‘ಸರ್ಜಿಕಲ್ ಸ್ಟ್ರೈಕ್’ನಿಂದ ಪಾರಾದ ಆದಿವಾಸಿಗಳು!

Update: 2019-03-02 06:59 GMT

 ಒಂದು ದೊಡ್ಡ ಅವಘಡ ಕೊನೆಯ ಕ್ಷಣದಲ್ಲಿ ತಪ್ಪಿದೆ. ಅದು ಪಾಕಿಸ್ತಾನ-ಭಾರತಕ್ಕೆ ಸಂಬಂಧಿಸಿದ ವಿಷಯವಲ್ಲ. ನಮ್ಮದೇ ನೆಲದಲ್ಲಿ, ನಮ್ಮದೇ ಲಕ್ಷಾಂತರ ಪ್ರಜೆಗಳನ್ನು ನಮ್ಮದೇ ಸರಕಾರ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿ ಬಲವಂತವಾಗಿ ಎತ್ತಂಗಡಿ ಮಾಡುವ ಯೋಜನೆಗೆ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಸುಪ್ರೀಂಕೋರ್ಟ್ ಆದೇಶದಿಂದಾಗಿ ಹತ್ತು ಲಕ್ಷಕ್ಕೂ ಅಧಿಕ ಆದಿವಾಸಿ ಕುಟುಂಬಗಳು ಬೀದಿಪಾಲಾಗಬೇಕಾಗುತ್ತಿತ್ತು. ಇವರೇನೂ ಪಾಕಿಸ್ತಾನದಿಂದ ಬಂದ ಉಗ್ರರಲ್ಲ. ಕಾಡನ್ನೇ ಮನೆಯಾಗಿಸಿಕೊಂಡು ತಲೆತಲಾಂತರದಿಂದ ಬದುಕುತ್ತಾ ಬಂದವರು. ನಿಜವಾದ ಅರ್ಥದಲ್ಲಿ ಕಾಡಿನ ಹಕ್ಕುದಾರರು. ಇವರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ಅನಿವಾರ್ಯವಾಗಿ ಸಮ್ಮತಿಯನ್ನು ನೀಡಬೇಕಾಯಿತು. ಯಾಕೆಂದರೆ, ಈ ಆದಿವಾಸಿಗಳ ಪರವಾಗಿ ವಾದಿಸಬೇಕಾಗಿದ್ದ ಸರಕಾರದ ವಕೀಲರು ನ್ಯಾಯಾಲಯದ ಕಲಾಪಗಳಿಗೇ ಹಾಜರಾಗಿರಲಿಲ್ಲ. ಅಥವಾ ಅವರು ಹಾಜರಾಗುವುದು ಸರಕಾರಕ್ಕೆ ಇಷ್ಟವಿರಲಿಲ್ಲ. ಅವರನ್ನು ಒಕ್ಕಲೆಬ್ಬಿಸಿ ಕಾಡನ್ನು ಬೃಹತ್ ಕಾರ್ಪೊರೇಟ್ ವಲಯಗಳಿಗೆ ಒಪ್ಪಿಸುವುದು ಸರಕಾರದ ಯೋಜನೆಯ ಭಾಗವಾಗಿತ್ತು. ಆದರೆ ಇದರ ದುಷ್ಪರಿಣಾಮದ ಗಾತ್ರದ ಕುರಿತಂತೆ ಸರಕಾರಕ್ಕೆ ಅರಿವಿರಲಿಲ್ಲ. ಯಾವಾಗ ನ್ಯಾಯಾಲಯದಿಂದ ಆದೇಶ ಹೊರಬಿತ್ತೋ, ದೇಶಾದ್ಯಂತ ಆದಿವಾಸಿಗಳು ಒಂದಾಗತೊಡಗಿದರು. ಈ ತೀರ್ಪಿನ ವಿರುದ್ಧ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈಶಾನ್ಯ ಭಾರತದಲ್ಲಿ ಆದಿವಾಸಿಗಳು ಸರಕಾರದ ವಿರುದ್ಧ ಸಂಘಟಿತವಾಗತೊಡಗಿದರು. ನಕ್ಸಲ್ ಉಗ್ರವಾದಿಗಳೂ ಇದನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಲು ಹವಣಿಸಿದರು. ಒಂದು ವೇಳೆ ಈ ಆದೇಶ ಜಾರಿಗೊಂಡಿದ್ದಿದ್ದರೆ ಅಪಾರ ಸಂಖ್ಯೆಯ ಆದಿವಾಸಿಗಳ ಹತ್ಯಾಕಾಂಡವೇ ನಡೆದು ಬಿಡುತ್ತಿತ್ತು. ಸರಕಾರ ಮತ್ತು ಆದಿವಾಸಿಗಳ ನಡುವೆ ದೊಡ್ಡದೊಂದು ಸಂಘರ್ಷ ಸೃಷ್ಟಿಯಾಗುತ್ತಿತ್ತು. ಈಗಾಗಲೇ ಪೌರತ್ವ ಮಸೂದೆ ಈಶಾನ್ಯ ಭಾರತದಲ್ಲಿ ಆಕ್ರೋಶವನ್ನು ಬಿತ್ತಿದೆ. ಅದರ ಬೆನ್ನಿಗೇ ಆದಿವಾಸಿಗಳನ್ನು ಬಹಿರಂಗವಾಗಿ ಎತ್ತಂಗಡಿ ಮಾಡಿದ್ದಿದ್ದರೆ ಅದು ಸೃಷ್ಟಿಸುವ ಅನಾಹುತಗಳೇ ಬೇರೆಯಿತ್ತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸರಕಾರಕ್ಕೆ ಒತ್ತಡ ಬಂದ ಬಳಿಕವಷ್ಟೇ ಅದು ಎಚ್ಚೆತ್ತು, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮರು ಮನವಿ ಸಲ್ಲಿಸಿತು. ಪರಿಣಾಮವಾಗಿ ಸುಪ್ರೀಂಕೋರ್ಟ್ ತಕ್ಷಣವೇ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಈ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘‘ಇಷ್ಟು ವರ್ಷ ನೀವು ನಿದ್ದೆಯಲ್ಲಿದ್ದಿರಾ?’’ ಎಂದು ಛೀಮಾರಿ ಹಾಕಿದೆ. ಕೇಂದ್ರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ರಾಜ್ಯ ಸರಕಾರಗಳ ಅಸಹಕಾರವೇ ಇದಕ್ಕೆ ಕಾರಣ ಎಂದು ಹೇಳಿಕೆ ನೀಡಿದೆ. ಸುಮಾರು ಹತ್ತು ಲಕ್ಷ ಆದಿವಾಸಿ ಕುಟುಂಬಗಳ ಕುರಿತಂತೆ ಸರಕಾರ ಎಷ್ಟರಮಟ್ಟಿಗೆ ಕಾಳಜಿಯನ್ನು ಹೊಂದಿದೆ ಎನ್ನುವುದನ್ನು ಈ ಬೆಳವಣಿಗೆಗಳು ಮನವರಿಕೆ ಮಾಡಿಸುತ್ತಿವೆ. ಆದಿವಾಸಿಗಳನ್ನು ಸರಕಾರ ತನ್ನ ಪ್ರಜೆಯಾಗಿ ಭಾವಿಸಿಕೊಂಡಿಲ್ಲ. ಅವರಿಗೆ ಕಾಡು ಬೇಕು, ಆದರೆ ಆದಿವಾಸಿಗಳು ಬೇಡ. ಕಾಡು ಎಂದರೆ ಬೆಲೆಬಾಳುವ ಮರಗಳು ಮತ್ತು ಅದರೊಳಗಿರುವ ಅಪಾರ ಗಣಿ ಸಂಪತ್ತು ಎಂದು ಸರಕಾರ ತಿಳಿದುಕೊಂಡಿದೆ. ಒಂದು ರೀತಿಯಲ್ಲಿ ಸರಕಾರದ ಈ ನಿಲುವು ಕಾಶ್ಮೀರದ ಕುರಿತಂತೆ ತಳೆದ ನಿಲುವಿನ ಜೊತೆಗೆ ಸಾಮ್ಯವನ್ನು ಹೊಂದಿದೆ. ಇಂದು ಭಾರತಕ್ಕೆ ಕಾಶ್ಮೀರ ಬೇಕು. ಆದರೆ ಕಾಶ್ಮೀರವೆಂದರೆ ಕೇವಲ ಭೌಗೋಳಿಕ ಗಡಿರೇಖೆಗಳಲ್ಲ. ಅಲ್ಲಿ ಬದುಕುತ್ತಿರುವ ಅಪಾರ ಸಂಖ್ಯೆಯ ಜನರೂ ಕಾಶ್ಮೀರದ ಭಾಗವಾಗಿದ್ದಾರೆ ಎನ್ನುವುದನ್ನು ನಮ್ಮ ನಾಯಕರು ಬಹುತೇಕ ಮರೆತಿದ್ದಾರೆ. ಸೇನೆಯಿಂದ ಅಲ್ಲಿ ನಡೆದಿರುವ ಅಪಾರ ದೌರ್ಜನ್ಯಗಳು ಕಾಶ್ಮೀರಿಗಳನ್ನು ಹಂತ ಹಂತವಾಗಿ ಮಾನಸಿಕವಾಗಿ ನಮ್ಮಿಂದ ದೂರವಾಗಿಸುತ್ತಾ ಹೋಗಿದೆ. ನಾವು ಕೋವಿ ಬಲದಿಂದ ಕಾಶ್ಮೀರವನ್ನು ನಮ್ಮದಾಗಿಸಲು ಯತ್ನಿಸುತ್ತಿದ್ದೇವೆ. ಇದರ ಅಂತಿಮ ಪರಿಣಾಮ ಏನು ಎನ್ನುವುದನ್ನು ನೋಡುತ್ತಿದ್ದೇವೆ.

  ಕಾಡು ಮತ್ತು ಆದಿವಾಸಿಗಳ ವಿಷಯದಲ್ಲೂ ಇದೇ ನಡೆಯುತ್ತಿದೆ. ಸರಕಾರಕ್ಕೆ ಕಾಡು ಬೇಕು. ಆದರೆ ಆದಿವಾಸಿಗಳು ಬೇಡ. ಅವರನ್ನು ಬಲವಂತವಾಗಿ ಎತ್ತಂಗಡಿ ಮಾಡಿದರೆ, ಕನಿಷ್ಟ ಯೋಗ್ಯ ಪುನರ್ವಸತಿಯ ವ್ಯವಸ್ಥೆ ಇದೆಯೇ ಎಂದರೆ ಅದೂ ಇಲ್ಲ. ಬರೇ ಕೋವಿಯ ಬಲದಿಂದ ಅವರನ್ನು ಎಬ್ಬಿಸುವುದಕ್ಕೆ ಸಾಧ್ಯವಿದೆಯೇ? ಅವರು ತಮ್ಮದೇ ಸರಕಾರದ ವಿರುದ್ಧ ದಂಗೆಯೇಳುವುದಿಲ್ಲವೇ? ಕಾಡು, ವನ್ಯಜೀವಿಗಳು, ಪರಿಸರ ರಕ್ಷಣೆ ಸರಕಾರದ ಪಾಲಿಗೆ ಒಂದು ನೆಪ. ಈ ದೇಶದಲ್ಲಿರುವ ಕಾಡುಗಳ ಮೇಲೆ ಕಾರ್ಪೊರೇಟ್ ಶಕ್ತಿಗಳ ಕಣ್ಣು ಬಿದ್ದಿದೆ. ಕಾಡು ಎನ್ನುವುದು ವ್ಯರ್ಥವಾಗಿ ಬಿದ್ದಿರುವ ಸಂಪತ್ತು ಎಂದು ಅವರು ಭಾವಿಸಿದ್ದಾರೆ. ಅಲ್ಲಿ ಗಣಿಗಾರಿಕೆಯನ್ನು ನಡೆಸಬೇಕಾದರೆ, ರೆಸಾರ್ಟ್‌ಗಳನ್ನು ಸ್ಥಾಪಿಸಬೇಕಾದರೆ ಮೊತ್ತ ಮೊದಲು ಆದಿವಾಸಿಗಳು ಆ ಸ್ಥಳದಿಂದ ತೊಲಗಬೇಕಾಗಿದೆ. ಕಾರ್ಪೊರೇಟ್ ಶಕ್ತಿಯ ಒತ್ತಡದಿಂದಲೇ ಸರಕಾರ, ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಆದಿವಾಸಿಗಳ ಪರವಾಗಿ ವಕೀಲರನ್ನು ಹಾಜರುಗೊಳಿಸಿರಲಿಲ್ಲ. ಇದೀಗ ತನ್ನ ತಪ್ಪಿಗಾಗಿ ಸುಪ್ರೀಂಕೋರ್ಟ್‌ನಲ್ಲಿ ಅವಮಾನವನ್ನು ಎದುರಿಸಬೇಕಾಯಿತು.
 ಈ ದೇಶದ ನಕ್ಸಲೀಯ ಇತಿಹಾಸವನ್ನು ನಾವು ಗಮನಿಸಿದರೆ, ಸೇನೆ, ಅರಣ್ಯಾಧಿಕಾರಿಗಳು ಆದಿವಾಸಿಗಳ ಜೊತೆಗೆ ನಡೆಸಿದ ಕ್ರೌರ್ಯಗಳನ್ನು ಗುರುತಿಸಬಹುದು. ಯಾವುದೇ ಅಕ್ಷರಗಳ ಅರಿವಿಲ್ಲ, ಕಾನೂನು ಕಟ್ಟಳೆಗಳ ಕುರಿತಂತೆ ವಿವರಗಳು ಗೊತ್ತಿಲ್ಲದ ಇವರನ್ನು ಮೋಸಗೊಳಿಸುವುದು ಸುಲಭ. ಸರಕಾರ ಇವರ ವಿರುದ್ಧ ನಿಂತಾಗ ನಕ್ಸಲರು ಇವರ ಪರವಾಗಿ ನಿಂತರು. ಪರಿಣಾಮವಾಗಿ ಆದಿವಾಸಿಗಳು ಒಂದೆಡೆ ನಕ್ಸಲರ ಕೈಯಲ್ಲಿ ಮಗದೊಂದೆಡೆ ಪೊಲೀಸರ ಕೈಯಲ್ಲಿ ಚಿತ್ರಹಿಂಸೆಯ ಬದುಕನ್ನು ನಡೆಸುವಂತಾಯಿತು. ಕರ್ನಾಟಕದಲ್ಲೂ ನಕ್ಸಲ್ ವಾದ ವಿಸ್ತರಣೆಗೊಳ್ಳಲು ಆದಿವಾಸಿಗಳ ಒಕ್ಕಲೆಬ್ಬಿಸುವಿಕೆಯೇ ಮುಖ್ಯ ಕಾರಣವಾಗಿತ್ತು. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶವನ್ನು ಅನುಷ್ಠಾನಕ್ಕೆ ಇಳಿಸಿದ್ದೇ ಆಗಿದ್ದರೆ ಭಾರತ ಇನ್ನಷ್ಟು ಹಿಂಸೆಗಳಿಗೆ ಸಾಕ್ಷಿಯಾಗಬೇಕಾಗಿತ್ತು. ಒಟ್ಟಿನಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿರುವುದು ಶ್ಲಾಘನೀಯ. ಕಾಡು ಆದಿವಾಸಿಗಳ ಹಕ್ಕು. ಅವರ ಬದುಕು ಅದನ್ನೇ ಅವಲಂಬಿಸಿಕೊಂಡಿದೆ. ಅಲ್ಲಿಂದ ಹೊರಹಾಕಿದರೆ ನೀರಿನಿಂದ ಹೊರ ತೆಗೆದ ಮೀನಿನಂತೆ ಅವರು ಚಡಪಡಿಸಬೇಕಾಗುತ್ತದೆ. ಒಂದು ವೇಳೆ ಅವರನ್ನು ಹೊರ ಹಾಕುವುದಾದರೂ, ಅವರ ಬದುಕನ್ನು ಗರಿಷ್ಠ ಮಟ್ಟದಲ್ಲಿ ಸಹ್ಯವಾಗಿಸುವ ಪುನರ್ವಸತಿ ಯೋಜನೆಯನ್ನು ರೂಪಿಸಬೇಕು. ಅದಕ್ಕಾಗಿ ಆದಿವಾಸಿ ಪರ ಸಂಘಟನೆಗಳನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News