ಕುಪ್ವಾರ :ಉಗ್ರರ ವಿರುದ್ಧ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಐವರು ಸಿಬ್ಬಂದಿ ಹುತಾತ್ಮ

Update: 2019-03-03 09:05 GMT

ಶ್ರೀನಗರ, ಮಾ.3: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ವಿರುದ್ಧ 60 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಭದ್ರತಾ ಪಡೆಯ ಐವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.

  ಶುಕ್ರವಾರ ಕುಪ್ವಾರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಸಿಆರ್‌ಪಿಎಫ್ ಯೋಧರೊಬ್ಬರು ಇಂದು ಮೃತಪಟ್ಟಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಟ್ಟು ಮೂವರು ಯೋಧರು, ಇಬ್ಬರು ಕಾಶ್ಮೀರ ಪೊಲೀಸರು ಸಾವನ್ನಪ್ಪಿದ್ದು, ಕಮಾಂಡಂಟ್ ಸಹಿತ 8 ಜನರಿಗೆ ಗಾಯವಾಗಿದೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರಾದ ಬಳಿಯ ಬಾಬಾಗುಂದ್ ಪ್ರದೇಶದ ಮನೆಯೊಂದರಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಕಳೆದ 60 ಗಂಟೆಗಳಲ್ಲಿ ರಾಜೌರಿ,ಪೂಂಚ್ ಹಾಗೂ ಕುಪ್ವಾರ ಜಿಲ್ಲೆಗಳಲ್ಲಿ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದೆ.

 ಕುಪ್ವಾರ ಜಿಲ್ಲೆಯಲ್ಲಿ ಮೂರನೇ ದಿನದ ಉಗ್ರರ ವಿರುದ್ದ ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಮಬ ಮಾಹಿತಿ ಲಭಿಸಿಲ್ಲ. ಕಳೆದ 3 ದಿನಗಳಲ್ಲಿ ಉಗ್ರರು ಅಡಗಿ ಕುಳಿತ್ತಿದ್ದಾರೆ ಎಂದು ಶಂಕಿಸಲಾದ 2 ರಿಂದ ಮೂರು ಮನೆಗಳನ್ನು ಭದ್ರತಾ ಪಡೆ ಧ್ವಂಸಗೊಳಿಸಿದೆ. ಭದ್ರತಾ ಸಿಬ್ಬಂದಿಗಳು ಹಲವು ಮನೆಗಳಿಗೆ ಹಾನಿ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಗುಂಡಿನ ಕಾಳಗದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ಜನರು ಮನೆ ಬಿಟ್ಟು ಹೊರ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News