ರಾಜಧಾನಿಯಲ್ಲೇ ದಿನಕ್ಕೆ 25ಕ್ಕೂ ಹೆಚ್ಚು ಸೈಬರ್ ಪ್ರಕರಣ ಬೆಳಕಿಗೆ !

Update: 2019-02-25 16:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.25: ರಾಜಧಾನಿಯಲ್ಲಿ ಸೈಬರ್ ವಂಚನೆ ಜಾಲ ವಿಸ್ತರಣೆಯಾಗುತ್ತಲಿದ್ದು, ಕಳೆದ ಮೂರು ವರ್ಷದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸೈಬರ್ ಪ್ರಕರಣಗಳು ದಾಖಲಾಗಿವೆ. ದಿನಕ್ಕೆ 25ರಿಂದ 30 ಜನ ಸೈಬರ್ ವಂಚನೆಗೊಳಗಾಗುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಸುಧಾರಿತ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳನ್ನೇ ಬಂಡವಾಳ ಮಾಡಿಕೊಂಡು ಅಪರಾಧ ಕೃತ್ಯ ಎಸಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರದಿಂದ ಇರುವುದು ಸೂಕ್ತವಾಗಿದೆ. ರಾಜಧಾನಿಯಲ್ಲಿ 2019ರ ಆರಂಭದ 52 ದಿನಗಳಲ್ಲೇ 1,200 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, 2017 ಮತ್ತು 18ರ ಅಂಕಿ ಅಂಶಗಳಿಗೆ ಹೋಲಿಸಿದರೆ, ವರ್ಷಾರಂಭದ ಸೈಬರ್ ಅಪರಾಧ ಸಂಖ್ಯೆ ಅಧಿಕವಾಗಿದೆ.

ಬ್ಯಾಂಕ್ ಖಾತೆ ಅಥವಾ ಓಟಿಪಿ ನಂಬರ್ ಹಾಗೂ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಮ್ಯಾಟ್ರಿಮೋನಿಯಲ್, ಓಎಲ್ಎಕ್ಸ್ ವ್ಯವಹಾರ, ಉದ್ಯೋಗ ಕೊಡಿಸುವ ನೆಪ, ಡೇಟಿಂಗ್ ವೆಬ್‌ಸೈಟ್, ಲಾಟರಿ, ಹರ್ಬಲ್ಸ್ ಸೀಡ್ಸ್/ಆಯಿಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್ ಅಪರಾಧ ಸಂಖ್ಯೆ ಜನತೆಯನ್ನು ಬೆಚ್ಚಿಬೀಳಿಸಿದೆ.

ಸಾರ್ವಜನಿಕರ ಅಮಾಯಕತೆ, ಆಸೆ, ತಂತ್ರಜ್ಞಾನ ಬಳಕೆ ಇತಿಮಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚನೆ ಜಾಲ ಊಹೆಗೂ ನಿಲುಕದ ಸ್ಥಿತಿಗೆ ತಲುಪಿದೆ. ವಂಚನೆಯನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ವಂಚಕರು ನಾನಾ ರೀತಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ವಂಚನೆ: ಬ್ಯಾಂಕ್ ಮ್ಯಾನೇಜರ್ ಅಥವಾ ಸಿಬ್ಬಂದಿ ಹೆಸರಿನಲ್ಲಿ ಮೊಬೈಲ್‌ಗೆ ಕರೆ ಮಾಡುವ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಬಳಿಕ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿ ಮಾಡಬೇಕು, ಆಧಾರ್ ಲಿಂಕ್ ಮಾಡಬೇಕು ಎಂಬಿತ್ಯಾದಿ ಕಾರಣ ನೀಡಿ, ನಿಮ್ಮ ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ವಿವಿಧ ಮೂಲಗಳಿಂದ ನಂಬರ್ ಸಂಗ್ರಹ: ಜಸ್ಟ್ ಡಯಲ್ ಹಾಗೂ ಇತರೆ ಮಾರ್ಗಗಳ ಮೂಲಕ ನಿಮ್ಮ ಮೊಬೈಲ್ ನಂಬರ್ ಪಡೆಯುವ ವ್ಯಕ್ತಿಗಳು, ನಿಮ್ಮೊಂದಿಗೆ ವ್ಯವಹಾರ ಮಾಡಲು ಮುಂದಾಗಿದ್ದೇವೆ. ನಿಮ್ಮನ್ನು ಭೇಟಿ ಮಾಡಬೇಕೆಂದು ಕೋರುತ್ತಾರೆ. ಇದಕ್ಕೆ ಸಮ್ಮತಿಸಿದರೆ ಕೂಡಲೇ ನೀವಿರುವ ಸ್ಥಳಕ್ಕೆ ಬಂದು ಕೆಲ ಪ್ರಕ್ರಿಯೆ ಮುಗಿಸುವ ನೆಪದಲ್ಲಿ ನಿಮ್ಮ ಮೊಬೈಲ್ ಪಡೆದು ಖಾಸಗಿ ಮಾಹಿತಿ ಪಡೆಯುತ್ತಾರೆ.

ವಂಚಕರ ಮೊಬೈಲ್‌ನಲ್ಲಿ ನಿಮ್ಮ ಸಂದೇಶ: ಆ್ಯಪ್ ಮೂಲಕ ಪ್ರತಿ ಸಂದೇಶವನ್ನು ತಮ್ಮ ಮೊಬೈಲ್‌ನಲ್ಲಿ ನೋಡುವ ಅವಕಾಶ ಕಲ್ಪಿಸಿಕೊಂಡು ಮತ್ತೊಮ್ಮೆ ಬರುವುದಾಗಿ ಹೇಳಿ ಹೋಗುತ್ತಾರೆ. ಬಳಿಕ ಒಂದೆರಡು ದಿನಗಳಲ್ಲಿ ಮೊಬೈಲ್‌ಗೆ ಹತ್ತಾರು ಓಟಿಪಿ ನಂಬರ್‌ಗಳು ಬರುತ್ತವೆ. ಈ ಮೂಲಕ ಖಾತೆಯಲ್ಲಿರುವ ಹಣವನ್ನು ಸಂಪೂರ್ಣವಾಗಿ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ಮೋಸದ ಪ್ರಕ್ರಿಯೆ: ಕಂಪೆನಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿಯನ್ನು ನಂಬುವ ಮತ್ತೊಂದು ಕಂಪೆನಿಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ. ಸಾಮಾಜಿಕ ಜಾಲತಾಣ/ ಸಂದೇಶ ರೂಪದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಂದೇಶ. ಗುರುತಿನ ಚೀಟಿ, ಎಟಿಎಂ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಹಾಗೂ ಇತರೆ ದಾಖಲೆಗಳ ಕೋರಿಕೆ. ನಂತರ ಕೆಲವೊಂದು ಪ್ರಕ್ರಿಯೆ ಇದೆ ಎಂದು ನಂಬಿಸಿ ವಂಚಿಸಲಾಗುತ್ತದೆ.

ಎಚ್ಚರಿಕೆ ಅಂಶಗಳು: ಅಪರಿಚಿತ ವ್ಯಕ್ತಿ ಮಾತನಾಡಿದರೆ ನಿರ್ಲಕ್ಷ ತೋರಬೇಕು. ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳಕೂಡದು. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರನ್ನು ತಕ್ಷಣ ನಂಬಬಾರದು, ಸ್ಪಂದಿಸಬಾರದು. ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡಬಾರದು, ತಮ್ಮ ಮೊಬೈಲ್ ನಂಬರ್ ನೋಂದಾಯಿಸದಿರುವುದು ಸೂಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News