ಸಮರದ ಕಾರ್ಮೋಡದಲ್ಲಿ ಮಿಂಚಬೇಕಾದ ಭಾರತೀಯ ಭಾವೈಕ್ಯ

Update: 2019-02-28 05:00 GMT

ಮೊನ್ನೆ ಭಾರತೀಯ ವಾಯು ಸೇನೆ ವಿಮಾನಗಳು ಪಾಕಿಸ್ತಾನದೊಳಗಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬು ದಾಳಿ ನಡೆಸಿ ಸುರಕ್ಷಿತವಾಗಿ ಮರಳಿದ್ದುವು. ನಿನ್ನೆಯ ನಮ್ಮ ಮರು ಪ್ರಯತ್ನದಲ್ಲಿ ತೊಡಕುಗಳು ಎದುರಾಗಿವೆ. ಈ ಕಾರ್ಯಾಚರಣೆಯ ಔಚಿತ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ. ಪುಲ್ವಾಮದ ದುಸ್ಸಾಹಸದ ಬಳಿಕ ಪ್ರತೀಕಾರಕ್ಕಾಗಿ ಕಾಯುತ್ತಿದ್ದವರು, ಈ ಕಾರ್ಯಾಚರಣೆ ನಡೆಸುವುದಕ್ಕೆ 12 ದಿನಗಳವರೆಗೆ ಕಾಯುವ ಅಗತ್ಯವಿತ್ತೇ ಎಂದು ಪ್ರಶ್ನಿಸುತ್ತಿದ್ದಾರೆ. ನಿಜವಾಗಿ ಕಳೆದ 12 ದಿನಗಳಲ್ಲಿ ಭಾರತವು ನಡೆಸಿರುವ ರಾಜತಾಂತ್ರಿಕ ಚಟುವಟಿಕೆಗಳನ್ನು ಗಮನಿಸಿದವರು ಯಾರೂ ಈ ಬಗೆಯ ಪ್ರಶ್ನೆ ಎತ್ತಲಾರರು. ಈ ಅವಧಿಯಲ್ಲಿ, ಜಾಗತಿಕ ಸ್ತರದಲ್ಲಿ ಪಾಕಿಸ್ತಾನದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಮತ್ತು ರಾಜತಾಂತ್ರಿಕ ಸ್ತರದಲ್ಲಿ ಅದನ್ನು ಮೂಲೆಗುಂಪಾಗಿಸುವ ನಿಟ್ಟಿನಲ್ಲಿ ಭಾರತಕ್ಕೆ ಪರಿಣಾಮಕಾರಿ ಯಶಸ್ಸು ಪ್ರಾಪ್ತವಾಗಿದೆ. ಆದ್ದರಿಂದಲೇ, ಮಂಗಳವಾರ ಭಾರತ ನಡೆಸಿದ ಮಂಗಳಾರತಿಯನ್ನು ಯಾವ ದೇಶವೂ ಖಂಡಿಸಿರಲಿಲ್ಲ. ಹೆಚ್ಚೆಂದರೆ, ಸಂಯಮ ಪಾಲಿಸಬೇಕೆಂಬ ಉಪದೇಶ ಮಾತ್ರ ಕೆಲವು ವಲಯಗಳಿಂದ ಕೇಳಿ ಬಂದಿತ್ತು. ಒಂದುವೇಳೆ ಭಾರತವು ಆತುರಾತುರವಾಗಿ ಪ್ರತಿಕ್ರಿಯೆಗೆ ಇಳಿದಿದ್ದರೆ ಖಂಡಿತವಾಗಿಯೂ ಪರಿಸ್ಥಿತಿ ಭಾರತದ ಪಾಲಿಗೆ ಇಷ್ಟೊಂದು ಪೂರಕವಾಗಿರುತ್ತಿರಲಿಲ್ಲ.

ಪಾಕಿಸ್ತಾನದ ಆಡಳಿತಗಾರರು, ಅಲ್ಲಿಯ ಸೇನಾ ಪಡೆಗಳು ಮತ್ತು ಅಲ್ಲಿಯ ಭಾವುಕ ಜನರ ಭ್ರಮೆಗಳೇನೇ ಇರಲಿ, ಆ ದೇಶ ಹೆಚ್ಚೆಂದರೆ ಭಾರತದ ವಿರೋಧಿಯೇ ಹೊರತು ಯಾವ ದೃಷ್ಟಿಯಿಂದಲೂ, ಯಾವ ರಂಗದಲ್ಲೂ ಭಾರತದ ಪ್ರತಿಸ್ಪರ್ಧಿಯಲ್ಲ. ಪ್ರತಿಸ್ಪರ್ಧಿ ಎಂದು ಕರೆಸಿಕೊಳುವುದಕ್ಕೆ ಬೇಕಾದ ಯಾವ ಅರ್ಹತೆಯೂ ಅದಕ್ಕಿಲ್ಲ. ಒಂದು ಕಾಲದಲ್ಲಿ ಕ್ರಿಕೆಟ್, ಹಾಕಿ ಮುಂತಾದ ಕ್ರೀಡೆಗಳಲ್ಲಿ ಅದು ನಮ್ಮ ಪ್ರತಿಸ್ಪರ್ಧಿಯಾಗಿತ್ತು. ಆ ರಂಗದ ಅಚ್ಛೇ ದಿನ್‌ಗಳು ಕೂಡಾ ಇಂದು ಅವರ ಪಾಲಿಗೆ ಇಲ್ಲವಾಗಿವೆ. ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ಮತ್ತು ಆರ್ಥಿಕತೆಯಲ್ಲಿ ಪಾಕಿಸ್ತಾನ ನಮ್ಮ ಕಾಲು ಭಾಗದಷ್ಟೂ ಇಲ್ಲ. ಕೈಗಾರಿಕಾ ಅಭಿವೃದ್ಧಿಯಲ್ಲಿ ಹಾಗೂ ಸಮಾಜ ಕಲ್ಯಾಣ ರಂಗದಲ್ಲಿ ಅದು ನಮಗಿಂತ ಕನಿಷ್ಠ ಕೆಲವು ದಶಕ ಹಿಂದಿದೆ. ಈಗಾಗಲೇ ಅದು ತನ್ನ ನೆರೆಯ ಅಫ್ಘಾನಿಸ್ತಾನದ ಜೊತೆ ಯುದ್ಧ ನಿರತವಾಗಿದೆ. ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದ ಸಾಕಷ್ಟು ಬಲಿಷ್ಠವಾಗಿದೆ. ಪಾಕಿಸ್ತಾನ ನಮಗಿಂತ ಮುಂದೆ ಇರುವುದು ರಾಜಕೀಯ ಭ್ರಷ್ಟಾಚಾರ ಮತ್ತು ಅಂತಃಕಲಹಗಳಲ್ಲಿ ಮಾತ್ರ. ಮಿಲಿಟರಿ ಶಕ್ತಿಯ ದೃಷ್ಟಿಯಿಂದ ನೋಡಿದರೆ, ನಮ್ಮ ಹಾಗೆ ಅದು ಕೂಡಾ ಒಂದು ಅಣ್ವಸ್ತ್ರ ಸಜ್ಜಿತ ದೇಶ ಎಂಬ ಪ್ರಮುಖ ಅಂಶವನ್ನು ಬಿಟ್ಟರೆ ಉಳಿದಂತೆ ಯೋಧರ ಸಂಖ್ಯೆ, ಯುದ್ಧ ವಿಮಾನಗಳ ಸಂಖ್ಯೆ, ಟ್ಯಾಂಕ್, ರಾಕೆಟ್ ಲಾಂಚರ್, ಮಿಸೈಲ್ ಇತ್ಯಾದಿಗಳ ಸಂಖ್ಯೆಯನ್ನು ತುಲನೆ ಮಾಡಿದರೆ ಪಾಕಿಸ್ತಾನ ಯಾವ ರೀತಿಯಲ್ಲೂ ಭಾರತಕ್ಕೆ ಸಾಟಿಯಲ್ಲ. ಆದ್ದರಿಂದ, ಒಂದು ವೇಳೆ ಸದ್ಯದ ಸನ್ನಿವೇಶವು ಕೈ ಮೀರಿ ಪೂರ್ಣ ಪ್ರಮಾಣದ ಯುದ್ಧವು ಅನಿವಾರ್ಯವಾಗಿ ಬಿಟ್ಟರೂ ಸರ್ವನಾಶದ ಅಪಾಯ ಇರುವುದು ಪಾಕಿಸ್ತಾನಕ್ಕೇ ಹೊರತು ಭಾರತಕ್ಕಲ್ಲ. ಕೇವಲ ಕ್ರಿಕೆಟ್ ಅನುಭವ ಯುದ್ಧಗಳನ್ನು ಗೆಲ್ಲುವುದಕ್ಕೆ ಸಹಾಯಕವಾಗುವುದಿಲ್ಲ. ಪಾಕ್ ನಾಯಕತ್ವದ ವಿವೇಕ ತರ್ಕಗಳೆಲ್ಲ ನಿಷ್ಕ್ರಿಯವಾಗಿದ್ದರೆ ಕನಿಷ್ಠಪಕ್ಷ ಅವರ ಗತಕಾಲದ ಹೀನಾಯ ಸಮರಾನುಭವ ಗಳಿಂದಾದರೂ ಅವರಿಗೆ ಈ ಅಪಾಯ ಮನವರಿಕೆಯಾಗಬೇಕು.

ಇದೇ ವೇಳೆ, ನಮ್ಮ ನಾಯಕತ್ವವು ಯುದ್ಧವೊಂದನ್ನು ಬಿಟ್ಟು ಲಭ್ಯವಿರುವ ಬೇರೆಲ್ಲ ದಾರಿಗಳನ್ನು ಬಳಸಿ ನಮ್ಮ ದೇಶದ ಸಂಪೂರ್ಣ ಭದ್ರತೆಯ ಗುರಿ ಸಾಧಿಸಲು ಗರಿಷ್ಠ ಶ್ರಮ ನಡೆಸಬೇಕಾಗಿದೆ. ಹಲವೊಮ್ಮೆ ಯುದ್ಧವೆಂಬ ದುಬಾರಿ ಮಾರ್ಗದಿಂದ ಸಾಧಿಸಲಾಗದ್ದನ್ನು ಹಲವು ಬಗೆಯ ಶಾಂತಿಯುತ ಪರ್ಯಾಯ ಮಾರ್ಗಗಳಿಂದ ಸಾಧಿಸಲು ಸಾಧ್ಯವಾಗುವುದುಂಟು. ಅಂತಹ ಮಾರ್ಗಗಳ ಮೂಲಕ ಗುರಿ ಸಾಧಿಸುವ ಯಾವ ಅವಕಾಶವನ್ನೂ ನಾವು ಕಳೆದುಕೊಳ್ಳಬಾರದು. ಏಕೆಂದರೆ ಯುದ್ಧದ ವಿನಾಶಗಳು ಎಂದೂ ಏಕಪಕ್ಷೀಯವಾಗಿರುವುದಿಲ್ಲ. ವಿಜಯವು ನಮ್ಮ ಪಾಲಿನ ಕಟ್ಟಿಟ್ಟ ಬುತ್ತಿ ಎಂದುಕೊಂಡರೂ ಅದು ಕೇವಲ ಲಾಭದ ಬುತ್ತಿಯಂತೂ ಆಗಿರುವುದಿಲ್ಲ. ಸದ್ಯ 44 ಮಂದಿ ಯೋಧರನ್ನು ಸ್ಮರಿಸಿ ರೋದಿಸುತ್ತಿರುವ ನಾವು ವಿಜಯಿಗಳಾಗಿ ಮರಳುವ ಸನ್ನಿವೇಶವು, ಅಂತಹ ಇನ್ನೂ ಅನೇಕ ಯೋಧರನ್ನು ಮತ್ತು ನಾಗರಿಕರನ್ನು ಕಳೆದುಕೊಂಡು ವ್ಯಾಪಕ ನಾಶನಷ್ಟಗಳನ್ನು ಕಂಡು ರೋದಿಸುವ ಸನ್ನಿವೇಶವಾಗಿರಬಹುದೇ ಹೊರತು ಕೇವಲ ಉತ್ಸವ ಆಚರಿಸುವ ಸನ್ನಿವೇಶವಾಗಿರಲಾರದು. ಆದ್ದರಿಂದ ಯುದ್ಧಪೂರ್ವದ ಇಂದಿನ ನಮ್ಮ ಸನ್ನಿವೇಶವು ನಮ್ಮ ನಾಯಕತ್ವದ ಪಾಲಿಗೆ ಕೇವಲ ಆವೇಶ ಹಾಗೂ ಆಕ್ರೋಶದ, ಸಿಳ್ಳು ಚಪ್ಪಾಳೆ ಗಿಟ್ಟಿಸುವ ಅಗ್ಗದ ಡೈಲಾಗ್‌ಗಳನ್ನು ಹೊಡೆಯುವ ಸನ್ನಿವೇಶವಾಗಿರದೆ ಸೂಕ್ಷ್ಮ ಲೆಕ್ಕಾಚಾರದ, ಬಹಳ ದೂರ ದೃಷ್ಟಿಯ, ಮುತ್ಸದ್ದಿತನದ, ಪ್ರಬುದ್ಧತೆಯ ಮತ್ತು ಗರಿಷ್ಠ ಸಂಯಮದ ಸನ್ನಿವೇಶವೂ ಆಗಿದೆ. ಹಾಗೆಯೇ ಇದು ರಾಜಕೀಯ ಸ್ವಾರ್ಥ, ಚುನಾವಣಾ ಲೆಕ್ಕಾಚಾರ, ಪಕ್ಷಗಳ ಹಿತಾಸಕ್ತಿ, ವ್ಯಕ್ತಿಗತ ಪ್ರತಿಷ್ಠೆ, ಸ್ವಪ್ರಚಾರದ ಹೊಲಸು ಸಂಸ್ಕೃತಿ ಇತ್ಯಾದಿ ಎಲ್ಲವನ್ನೂ ಮೂಲೆಗಿಟ್ಟು ಎಲ್ಲ ನಿರ್ಧಾರಗಳೂ ಎಲ್ಲರ ನಿರ್ಧಾರಗಳಾಗಿರುವಂತೆ, ಎಲ್ಲವೂ ಸರ್ವಾನುಮತದಿಂದ ನಡೆಯುವಂತೆ ನೋಡಿಕೊಳ್ಳಬೇಕಾದ ತೀರಾ ನಾಜೂಕಿನ, ಸಾಮೂಹಿಕ ಹೊಣೆಗಾರಿಕೆಯ ಸನ್ನಿವೇಶವಾಗಿದೆ. ಆಡಳಿತದಲ್ಲಿರುವವರು ಸನ್ನಿವೇಶವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂಬಂತಹ ಸಂಶಯಗಳು ಯಾವುದೇ ವಲಯದಲ್ಲಿ ಕಿಂಚಿತ್ ಪ್ರಮಾಣದಲ್ಲೂ ತಲೆದೋರದಂತೆ ನೋಡಿಕೊಳ್ಳಬೇಕಾದ ಅಸಾಮಾನ್ಯ ಹೊಣೆಯೂ ಸದ್ಯ ಸರಕಾರದ ಮೇಲಿದೆ. ಇಂದು ದಿಲ್ಲಿಯಲ್ಲಿ ಸಭೆ ಸೇರಿದ್ದ ದೇಶದ ಇಪ್ಪತ್ತಕ್ಕೂ ಹೆಚ್ಚಿನ ವಿರೋಧಪಕ್ಷಗಳ ನಾಯಕರು ತಮ್ಮ ಜಂಟಿ ಹೇಳಿಕೆಯಲ್ಲಿ ಬಹುತೇಕ ಇದೇ ಆಶಯ ಪ್ರಕಟಿಸಿದ್ದು, ಭದ್ರತಾ ಪಡೆಗಳ ತ್ಯಾಗಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರೆಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಶಾಂತಿಗೆ ಪ್ರಥಮ ಪ್ರಾಶಸ್ತ್ಯ ಎಂಬುದನ್ನು ಒಪ್ಪಿಕೊಂಡರೂ, ಒ ಮ್ಮೆ ಯುದ್ಧವು ಅನಿವಾರ್ಯವಾಗಿ ಬಿಟ್ಟಿತೆಂದರೆ ಮತ್ತೆ ಲಾಭ ನಷ್ಟಗಳ ಲೆಕ್ಕಾಚಾರಕ್ಕೆ ಅವಕಾಶ ವಿರುವುದಿಲ್ಲ. ಆ ಬಳಿಕ ಉಳಿದಿರುವುದು, ಯಾವ ಬೆಲೆ ತೆತ್ತಾದರೂ ಆದಷ್ಟು ಶೀಘ್ರ ಗುರಿ ಸಾಧಿಸಿ ವಿಜಯ ಪ್ರಾಪ್ತಿ ಮಾಡುವ ಆಯ್ಕೆ ಮಾತ್ರ. ಸದ್ಯ ವಿವಿಧ ಆಯಾಮಗಳಿಂದ ಪರಿಸ್ಥಿತಿಯು ನಮ್ಮ ಪರವಾಗಿದೆ. ಆದರೆ ಯುದ್ಧದಲ್ಲಿ ಸ್ಥಿತಿಗತಿಗಳು ಸದಾ ಒಂದೇ ಸ್ವರೂಪದಲ್ಲಿರುವುದಿಲ್ಲ. ಅವು ಸದಾ ನಮ್ಮ ನಿಯಂತ್ರಣದಲ್ಲೂ ಇರುವುದಿಲ್ಲ. ಅನಿರೀಕ್ಷಿತ ತಿರುವುಗಳನ್ನು ಹಾಗೂ ಹೊಸ ಹೊಸ ಕಠಿಣ ಸವಾಲುಗಳನ್ನು ಎದುರಿಸಲು ಸದಾ ಸಜ್ಜಾಗಿರಬೇಕಾಗುತ್ತದೆ. ಈ ವೇಳೆ ಒಂದು ಕಡೆ ನಮ್ಮ ಪಡೆಗಳು ಗಡಿಯ ಹೊರಗಿನ ಸವಾಲುಗಳನ್ನು ನಿಭಾಯಿಸುತ್ತಿರುವಾಗ, ಗಡಿಯೊಳಗಿನ ಸಮಾಜವು ನೈಜ ಭಾವೈಕ್ಯದೊಂದಿಗೆ ಆರೋಗ್ಯವಾಗಿ, ಸುದೃಢವಾಗಿರುವಂತೆ ನೋಡಿಕೊಳ್ಳುವುದು, ದೇಶದ ಮುಂದಿರುವ ಅತಿದೊಡ್ಡ ಸವಾಲಾಗಿದೆ. ನಮ್ಮ ದೇಶದ ಬೃಹತ್ ಗಾತ್ರ ಮತ್ತು ಪ್ರಾಂತ, ಭಾಷೆ, ಧರ್ಮ, ಸಂಸ್ಕೃತಿ ಇತ್ಯಾದಿಗಳ ದೃಷ್ಟಿಯಿಂದ ಇಲ್ಲಿರುವ ಅಪಾರ ವೈವಿಧ್ಯವನ್ನು ಸಮರ್ಥವಾಗಿ ನಿಭಾಯಿಸುವ ಸವಾಲು ಸಾಕಷ್ಟು ಕಠಿಣ ಸ್ವರೂಪದ್ದಾಗಿದೆ. ಈ ಕಠಿಣ ಸವಾಲನ್ನು ನಿಭಾಯಿಸುವುದು, ನಮ್ಮ ದೇಶದ ಸಮಸ್ತ ನಾಗರಿಕರ, ಸ್ಥಳೀಯ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ನಾಯಕರ, ಸಾಹಿತಿಗಳ, ಕಲಾವಿದರ ಮಾಧ್ಯಮಗಳ ಮತ್ತು ಜನಮಾನಸದ ಮೇಲೆ ಸ್ವಲ್ಪವಾದರೂ ಪ್ರಭಾವ ಬಿೀರಬಲ್ಲ ಎಲ್ಲರ ಜಂಟಿ ಕರ್ತವ್ಯವಾಗಿದೆ.

ವಿಶೇಷವಾಗಿ, ದೇಶವು ಯುದ್ಧ ನಿರತವಾಗಿರುವಾಗ ಆಂತರಿಕ ಶಾಂತಿ ಮತ್ತು ಭದ್ರತೆಯ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿರಬೇಕಾಗುತ್ತದೆ. ಏಕೆಂದರೆ ಆಂತರಿಕ ಬಿರುಕುಗಳು ಬಾಹ್ಯ ಶತ್ರುವಿನ ಪಾಲಿಗೆ ವರದಾನವಾಗಿ ಬಿಡುತ್ತದೆ. ದುರದೃಷ್ಟವಶಾತ್ ಇಂದು ನಮ್ಮಲ್ಲಿ ಆಂತರಿಕ ಶತ್ರುಗಳ ಸಂಖ್ಯೆ ಕಡಿಮೆಯೇನಿಲ್ಲ. ತಮ್ಮ ಕುಬ್ಜ ಮನಸ್ಸು, ವಿಕೃತ ಚಿಂತನೆ ಮತ್ತು ಸೀಮಿತ ದೃಷ್ಟಿಗಳಿಗಾಗಿ ಕುಖ್ಯಾತರಾಗಿರುವ ಈ ವಿಘ್ನ ಸಂತೋಷಿ ಶತ್ರುಪಡೆಗಳು ಈಗಾಗಲೇ ಅಲ್ಲಲ್ಲಿ ಠಳಾಯಿಸುತ್ತಾ, ಕ್ರಿಮಿಗಳಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತ ಸಾಮಾಜಿಕ ಭಾವೈಕ್ಯವನ್ನು ನಾಶಮಾಡಲು ಶ್ರಮಿಸುತ್ತಿವೆ. ದೇಶದೊಳಗಿನ ನಾಗರಿಕರ ದೇಶಪ್ರೇಮವನ್ನು ಪ್ರಶ್ನಿಸುತ್ತಾ, ಸಾಹಿತಿಗಳು, ಪತ್ರಕರ್ತರು, ಬುದ್ಧಿಜೀವಿಗಳು, ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ಜನರನ್ನು ದೇಶದ್ರೋಹಿಗಳೆಂದು ದೂಷಿಸುತ್ತಾ, ಛೇಡಿಸುತ್ತಾ ಅಲೆಯುತ್ತಿರುವ ಈ ಮಂದಿ ಭಾರತೀಯ ಸಮಾಜವನ್ನು ಛಿದ್ರಗೊಳಿಸುವ ಪಾಕ್ ಅಜೇಂಡಾವನ್ನು ಅನುಷ್ಠಾನಿಸಲು ಹೊರಟಿದ್ದಾರೆ. ಇಂತಹ ದ್ರೋಹಿಗಳನ್ನು ಗುರುತಿಸಿ, ಅವರ ಕುಕೃತ್ಯಗಳ ಭೀಕರ ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಎಚ್ಚರ ಮೂಡಿಸಿ ಅಂಥವರನ್ನು ಹದ್ದುಬಸ್ತಿನಲ್ಲಿಡಬೇಕಾದ ಹೊಣೆ ನಮ್ಮ ಸರಕಾರ ಮತ್ತು ಸಮಾಜದ ಮೇಲಿದೆ. ಇವರನ್ನು ಸದೆಬಡಿದು ಸೋಲಿಸುವುದು ನಿಜವಾಗಿ ಪಾಕ್ ವಿರುದ್ಧದ ಯುದ್ಧ ಗೆಲ್ಲುವ ನ್ಮು ಕಾಯಕದ ಅವಿಭಾಜ್ಯ ಅಂಗವಾಗಿದೆ.

- ಪ್ರಧಾನ ಸಂಪಾದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News