ಕೊಲೆ ಆರೋಪಿಯನ್ನು ಮರಣದಂಡನೆಯಿಂದ ಪಾರು ಮಾಡಿತು ಆತನ ಕವನಗಳು!

Update: 2019-03-02 09:03 GMT

ಹೊಸದಿಲ್ಲಿ, ಮಾ.2: ಹಣಕ್ಕಾಗಿ ಬೇಡಿಕೆಯಿರಿಸಿ ಮಗುವೊಂದನ್ನು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಇಳಿಸಿದ ಅಪರೂಪದ ಪ್ರಕರಣ ವರದಿಯಾಗಿದೆ. ಅಪರಾಧಿ ಜೈಲಿನಲ್ಲಿರುವಾಗ ಬರೆದ ಕವನಗಳೇ ಸುಪ್ರೀಂ ಕೋರ್ಟಿನ ಈ ತೀರ್ಮಾನಕ್ಕೆ ಕಾರಣವಾಗಿದೆ.

ಅಪರಾಧಿ ಬರೆದ ಕವನಗಳು ಆತನಿಗೆ ತನ್ನ ತಪ್ಪಿನ ಅರಿವಾಗಿದೆ ಹಾಗೂ ಆತ ಈಗ ಸುಧಾರಿಸಿಕೊಂಡಿದ್ದಾನೆ ಎಂಬುದನ್ನು ಸೂಚಿಸುತ್ತದೆ ಎಂದು ಜಸ್ಟಿಸ್ ಎ.ಕೆ.ಸಿಕ್ರಿ, ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಹಾಗೂ ಜಸ್ಟಿಸ್ ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ಹೇಳಿದೆ.

‘‘ಅಪರಾಧಿ ಧ್ಯಾನೇಶ್ವರ್ ಸುರೇಶ್ ಬೋರ್ಕರ್ ನಡೆಸಿದ ಅಪರಾಧದ ತೀವ್ರತೆಯ ಅರಿವು ತನಗಿದೆ. ಆದರೆ ಆತ ಜೈಲಿನಲ್ಲಿ ಕುಳಿತುಕೊಂಡು ಬರೆದ ಕವನಗಳಿಂದಾಗಿ ಇದೊಂದು ಅಪರೂಪದಲ್ಲೇ ಅಪರೂಪದ ಪ್ರಕರಣದ ವಿಭಾಗದಲ್ಲಿ ಬರುವುದರಿಂದ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕಾಯಿತು’’ ಎಂದು ನ್ಯಾಯಾಲಯ ಹೇಳಿದೆ.

ಮೇಲಾಗಿ ಆತ ಈ ಅಪರಾಧ ನಡೆಸಿದಾಗ ಆತನ ವಯಸ್ಸು ಕೇವಲ 22 ಆಗಿತ್ತು ಹಾಗೂ ಆತ ಅದಾಗಲೇ 18 ವರ್ಷ ಜೈಲಿನಲ್ಲಿ ಕಳೆದಿದ್ದಾನೆಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿತಲ್ಲದೆ, ಆತ ಜೈಲಿನಲ್ಲಿದ್ದಾಗ ತೋರಿದ ಉತ್ತಮ ನಡತೆ ಹಾಗೂ ಆತ ವೃತ್ತಿಪರ ಕೊಲೆಗಾರನಾಗಿಲ್ಲದೇ ಇರುವ ಅಂಶಗಳನ್ನೂ ಪರಿಗಣಿಸಿದೆ.

‘‘ಆತ ಜೈಲಿನಲ್ಲಿರುವಾಗ ಬಿಎ ಪದವಿ ಪೂರೈಸಿದ್ದಾನೆ ಹಾಗೂ ಸುಧಾರಣೆಗೊಳ್ಳುವ ಲಕ್ಷಣ ತೋರಿಸಿದ್ದಾನೆ’’ ಎಂದೂ ನ್ಯಾಯಪೀಠ ಹೇಳಿತು.

ವಿಚಾರಣಾ ನ್ಯಾಯಾಲಯ ತನಗೆ ನೀಡಿದ ಮರಣ ದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಬೋರ್ಕರ್ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಪೀಲನ್ನು ಪರಿಗಣಿಸಿ ನ್ಯಾಯಾಲಯ ಆತನ ಶಿಕ್ಷೆಯ ಪ್ರಮಾಣವನ್ನು ಇಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News