ಸೋಶಿಯಲ್ ಮೀಡಿಯಾ ವೀರರೇ ನಿಮಗೆ ಯುದ್ಧ ಬೇಕಾದರೆ ಗಡಿಗೆ ಹೋಗಿ: ಹುತಾತ್ಮ ಯೋಧನ ಪತ್ನಿ

Update: 2019-03-03 10:42 GMT

ಹೊಸದಿಲ್ಲಿ, ಮಾ.3: ಭಾರತ-ಪಾಕಿಸ್ತಾನ ನಡುವಿನ ಉದ್ವಿಘ್ನತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೂರತ್ವ ಪ್ರದರ್ಶಿಸುವವರ ವಿರುದ್ಧ ಹುತಾತ್ಮ ಯೋಧನ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ಬುಡ್ಗಾಮ್ ನಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಸ್ವಾಡ್ರನ್ ಲೀಡರ್ ನಿನಾದ್ ಮಂದವ್ಗಾನೆಯವರ ಪತ್ನಿ ವಿಜೇತ ಈ ಬಗ್ಗೆ ಮಾತನಾಡಿದ್ದಾರೆ.

“ಸಾಮಾಜಿಕ ಜಾಲತಾಣ ಮತ್ತು ಟಿವಿಯಲ್ಲಿ ಹಲವು ವಿಷಯಗಳು ನಡೆಯುತ್ತಿವೆ. ಮಾಧ್ಯಮಗಳು ಕೆಲವೊಮ್ಮೆ ಜವಾಬ್ದಾರಿಯುತವಾಗಿ ಮತ್ತು ಕೆಲವೊಮ್ಮೆ ಜವಾಬ್ದಾರಿಯಿಲ್ಲದೆ ವರ್ತಿಸುತ್ತದೆ. ನೀವು ಘೋಷಣೆಗಳನ್ನು ಕೂಗುತ್ತೀರಿ. ಅದರ ಬದಲಾಗಿ ನನ್ನ ನಿನಾದ್ ಗಾಗಿ , ಪೈಲಟ್ ಅಭಿನಂದನ್ ಗಾಗಿ ಹಾಗು ಎಲ್ಲಾ ಹುತಾತ್ಮರಿಗಾಗಿ ಏನಾದರೂ ಮಾಡಬೇಕೆಂದಿದ್ದರೆ ಸಣ್ಣ ಕೆಲಸವೊಂದನ್ನು ಮಾಡಿ. ಒಂದೋ ನೀವು ಸೇನೆಗೆ ಸೇರಿ ಅಥವಾ ನಿಮ್ಮ ಕುಟುಂಬದ ಯಾರನ್ನಾದರೂ ಸೇರಿಸಿ. ನಿಮಗೆ ಸಾಧ್ಯವಿಲ್ಲದಿದ್ದರೆ ದೇಶಕ್ಕೆ ಸಹಾಯವಾಗುವ ಹಾಗೆ ನಿಮ್ಮ ಸುತ್ತಮುತ್ತಲು ಬದಲಾವಣೆ ತನ್ನಿ. ನಿಮ್ಮ ಪರಿಸರವನ್ನು ಸ್ವಚ್ಛವಾಗಿಡಿ, ರಸ್ತೆಗಳಲ್ಲಿ ಉಗುಳಬೇಡಿ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಹಾಗು ಯುವತಿಯರಿಗೆ ಕಿರುಕುಳ ನೀಡಬೇಡಿ” ಎಂದು ವಿಜೇತಾ ಹೇಳಿದ್ದಾರೆ.

“ನಮಗೆ ಯುದ್ಧ ಬೇಕಿಲ್ಲ. ಯುದ್ಧದ ಹಾನಿಗಳ ಬಗ್ಗೆ ನಿಮಗೆ ಅರಿವಿಲ್ಲ. ನಿನಾದ್ ರ ಸ್ಥಿತಿ ಇನ್ಯಾರಿಗೋ ಬರುವುದನ್ನು ನಾವು ಬಯಸುವುದಿಲ್ಲ. ಸೋಶಿಯಲ್ ಮೀಡಿಯಾ ವಾರಿಯರ್ ಗಳು ದಯವಿಟ್ಟು ನಿಲ್ಲಿಸಿ, ನಿಮಗೆ ಯುದ್ಧ ಬೇಕಾದರೆ ಗಡಿಗೆ ಹೋಗಿ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News