ಯೋಜನೆಗಳಲ್ಲಿ ತಾರತಮ್ಯ ಆರೋಪ: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಧರಣಿ

Update: 2019-02-27 13:02 GMT

ಬೆಂಗಳೂರು, ಫೆ.27: ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಲ್ಲಿ ಪಾಲಿಕೆಯ ಎಲ್ಲ ಯೋಜನೆಗಳಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ಸದಸ್ಯರು ಬಿಬಿಎಂಪಿ ಕೌನ್ಸಿಲ್ ಬಾವಿಗಿಳಿದು ಧರಣಿ ನಡೆಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ 7 ವಾರ್ಡ್‌ಗಳಿಗೆ 1200 ಲ್ಯಾಪ್‌ಟಾಪ್ ವಿತರಣೆ ಸೇರಿದಂತೆ ಪ್ರತಿಯೊಂದು ಯೋಜನೆಯಲ್ಲಿಯೂ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಮಹಾಲಕ್ಷ್ಮೀ ಲೇಔಟ್‌ನ ಒಂದೊಂದು ವಾರ್ಡ್‌ಗೆ 200 ರಂತೆ ಲ್ಯಾಪ್‌ಟಾಪ್ ವಿತರಿಸಲಾಗಿದ್ದು, ಉಳಿದ ವಾರ್ಡ್‌ಗಳಿಗೆ ಲ್ಯಾಪ್‌ಟಾಪ್ ನೀಡಿಲ್ಲ ಯಾಕೆ? ಜನರು ನಮ್ಮ ವಾರ್ಡ್‌ಗೇಕೆ ಲ್ಯಾಪ್‌ಟಾಪ್ ನೀಡಿಲ್ಲ ಎಂದು ಮನೆಗೆ ಬಂದು ಕೇಳುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಒಂದು ಕ್ಷೇತ್ರಕ್ಕೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ನೀಡುವ ಎಸ್‌ಎಫ್‌ಸಿ ಅನುದಾನ ಲ್ಯಾಪ್‌ಟಾಪ್‌ಗಳ ಖರೀದಿ ಮಾಡಲು ಬಳಕೆ ಮಾಡುವಂತಿಲ್ಲ. ಆದರೂ, ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು, ನಿಮ್ಮ ವಾರ್ಡ್‌ಗಳಿಗೆ ಲ್ಯಾಪ್‌ಲಾಪ್ ನೀಡಿ, ನಮಗೆ ಯಾಕೆ ಕಡೆಗಣಿಸುತ್ತಿದ್ದೀರಾ. ನಿಮ್ಮ ವಾರ್ಡ್‌ನಂತೆ ನಮಗೂ 200 ಲ್ಯಾಪ್‌ಟಾಪ್ ನೀಡಬೇಕು ಎಂದು ಒತ್ತಾಯಿಸಿದರು.

ವಿಪಕ್ಷ ನಾಯಕರ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ಮುನಿರತ್ನ, ಒಂದು ಕ್ಷೇತ್ರದ ಮಕ್ಕಳಿಗೆ ಮಾತ್ರ ಲ್ಯಾಪ್‌ಟಾಪ್ ಕೊಟ್ಟರೆ ಹೇಗೆ? ಮಕ್ಕಳಲ್ಲಿಯೇ ತಾರತಮ್ಯ ಮಾಡುವುದು ಸರಿಯಲ್ಲ. ಮಹಾಲಕ್ಷ್ಮೀ ಲೇಔಟ್‌ನಲ್ಲಿ 2.30 ಲಕ್ಷ ಜನರಿದ್ದು, 1200 ಲ್ಯಾಪ್‌ಟಾಪ್ ನೀಡಲಾಗಿದೆ. ಹಾಗೆಯೇ, ನನ್ನ ಕ್ಷೇತ್ರದಲ್ಲಿ 4.80 ಲಕ್ಷ ಜನಸಂಖ್ಯೆಯಿದ್ದು, 2,400 ನೀಡುವಿರಾ ಎಂದು ಪ್ರಶ್ನಿಸಿದರು.

ಈ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ವಿಪಕ್ಷ ನಾಯಕ ಮತ್ತು ಶಾಸಕರ ಪ್ರಶ್ನೆಗೆ ಉತ್ತರಿಸುತ್ತಾ, ಲ್ಯಾಪ್‌ಟಾಪ್ ಖರೀದಿಯಲ್ಲಿ ಕೇವಲ ಎಸ್‌ಎಪ್ಸಿ ಅನುದಾನ ಮಾತ್ರ ಬಳಕೆ ಮಾಡಿಕೊಂಡಿಲ್ಲ. ಇದರಲ್ಲಿ ಮೇಯರ್ ಅನುದಾನ ಸೇರಿ ಇತರೆ ಗ್ರ್ಯಾಂಟ್‌ಗಳನ್ನು ಹಾಕಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೌನ್ಸಿಲ್ ಸಭೆಯ ಮುಂದಿಡುತ್ತೇನೆ ಎಂದು ಉತ್ತರಿಸಿದರು.

ಇದರಿಂದ ಸಮಾಧಾನಗೊಂಡ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಕಾಂಗ್ರೆಸ್-ಜೆಡಿಎಸ್ ಸದಸ್ಯರಿರುವ ವಾರ್ಡ್‌ಗಳಿಗೆ ನೀಡಿರುವ 200 ಲ್ಯಾಪ್‌ಟಾಪ್‌ನಂತೆ ನಮ್ಮ ಸದಸ್ಯರ ವಾರ್ಡ್‌ಗಳಿಗೆ 150 ಲ್ಯಾಪ್‌ಟಾಪ್ ಆದರೂ ನೀಡಲಾಗುತ್ತದೆ ಎಂದು ಘೋಷಣೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿ: ರಾಜ್‌ಕುಮಾರ್ ಪಾರ್ಕ್‌ನಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಉದಯಕುಮಾರ್‌ನನ್ನು ಮತ್ತು ಪಾರ್ಕ್ ವೀಕ್ಷಣೆಗೆ ಮೇಯರ್ ಭೇಟಿ ನೀಡುತ್ತಾರೆಂದು ಅಧಿಕಾರಿಗಳಿಗೆ ಗೊತ್ತಿದ್ದರೂ, ಸೌಜನ್ಯಕ್ಕಾದರೂ ನನ್ನನ್ನು ಕರೆದಿಲ್ಲ. ಇದರಿಂದ ನನ್ನ ಹಕ್ಕಿಗೆ ಚ್ಯುತಿಯಾಗಿದೆ ಎಂದು ಕೌನ್ಸಿಲ್ ಸಭೆಯಲ್ಲಿ ಸದಸ್ಯ ಕೋದಂಡರೆಡ್ಡಿ ಅಳಲು ತೋಡಿಕೊಂಡರು. ಸ್ಥಳೀಯ ಪಾಲಿಕೆ ಸದಸ್ಯರನ್ನು ಆಹ್ವಾನಿಸದ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜನ್ ಅವರು ಬೆಂಗಳೂರು ಪೂರ್ವ ಜಂಟಿ ಆಯುಕ್ತರಿಗೆ ಆದೇಶಿಸಿದರು.

ಟೆಂಡರ್ ಪಡೆದವರು ಕಪ್ಪುಪಟ್ಟಿಗೆ: ಸ್ಥಳೀಯ ಶಾಸಕರ ಅನುದಾನದಲ್ಲಿ ರಾಜಕುಮಾರ್ ಪಾರ್ಕ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಶೇ. 15ರಷ್ಟು ಕೆಲಸ ಮುಗಿದ ಮೇಲೆ ಜನರು ಕೆಲಸ ಗುಣಮಟ್ಟದಿಂದ ಆಗುತ್ತಿಲ್ಲ ಎಂಬ ಆರೋಪ ಮಾಡಿದ ನಂತರ ಟೆಂಡರ್ ಪಡೆದವರು ಕಾಮಗಾರಿ ಮೊಟಕುಗೊಳಿಸಿದ್ದರು. ಅಂದಿನಿಂದ ಬಿಡಿಎ ಅಧೀನದಲ್ಲಿದ್ದ ಪಾರ್ಕ್ ಬಿಬಿಎಂಪಿಗೆ ಬಂದಿದ್ದು, ಉಳಿದ ಕಾಮಗಾರಿ ಮಾಡಲು ಟೆಂಡರ್ ನೀಡಲಾಗಿತ್ತು. ಅವರೂ ಕಾಮಗಾರಿ ಸರಿಯಾಗಿ ಮಾಡದಿಲ್ಲದಿರುವುದರಿಂದ ಬಾಲಕ ಮೃತಪಟ್ಟಿದ್ದಾನೆ. ಟೆಂಡರ್ ಪಡೆದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್‌ ಮಾಹಿತಿ ನೀಡಿದರು

ಮಹಾಲಕ್ಷ್ಮಿ ಲೇಔಟ್‌ನ ವಿಧಾನಸಭಾ ಕ್ಷೇತ್ರದಲ್ಲಿರುವ ವಾರ್ಡ್‌ಗಳಿಗೆ ನೀಡಿರುವ ಲ್ಯಾಪ್‌ಲಾಪ್‌ಗಳನ್ನು ಎಸ್‌ಎಫ್‌ಸಿ ಅನುದಾನದಲ್ಲಿ ವಿತರಿಸುತ್ತಿಲ್ಲ. ಅದಕ್ಕೆ ಮೇಯರ್ ಅನುದಾನವನ್ನೂ ಬಳಸಿಕೊಳ್ಳಲಾಗುತ್ತಿದೆ.

-ವಾಜಿದ್, ಆಡಳಿತ ಪಕ್ಷದ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News