ಯಾರ್ಥಿಗಳಿಗೆ 20 ಸಾವಿರ ರೂ.ಪ್ರೋತ್ಸಾಹ ಧನ, ಬಿ.ಇಡಿ, ಡಿ.ಇಡಿ ಮಾಡುವ ವಿದ್ಯಾರ್ಥಿಗಳಿಗೆ 35 ಸಾವಿರ ರೂ., ಅದೇ ರೀತಿ ನರ್ಸಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಐಐಟಿ ಮತ್ತು ಐಐಎಂ ಮಾಡುವ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ.ಗಳನ್ನು ನೀಡುತ್ತಿದ್ದೇವೆ ಅಕ್ರಮ್ ಪಾಷ ಹೇಳಿದರು. 130 ವಸತಿ ಶಾಲೆಗಳು, 314 ವಿದ್ಯಾರ್ಥಿನಿಲಯ, 200 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಜೊತೆಗೆ ಮೌಲಾನ ಆಝಾದ್ ಮಾದರಿ ಶಾಲೆಗಳನ್ನು ನಾವು ತೆರೆದಿದ್ದೇವೆ. ಇದರಿಂದ ಸುಮಾರು 1 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಐದು ವರ್ಷಗಳ ಹಿಂದೆ ನಮ್ಮ ಫಲಾನುಭವಿಗಳು ಕೇವಲ 4 ಲಕ್ಷದಷ್ಟಿದ್ದರು. ಇವತ್ತು ಈ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

12 ಯೋಜನೆಗಳನ್ನು ಆನ್‌ಲೈನ್ ಮಾಡಿ, ವಿದ್ಯಾರ್ಥಿಗಳು, ಫಲಾನುಭವಿಗಳು ಯಾವುದೇ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಯೋಜನೆಗಳ ಪ್ರಯೋಜನ ಪಡೆಯುವಂತೆ ಕೆಲಸ ಮಾಡಿದ್ದೇವೆ. ನಮ್ಮ ಇಲಾಖೆಯು ಸುಸಜ್ಜಿತವಾಗಿದ್ದು, 3 ಸಾವಿರ ಖಾಯಂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅಕ್ರಮ್ ಪಾಷ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News