‘ಸಂವಿಧಾನ ವಸ್ತು ಸಂಗ್ರಹಾಲಯ’ ಸ್ಥಾಪನೆಗೆ ಸಮಾಜ ಕಲ್ಯಾಣ ಇಲಾಖೆ ಸಿದ್ಧತೆ

Update: 2019-02-27 16:04 GMT

ಬೆಂಗಳೂರು, ಫೆ. 27: ವಿಶ್ವದ ಅತ್ಯಂತ ಶ್ರೇಷ್ಠ, ಅತಿದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಸಂವಿಧಾನ ರಚನೆ, ಅದರ ಆಶಯ, ರಾಜನೀತಿ, ಲೋಕಸಭೆ, ರಾಜ್ಯಸಭೆ, ವಿಧಾನ ಮಂಡಲಗಳ ರಚನಾ ವಿಧಾನ, ಸಂವಿಧಾನ ರಚನಾ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಎದುರಿಸಿದ ಸವಾಲುಗಳು ಸೇರಿ ಐತಿಹಾಸಿಕ ಸಂಗತಿಗಳುಳ್ಳ ಸಂವಿಧಾನ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಮಾಜ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ.

ವೈಶಿಷ್ಟ್ಯಪೂರ್ಣವಾದ ಈ ವಸ್ತು ಸಂಗ್ರಹಾಲಯಗಳು ಬೆಂಗಳೂರಿನ ಯಲಹಂಕ ಸಮೀಪದಲ್ಲಿರುವ ನಾಗದಾಸನಹಳ್ಳಿ ಬಳಿ ನಿರ್ಮಾಣವಾಗಲಿವೆ. ಸಂವಿಧಾನ ವಸ್ತು ಸಂಗ್ರಹಾಲಯಕ್ಕೆ 120 ಕೋಟಿ ರೂ.ವೆಚ್ಚವಾಗಲಿದೆ ಎಂದು ಇಲಾಖೆ ಅಂದಾಜು ಮಾಡಿದೆ.

ಈ ಯೋಜನೆಗಳ ಸೃಷ್ಟಿಗೆ ಕಾರಣರಾಗಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಸಂವಿಧಾನ ರಚಿಸುವ ಮೂಲಕ ಸಾಮಾಜಿಕ ಬದಲಾವಣೆ ತರುವುದರೊಂದಿಗೆ ಈ ದೇಶದಲ್ಲಿ ದಮನಿತರ ಬದುಕನ್ನು ಬದಲಾಯಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಆಮೂಲಾಗ್ರವಾಗಿ ಸೃಷ್ಟಿಸಲಾಗುವುದು.

ಸಂವಿಧಾನ ವಸ್ತು ಸಂಗ್ರಹಾಲಯ: ಸಂವಿಧಾನ ವಸ್ತು ಸಂಗ್ರಹಾಲಯವೂ ಇದೊಂದು ವಿಶಿಷ್ಟವಾದ ಪರಸ್ಪರ ಪರಿಣಾಮ ಬೀರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಮ್ಯೂಸಿಯಂ ಆಗಿ ಹೊರ ಹೊಮ್ಮಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ.

ಯಲಹಂಕ ಸಮೀಪ ನಾಗದಾಸನಹಳ್ಳಿ ಬಳಿ ಸುಮಾರು 8 ಎಕರೆ ಪ್ರದೇಶದಲ್ಲಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಹೊಂದಿಸಿಕೊಂಡು ಈ ಮ್ಯೂಸಿಯಂ ಅನ್ನು ರೂಪಿಸಲಾಗುವುದು. ಸಂವಿಧಾನದ ಆಶಯಗಳ ಮರುಸೃಷ್ಟಿ ಇದಾಗಲಿದೆ ಎಂದು ಹೇಳಲಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಎದುರಾದ ಪ್ರತಿರೋಧ, ಸ್ವಾತಂತ್ರ್ಯಾನಂತರ ನಮ್ಮದೇ ಸ್ವಾಭಿಮಾನಿ ರಾಷ್ಟ್ರ ರೂಪಿಸಲು ಸಂವಿಧಾನದ ಅನಿವಾರ್ಯತೆ ಹಾಗೂ ಅದನ್ನು ಸಿದ್ಧಪಡಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಂವಿಧಾನ ರಚನಾ ಸಮಿತಿ ಪಟ್ಟ ಶ್ರಮ ಹಾಗೂ ಕರಡು ಸಂವಿಧಾನದ ಬಗ್ಗೆ ನಡೆದ ದೀರ್ಘ ಚರ್ಚೆಯ ನಡವಳಿಗಳು ಇಲ್ಲಿ ದಾಖಲೆಗೊಳ್ಳಲಿದೆ.

ಸಂವಿಧಾನ ಚರ್ಚೆಗಳನ್ನು ಕ್ರೋಡೀಕರಿಸಿ ಪ್ರಕಟಗೊಂಡಿರುವ ಗ್ರಂಥಗಳು ಹಾಗೂ ಅವುಗಳ ಕನ್ನಡ ಭಾಷಾಂತರ ದಾಖಲೆಗಳನ್ನು ಒಳಗೊಂಡ ಗ್ರಂಥಾಲಯ ಇಲ್ಲಿರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತಂತೆ ಇದುವರೆಗೂ ಪ್ರಕಟಗೊಂಡಿರುವ ಉತ್ಕೃಷ್ಟ ಕೃತಿಗಳನ್ನು ಗ್ರಂಥಾಲಯದಲ್ಲಿ ಇರಿಸಲಾಗುವುದು.

ದೇಶ, ವಿದೇಶಗಳ ಅಧ್ಯಯನ ಶೀಲರು ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅಧ್ಯಯನ ಮಾಡುವಂತಹ ವಾತಾವರಣ ಕಲ್ಪಿಸಲಾಗುವುದು. ಈ ಯೋಜನೆಗೆ 120ಕೋಟಿ ರೂ. ವೆಚ್ಚವಾಗುವದೆಂದು ಅಂದಾಜು ಮಾಡಲಾಗಿದೆ. 2019-20ರ ಆಯವ್ಯಯದಲ್ಲಿ ಪ್ರಾರಂಭಿಕವಾಗಿ 20 ಕೋಟಿ ರೂ.ಅನುದಾನ ಒದಗಿಸಲಾಗಿದೆ.

ಮಹರ್ಷಿ ವಾಲ್ಮೀಕಿ ವಸ್ತು ಸಂಗ್ರಹಾಲಯ: ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ವಿನೂತನವಾದ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಸ್ತು ಸಂಗ್ರಹಾಲಯವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನಚರಿತ್ರೆ ಮತ್ತು ಅವರು ರಚಿಸಿರುವ ಮಹಾಕಾವ್ಯ ರಾಮಾಯಣವನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರದರ್ಶಿಸಲು ಯೋಜಿಸಲಾಗಿದೆ. ವಾಲ್ಮೀಕಿ ಮಹರ್ಷಿಗಳು ಪ್ರತಿಪಾದಿಸಿರುವ ತತ್ವ, ಮೌಲ್ಯ ಮತ್ತು ಆದರ್ಶಗಳನ್ನು ಸಂಗ್ರಹಾಲಯದಲ್ಲಿ ಬಿಂಬಿಸುವುದರೊಂದಿಗೆ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಗತಿಗಳನ್ನು ಅನಾವರಣಗೊಳಿಸಲಾಗುವುದು.

ಈ ಸಂಗ್ರಹಾಲಯ ಯಲಹಂಕ ಸಮೀಪವಿರುವ ನಾಗದಾಸನಹಳ್ಳಿ ಬಳಿ 4.36 ಎಕರೆ ಪ್ರದೇಶದಲ್ಲಿ ರೂಪುಗೊಳ್ಳಲಿದೆ. ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ವಸ್ತು ಸಂಗ್ರಹಾಲಯದಲ್ಲಿ ಬುಡಕಟ್ಟು ಜನಾಂಗದ ಜೀವನ ಶೈಲಿಯೂ ಸೇರಿದಂತೆ ಅವರ ಹಬ್ಬ, ಆಚರಣೆಗಳು ಮುಂತಾದ ವಿಶಿಷ್ಟ ಸಂಪ್ರದಾಯವನ್ನು ಮುಂದಿನ ಪೀಳಿಗೆಗಾಗಿ ಉಳಿಸಿ, ಸಂರಕ್ಷಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿನ ಹಲಗಲಿ ಬೇಡರಾದ ಜಡಗ, ಬಾಲ ಮತ್ತು ವೀರ ಸಿಂಧೂರ ಲಕ್ಷ್ಮಣ ಹಾಗೂ ಇತರೆ ಬುಡಕಟ್ಟು ಜನಾಂಗದ ಅನೇಕ ಶೂರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಶೌರ್ಯ ಸಾಹಸಗಳನ್ನು ತೋರಿದ್ದು, ಇಂತಹ ಅಪ್ರತಿಮ ಹೋರಾಟಗಾರರ ಶೌರ್ಯ ಸಾಧನೆ ವಿವರಗಳನ್ನು ಬಿಂಬಿಸುವ ಮೂಲಕ ಜನತೆಗೆ ಪರಿಚಯಿಸಲಾಗುವುದು. ಉದ್ದೇಶಿತ ವಸ್ತು ಸಂಗ್ರಹಾಲಯ ಸ್ಥಾಪನೆಗೆ 60 ಕೋಟಿ ರೂ.ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ.

‘ದೇಶದ ಜನರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾನತೆಯಿಂದ ಬದುಕಲು ಮೂಲಭೂತ ಹಕ್ಕನ್ನು ಕಲ್ಪಿಸಿಕೊಟ್ಟಿರುವ ಸಂವಿಧಾನದ ಆಶಯಗಳನ್ನು ಜನತೆಗೆ ಸುಲಭವಾಗಿ ತಲುಪಿಸಲು ಪೂರಕವಾಗುವಂತೆ ಸಮಾಜ ಕಲ್ಯಾಣ ಇಲಾಖೆ ವಸ್ತು ಸಂಗ್ರಹಾಲಯ ರೂಪಿಸುತ್ತಿರುವುದು ಸ್ವಾಗತಾರ್ಹ ಕ್ರಮ’

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

‘ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಕೃತಿಯಲ್ಲಿ ಅಡಗಿರುವ ನೀತಿ, ಶ್ರೀರಾಮಚಂದ್ರನಲ್ಲಿದ್ದ ಆದರ್ಶ, ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲುವ ದೃಷ್ಟಿಯಿಂದ ಹಾಗೂ ಬುಡಕಟ್ಟು ಜನಾಂಗದ ಜೀವನ ಶೈಲಿ, ಅವರ ಹಬ್ಬ, ಆಚರಣೆಗಳು ಮುಂತಾದ ವಿಶಿಷ್ಟ ಸಂಪ್ರದಾಯವನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಮಹರ್ಷಿ ವಾಲ್ಮೀಕಿ ವಸ್ತು ಸಂಗ್ರಾಹಾಲಯ ಸ್ಥಾಪಿಸಲಾಗುವುದು’

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News